ಕೆಎಸ್ಸಾರ್ಟಿಸಿಗೆ 10 ಕೋಟಿ ರೂ.ಲಾಭ: ಗೋಪಾಲ್ ಪೂಜಾರಿ
ಬೆಂಗಳೂರು, ಮಾ. 2: ಕಳೆದ ವರ್ಷ 138.50ಕೋಟಿ ರೂ.ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 10.29 ಕೋಟಿ ರೂ.ಲಾಭದಲ್ಲಿದೆ ಎಂದು ಕೆಎಸ್ಸಾರ್ಟಿಸಿ ಅಧ್ಯಕ್ಷ ಹಾಗೂ ಶಾಸಕ ಗೋಪಾಲ್ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರ ಶಾಂತಿನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ಈ ವರ್ಷ 2712.90 ಕೋಟಿ ರೂ.ಸಾರಿಗೆ ಆದಾಯ, 451.97ಕೋಟಿ ರೂ.ಇತರೆ ಆದಾಯ ಸೇರಿದಂತೆ ಒಟ್ಟು 3154.58 ಕೋಟಿ ರೂ.ಗಳಿಸಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೆಎಸ್ಸಾರ್ಟಿಸಿ ಲಾಭ ದತ್ತ ಮುಖ ಮಾಡಿದ್ದು, 10 ಕೋಟಿ ರೂ.ಗಳಷ್ಟು ಲಾಭ ಗಳಿಸಿದೆ. ಇನ್ನೂ ಒಂದು ತಿಂಗಳು ಬಾಕಿ ಇದ್ದು, ಲಾಭದ ಪ್ರಮಾಣ ಕನಿಷ್ಠ 15 ಕೋಟಿ ರೂ.ಗಳಿಗೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದರು.
ಮುಂದಿನ ಬಾರಿಯೂ ಸಂಸ್ಥೆ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಈ ಸಂಬಂಧ ಈಗಾಗಲೇ ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ ಎಂದ ಅವರು, ಸಂಸ್ಥೆಯಲ್ಲಿ ಹೊಸ ಬಸ್‌ಗಳಿರುವ ಕಾರಣಕ್ಕೆ ವೆಚ್ಚ ಕಡಿತವಾಗಿ ಸಂಸ್ಥೆಯ ಲಾಭ ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೃಪ್ತಿ ತಂದಿದೆ: ಒಂದು ವರ್ಷದ ನನ್ನ ಅವಧಿಯಲ್ಲಿ ಸಾಕಷ್ಟು ಬದಲಾವಣೆ- ಸುಧಾರಣೆ ಮಾಡಿದ್ದೇನೆ. ಅಂದುಕೊಂಡ ಕೆಲಸ ಮಾಡಿದ ತೃಪ್ತಿ ಇದೆ. ಸಾಲು-ಸಾಲು ಪ್ರತಿಭಟನೆ, ಬಂದ್, ಗಲಾಟೆ, ಡೀಸೆಲ್ ಬೆಲೆ ಹೆಚ್ಚಳ, ವೇತನ ಹೆಚ್ಚಳದ ನಡುವೆಯೂ ಸಂಸ್ಥೆಯನ್ನ ಲಾಭದತ್ತ ಕೊಂಡೊಯ್ದಿರುವುದು ತೃಪ್ತಿ ತಂದಿದೆ ಎಂದು ಬಣ್ಣಿಸಿದರು.
ಸ್ವಚ್ಛತೆಗೆ ಆದ್ಯತೆ: ಕೆಎಸ್ಸಾಟಿಸಿ ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳ ಸ್ವಚ್ಛತೆಗೆ ಸುಲಭ್ ಇಂಟರ್ ನ್ಯಾಷನಲ್ ಗೆ ಶೌಚಾಲಯಗಳ ನಿರ್ವಹಣೆ ವಹಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ನಮಗೆ ಆದಾಯ ಬರಲ್ಲ, ಹೂಡಿಕೆಯೂ ಇಲ್ಲ. ಆದರೂ ನಿರ್ವಹಣೆ ವಹಿಸಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಉಮಾಶಂಕರ್ ತಿಳಿಸಿದರು.
ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ವೈಫೈ ವ್ಯವಸ್ಥೆ ತರಲಿದ್ದೇವೆ. 1500ಕ್ಕೂ ಹೆಚ್ಚು ಬಸ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಉಳಿದ ಬಸ್‌ಗಳಿಗೆ ಇನ್ನು 3 ತಿಂಗಳಲ್ಲಿ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಾಮಾನ್ಯ ಸಾರಿಗೆಯಲ್ಲಿ ಉಚಿತ ನೀರಿನ ಬಾಟಲ್ ವಿತರಣೆ ಪ್ರಸ್ತಾಪ ಇಲ್ಲ. ವೋಲ್ವೋ ಬಸ್‌ಗಳಲ್ಲಿ ದೂರ ಪ್ರಯಾಣವಿರಲಿದೆ. ಹೆಚ್ಚು ಪ್ರಯಾಣ ದರ ಇರಲಿದೆ, ಹೀಗಾಗಿ ಅವರಿಗೆ ನೀರು, ಬ್ಲಾಂಕೆಟ್ ಸೌಲಭ್ಯ ಕಲ್ಪಿಸಿದ್ದೇವೆ ಎಂದರು.
‘ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಪರಿಷ್ಕರಣೆ ಬಗ್ಗೆ ನಮಗೆ ಒಲವಿಲ್ಲ. ಇದು ಸಾರ್ವಜನಿಕರಿಗೆ ಸೇವೆ ಕಲ್ಲಿಸುವ ಸಂಸ್ಥೆಯೇ ಹೊರತು ಲಾಭದ ಉದ್ದಿಮೆಯಲ್ಲ. ವೆಚ್ಚವನ್ನು ನೋಡಿಕೊಂಡು ಇರುವ ವ್ಯವಸ್ಥೆಯಲ್ಲಿಯೇ ನಾವು ಲಾಭಕ್ಕೆ ಯತ್ನಿಸುತ್ತೇವೆ, ಮತ್ತೆ ಪ್ರಯಾಣದರ ಹೆಚ್ಚಳ ಮಾಡಲ್ಲ’
-ಗೋಪಾಲ್ ಪೂಜಾರಿ, ಕೆಎಸ್ಸಾರ್ಟಿಸಿ ಅಧ್ಯಕ್ಷ