ಇಂಗ್ಲೆಂಡ್‌ಗೆ 4 ರನ್‌ಗಳ ರೋಚಕ ಜಯ

Update: 2018-03-03 18:38 GMT

ವೆಲ್ಲಿಂಗ್ಟನ್, ಮಾ.3: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಶತಕದ ಮೂಲಕ ಹೋರಾಟ ನಡೆಸಿದರೂ ನ್ಯೂಝಿಲೆಂಡ್ ಗೆಲುವಿನ ದಡ ಸೇರುವಲ್ಲಿ ವಿಫಲವಾಗಿದ್ದು, 4 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿದೆ.

ಕೊನೆಯ ಓವರ್‌ನಲ್ಲಿ ನ್ಯೂಝಿಲೆಂಡ್ ಗೆಲುವಿಗೆ 15 ರನ್ ಅಗತ್ಯವಿತ್ತು. ಆದರೆ ಕ್ರಿಸ್ ವೋಕ್ಸ್ ಎಸೆತದಲ್ಲಿ ವಿಲಿಯಮ್ಸನ್ 1 ಸಿಕ್ಸರ್ ಒಳಗೊಂಡ 10 ರನ್ ಗಳಿಸಿದರು. ಇದರೊಂದಿಗೆ ಇಂಗ್ಲೆಂಡ್ 4 ರನ್‌ಗಳ ರೋಚಕ ಗೆಲುವು ದಾಖಲಿಸಿ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲುವಿಗೆ 235 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 230 ರನ್ ಗಳಿಸಿತು.

ಕೇನ್ ವಿಲಿಯಮ್ಸನ್ ಔಟಾಗದೆ 112 ರನ್ (143ಎ, 6ಬೌ,2ಸಿ) ಗಳಿಸಿದರು.

 ನ್ಯೂಝಿಲೆಂಡ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ಅವರು ಕ್ರಿಸ್ ವೋಕ್ಸ್ ಎಸೆತದಲ್ಲಿ ಟಾಮ್ ಕುರನ್ ಅವರಿಗೆ ಕ್ಯಾಚ್ ನೀಡಿದರು. ಆಗ ತಂಡದ ಸ್ಕೋರ್ 12 ಆಗಿತ್ತು.

ಎರಡನೇ ವಿಕೆಟ್‌ಗೆ ವಿಲಿಯಮ್ಸನ್ ಮತ್ತು ಕಾಲಿನ್ ಮುನ್ರೊ(49) 68 ರನ್‌ಗಳ ಜೊತೆಯಾಟ ನೀಡಿದರು. 17.3ನೇ ಓವರ್‌ನಲ್ಲಿ ಆದಿಲ್ ರಶೀದ್ ಅವರು ನ್ಯೂಝಿಲೆಂಡ್‌ಗೆ ಇನ್ನೊಂದು ಆಘಾತ ನೀಡಿದರು. ಚೆನ್ನಾಗಿ ಆಡುತ್ತಿದ್ದ ಮುನ್ರೊ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಮುನ್ರೊ 49 ರನ್(62ಎ,7ಬೌ) ಗಳಿಸಿ ಪೆವಿಲಿಯನ್ ಸೇರಿದ ಬಳಿಕ ನ್ಯೂಝಿಲೆಂಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಪ್ರಹಾರಕ್ಕೆ ನ್ಯೂಝಿಲೆಂಡ್ ತತ್ತರಿಸಿತು. 2 ವಿಕೆಟ್‌ಗೆ 80 ರನ್ ಗಳಿಸಿದ್ದ ಕಿವೀಸ್ ಕೇವಲ 23 ರನ್ ಸೇರಿಸುವಷ್ಟರಲ್ಲಿ ಮತ್ತೆ 4 ವಿಕೆಟ್ ಕಳೆದುಕೊಂಡಿತು. ಮಾರ್ಕ್ ಚಾಪ್‌ಮ್ಯಾನ್(8), ವಿಕೆಟ್ ಕೀಪರ್ ಟಾಮ್ ಲಥಾಮ್(0), ಹೆನ್ರಿ ನಿಕೊಲ್ಸ್(0) ಮತ್ತು ಕಾಲಿನ್ ಗ್ರಾಂಡ್‌ಹೋಮ್(3) ಔಟಾದರು.

ನ್ಯೂಝಿಲೆಂಡ್ ಸೋಲಿನ ದವಡೆಗೆ ಸಿಲುಕಿತು. ಈ ಹಂತದಲ್ಲಿ ನಾಯಕ ಕೇನ್ ವಿಲಿಯಮ್ಸನ್‌ಗೆ ಮಿಚೆಲ್ ಸ್ಯಾಂಟ್ನೆರ್ ಜೊತೆಯಾದರು. ವಿಲಿಯಮ್ಸನ್ 11ನೇ ಶತಕ ದಾಖಲಿಸಿದರು. ವಿಲಿಯಮ್ಸನ್ ಮತ್ತು ಸ್ಯಾಂಟ್ನೆರ್ 7ನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸುವ ನಿರೀಕ್ಷೆ ಮೂಡಿಸಿದ್ದರು. 45.2ನೇ ಓವರ್‌ನಲ್ಲಿ ವೋಕ್ಸ್ ಅವರು ಸ್ಯಾಂಟ್ನರ್‌ನ್ನು ರನೌಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಸ್ಯಾಂಟ್ನೆರ್ 41 ರನ್ ಗಳಿಸಿ ಪೆವಿಲಿಯನ್ ಸೇರಿದರು. 45.2 ಓವರ್‌ಗಳಲ್ಲಿ 199 ರನ್ ಗಳಿಸಿದ್ದ ನ್ಯೂಝಿಲೆಂಡ್ 4.4 ಓವರ್‌ಗಳಲ್ಲಿ 36 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು. ವಿಲಿಯಮ್ಸನ್ ಹೋರಾಟ ಮುಂದುವರಿಸಿದರು. ಟಿಮ್ ಸೌಥಿ ಅವರು ವಿಲಿಯಮ್ಸನ್‌ಗೆ ಬೆಂಬಲ ನೀಡಿದರು. ಆದರೆ ಸೌಥಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವೋಕ್ಸ್ ಅವಕಾಶ ನೀಡಲಿಲ್ಲ. 47.2ನೇ ಓವರ್‌ನಲ್ಲಿ ಸೌಥಿ(7) ಔಟಾದರು. ಆದರೆ ಸೌಥಿ 1 ಬೌಂಡರಿ ಬಾರಿಸಿದರೂ 8 ಎಸೆತಗಳಲ್ಲಿ 7 ರನ್ ಸೇರಿಸಿದರು.

ಅಂತಿಮ ಓವರ್‌ನಲ್ಲಿ ವಿಲಿಯಮ್ಸನ್ ಮತ್ತು ಐಶ್ ಸೋಧಿ 15 ರನ್‌ಗಳ ಸವಾಲು ಪಡೆದರು. ವಿಲಿಯಮ್ಸನ್ 11 ರನ್ ಸೇರಿಸಿದರು. ವೋಕ್ಸ್ ಅವರು ವಿಲಿಯಮ್ಸನ್‌ಗೆ ಗೆಲುವಿನ ರನ್ ಬಾರಿಸಲು ಅವಕಾಶ ನೀಡಲಿಲ್ಲ. ಇಂಗ್ಲೆಂಡ್ 234: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 234 ರನ್ ಗಳಿಸಿ ಆಲೌಟಾಗಿತ್ತು.

 ನಾಯಕ ಇಯಾನ್ ಮೊರ್ಗನ್(48) ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು. ಜೇಸನ್ ರಾಯ್(15), ಜೋನಿ ಬೈರ್‌ಸ್ಟ್ಟೊವ್(19), ಜೋ ರೂಟ್(20), ಬೆನ್ ಸ್ಟೋಕ್ಸ್(39), ಜೋಸ್ ಬಟ್ಲರ್(29), ಮೊಯಿನ್ ಅಲಿ(23), ಕ್ರಿಸ್ ವೋಕ್ಸ್(16), ಆದಿಲ್ ರಶೀದ್(11) ಎರಡಂಕೆಯ ಕೊಡುಗೆ ನೀಡಿದರು.

ಸಂಕ್ಷಿಪ್ತ ಸ್ಕೋರ್ ವಿವರ

►ಇಂಗ್ಲೆಂಡ್ 50 ಓವರ್‌ಗಳಲ್ಲಿ ಆಲೌಟ್ 234(ಮೊರ್ಗನ್ 48, ಸ್ಟೋಕ್ಸ್ 39; ಸೋಧಿ 53ಕ್ಕೆ 3, ಬೌಲ್ಟ್ 47ಕ್ಕೆ 2).

►ನ್ಯೂಝಿಲೆಂಡ್ 50 ಓವರ್‌ಗಳಲ್ಲಿ 230/8

( ವಿಲಿಯಮ್ಸನ್ ಔಟಾಗದೆ 112, ಮುನ್ರೊ 49, ಸ್ಯಾಂಟ್ನೆರ್ 41; ಮೊಯಿನ್ ಅಲಿ 36ಕ್ಕೆ 3, ರಶೀದ್ 34 ಕ್ಕೆ 2, ವೋಕ್ಸ್ 40ಕ್ಕೆ 2).

►ಪಂದ್ಯಶ್ರೇಷ್ಠ: ಮೊಯಿನ್ ಅಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News