ಮಾ.7ರಂದು ಸರ್ವಪಕ್ಷಗಳ ಸಭೆ ಕರೆದ ಮುಖ್ಯಮಂತ್ರಿ?

Update: 2018-03-02 15:49 GMT

ಬೆಂಗಳೂರು, ಮಾ.2: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆ.16ರಂದು ನೀಡಿರುವ ತೀರ್ಪಿನ ಕುರಿತು ರಾಜ್ಯ ಸರಕಾರ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳಲು ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾ.7ರಂದು ಸರ್ವಪಕ್ಷಗಳ ಮುಖಂಡರ ಸಭೆಯನ್ನು ಕರೆದಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಮಂಡಲದ ಉಭಯ ಸದನಗಳ ವಿವಿಧ ಪಕ್ಷಗಳ ಮುಖಂಡರು, ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಸಂಸದರಿಗೂ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದ್ದು, ಸುಪ್ರೀಂಕೋರ್ಟ್‌ನ ತೀರ್ಪಿನಲ್ಲಿರುವ ಅಂಶಗಳ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಪ್ರಮಾಣದಲ್ಲಿ 14 ಟಿಎಂಸಿ ನೀರು ಸುಪ್ರೀಂಕೋರ್ಟ್ ಕಡಿಮೆ ಮಾಡಿದೆ. ಅಲ್ಲದೆ, ಬೆಂಗಳೂರಿಗೆ ಕುಡಿಯುವ ನೀರಿಗಾಗಿ 4.5 ಟಿಎಂಸಿ ನೀರು ಬಳಕೆಗೂ ಅವಕಾಶ ನೀಡಿದೆ. ಇದು ಮೇಲ್ನೋಟಕ್ಕೆ ರಾಜ್ಯಕ್ಕೆ ಸಮಾಧಾನಕರವಾಗಿದ್ದರೂ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು ಕೇಂದ್ರಕ್ಕೆ ನೀಡಿರುವ ಸೂಚನೆಯು ರಾಜ್ಯದ ಪಾಲಿಗೆ ಕಂಟಕವಾಗಬಹುದು ಎಂಬ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ 6 ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ, ರಾಜ್ಯ ಸರಕಾರವು ಈಗಾಗಲೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತನ್ನ ವಿರೋಧ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News