ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯದಂತೆ ತಡೆ: ಮೇಲ್ವಿಚಾರಕರ ನಡೆಗೆ ಕ್ಯಾಂಪಸ್ ಫ್ರಂಟ್ ಖಂಡನೆ

Update: 2018-03-02 16:42 GMT

ಬೆಂಗಳೂರು, ಮಾ.2: ಫ್ರೇಝರ್‌ಟೌನ್ ಸಮೀಪದ ಗುಡ್‌ವಿಲ್ ಪ್ರೌಢಶಾಲೆ ಮತ್ತು ಸಂಯುಕ್ತ ಪದವಿ ಕಾಲೇಜಿನಲ್ಲಿ ನಿಗದಿಯಾಗಿದ್ದ ಪರೀಕ್ಷೆಗೆ ಕಾರಣಾಂತರ ಗಳಿಂದ ತಡವಾಗಿ ಹಾಜರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನೀಡದ ಮೇಲ್ವಿಚಾರಕರ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು ಜಿಲ್ಲಾ ಸಮಿತಿಯು ಖಂಡಿಸಿದೆ.

ಸಂಚಾರ ದಟ್ಟಣೆಯ ಕಾರಣದಿಂದ ವಿದ್ಯಾರ್ಥಿಗಳು ತಡವಾಗಿದ್ದಾರೆಂದು ಗೊತ್ತಾಗಿದ್ದು ಅವರಿಗೆ ಪರೀಕ್ಷೆಯನ್ನು ನಿಷೇಧಿಸಿದ ಕ್ರಮ ಸರಿಯಲ್ಲ. ಬೆಂಗಳೂರಿನಂತಹ ಅತೀ ಹೆಚ್ಚಿನ ಸಂಚಾರದಟ್ಟಣೆಯ ನಗರಗಳಲ್ಲಿ, ಸ್ವಾಭಾವಿಕವಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಇಂತಹ ಸಂಕಷ್ಟಕ್ಕೆ ದಿನಂಪತ್ರಿ ಒಳಗಾಗುತ್ತಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಬೆಂಗಳೂರು ಜಿಲ್ಲಾಧ್ಯಕ್ಷ ಮುಬಾರಕ್‌ಖಾನ್ ಹೇಳಿದ್ದಾರೆ.

ಆದರೆ, ಗುಡ್‌ವಿಲ್ ಪ್ರೌಢಶಾಲೆಯಲ್ಲಿ ನಡೆದ ಘಟನೆಯು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆದುದರಿಂದ, ಸರಕಾರ ಮತ್ತು ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷೆ ರದ್ದಾದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸಲು ಅವಕಾಶ ಕೊಡಬೇಕು ಮತ್ತು ಮುಂದಿನ ಪರೀಕ್ಷೆಗಳು ಇಂತಹ ಪ್ರಕರಣಗಳು ಸಂಭವಿಸಿದಂತೆ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News