ಬಿಜೆಪಿಯಿಂದ ಬೆಂಗಳೂರನ್ನು ರಕ್ಷಣೆ ಮಾಡಬೇಕು: ಸಚಿವ ಜಾರ್ಜ್

Update: 2018-03-02 15:47 GMT

ಬೆಂಗಳೂರು, ಮಾ.2: ಭಾರತೀಯ ಜನತಾ ಪಕ್ಷದ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಮಾಡದಿದ್ದರೂ ಬೆಂಗಳೂರು ರಕ್ಷಿಸಿ ಎಂದು ರ್ಯಾಲಿ ಮಾಡುತ್ತಿದ್ದಾರೆ. ಆದರೆ, ಮೊದಲು ಬಿಜೆಪಿಯಿಂದ ಬೆಂಗಳೂರನ್ನು ರಕ್ಷಣೆ ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಶುಕ್ರವಾರ ನಗರದ ಕೋಲಮಂಗಲದಲ್ಲಿ ಆಯೋಜಿಸಿದ್ದ ವಿವಿಧ ಶಂಕುಸ್ಥಾಪನಾ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಐದು ವರ್ಷಗಳ ಹಿಂದೆ ಬಿಬಿಎಂಪಿ ಪಾಲಿಕೆ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಅವರ ಸರಕಾರವಿದ್ದಾಗಲೇ ಬೆಂಗಳೂರು ನಗರ ಸಮಸ್ಯೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರರು ಹಣ ನೀಡುವುದಿಲ್ಲ ಎಂದು ನಗರದಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ನಮ್ಮ ಸರಕಾರದ ಅಧಿಕಾರದ ಅವಧಿಯಲ್ಲಿ ಬಿಬಿಎಂಪಿ 16 ಸಾವಿರ ಕೋಟಿ ರೂ. ಸೇರಿದಂತೆ ನಗರಾಭಿವೃದ್ಧಿಗೆ 23 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ನಗರಾಭಿವೃದ್ಧಿಗೆ ಅನುದಾನ ಕಲ್ಪಿಸಲು ಬೇಕಾದ ಫೈಲ್‌ಗಳು ನಮ್ಮ ಬಳಿ ಬರಲು ಕನಿಷ್ಠ 15 ತಿಂಗಳು ಕಾಲಾವಕಾಶ ಬೇಕಿತ್ತು. ಹೀಗಾಗಿ, ಮುಖ್ಯಮಂತ್ರಿ ಬಳಿ ಒಂದೇ ಬಾರಿ ಅನುದಾನ ನೀಡಿ ಎಂದು ಮನವಿ ಮಾಡಿದ್ದರಿಂದ 2 ವರ್ಷಕ್ಕೆ ಬೇಕಾಗುವಷ್ಟು ಅನುದಾನ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು.

ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರಕಾರದ ಮುಖ್ಯಮಂತ್ರಿ ಹಾಗೂ ಸಚಿವರು ಕೇವಲ ಕಾಟಾಚಾರಕ್ಕೆ ನಗರ ಪ್ರದಕ್ಷಿಣೆ ಮಾಡುತ್ತಿದ್ದ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ನಡೆದ ನಗರ ಪ್ರದಕ್ಷಿಣೆಯಲ್ಲಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೆ, ಹಲವಾರು ವಿಷಯಗಳನ್ನು ನನ್ನೊಂದಿಗೆ ಮಾತುಕತೆ ಮಾಡಿ, ಅದಕ್ಕೆ ಅಗತ್ಯವಾದ ಹಣಕಾಸು ನೀಡಿದ್ದಾರೆ ಹಾಗೂ ಆ ಕೆಲಸ ಮುಗಿದಿದೆಯಾ ಎಂದು ಮರು ಪರಿಶೀಲನೆ ಮಾಡುತ್ತಿದ್ದರು ಎಂದು ಸಚಿವರು ತಿಳಿಸಿದರು.

ಬೆಂಗಳೂರಿನಲ್ಲಿ ಮಳೆ ಬಂದಾಗ ಜನರು ಪ್ರಾಣ ಕಳೆದುಕೊಂಡಿದ್ದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಾಯಕರು, ಕೇಂದ್ರ ಸಚಿವರು ನಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ತಮಿಳುನಾಡು ಹಾಗೂ ಬಿಜೆಪಿ ಸರಕಾರ ಆಡಳಿತವಿರುವ ಮಧ್ಯಪ್ರದೇಶ, ಹರಿಯಾಣದಲ್ಲಿ ಯಾರೂ ಸತ್ತಿಲ್ಲವಾ ಎಂದು ಸಚಿವ ಜಾರ್ಜ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News