ಸ್ತ್ರೀವಾದಿ ಸಾಹಿತ್ಯದ ವಿಜಯಾ ‘ದಬ್ಬೆ’

Update: 2018-03-03 18:53 GMT

ಕನ್ನಡ ಸ್ತ್ರೀವಾದಿ ಸಾಹಿತ್ಯ ಮಾರ್ಗದ ಪ್ರವರ್ತಕ ಹೆಜ್ಜೆಗಳಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರದು ಅಳಿಸಲಾಗದ ಹೆಗ್ಗುರುತು. ಬಿದಿರು ದಬ್ಬೆಗೆ ಇರುವ ಜೀವಶಕ್ತಿ, ಆಸರೆಯಾಗಿ ನಿಲ್ಲುವ ಅದರ ಸಾಮರ್ಥ್ಯ ಪ್ರಕೃತಿಯ ಸೋಜಿಗಗಳಲ್ಲೊಂದು. ಎಂದೇ ವಿಜಯಾ ಅವರ ಹೆಸರಿಗೆ ಅಂಟಿಕೊಂಡಿರುವ ‘ದಬ್ಬೆ’ ಅವರ ಸ್ತ್ರೀವಾದಿ ಸಾಹಿತ್ಯ ನಿರ್ಮಿತಿಯ ಹಿನ್ನೆಲೆಯಲ್ಲಿ ಅವರ ಅನ್ವರ್ಥ ನಾಮವೂ ಹೌದು.


ಮಹಿಳೆಯರು ರಚಿಸಿದ್ದೆಲ್ಲ ಮಹಿಳಾ ಸಾಹಿತ್ಯ ಎನ್ನುವುದಾದಲ್ಲಿ ಕನ್ನಡದಲ್ಲಿ ಮಹಿಳಾ ಸಾಹಿತ್ಯ ಸಮೃದ್ಧವಾಗಿ ಸೃಷ್ಟಿಯಾಗಿದೆ.ಮಹಿಳೆಯರ ಬರಹಗಳನ್ನು ಸ್ತ್ರೀವಾದಿ ಸಾಹಿತ್ಯ ಎನ್ನುವ ಹೊಸ ಪರಿಕಲ್ಪನೆಯಿಂದ ನೋಡಿದಾಗ ನಾವು ಇಷ್ಟೇ ಧಾರಾಳವಾಗಿರಲಾಗದು. ಮಹಿಳಾ ವಿಮೋಚನೆಯನ್ನೇ ಮುಖ್ಯ ಆಶಯವಾಗುಳ್ಳ ಸ್ತ್ರೀವಾದಿ ಸಾಹಿತ್ಯ ಕಳೆದ ಶತಮಾನದ ಅರುವತ್ತು ಎಪ್ಪತ್ತನೇ ದಶಕಗಳಿಂದ ಹೆಚ್ಚಾಗಿ ಕೇಳಿಬರುತ್ತಿರುವ ಮಾತು. ಕನ್ನಡ ಸಾಹಿತ್ಯಕ್ಕೆ ಸ್ತ್ರೀವಾದಿ ಸಾಹಿತ್ಯವೆಂಬ ಹೊಸ ಆಯಾಮವೊಂದು ಜೋಡಣೆಯಾದದ್ದು ಇಪ್ಪತ್ತನೆ ಶತಮಾನದ ಅರವತ್ತು-ಎಪ್ಪತ್ತನೇ ದಶಕಗಳ ಕಾಲಮಾನದಿಂದ. ಸನಾತನ ಧರ್ಮದಲ್ಲಿ ಸೆರೆಯಾದ ಮಹಿಳೆಯರ ಕಷ್ಟಕೋಟಲೆಗಳಿಂದ ಬಿಡುಗಡೆ ಮತ್ತು ಸ್ತ್ರೀ ಸ್ವಾತಂತ್ರ್ಯದ ಹಂಬಲ ಕುರಿತ ಸಾಹಿತ್ಯ ರಚನೆ ಹತ್ತೊಂಬತ್ತನೇ ಶತಮಾನದ ಆದಿಯಲ್ಲೇ ನಂಜನಗೂಡು ತಿರುಮಲಾಂಬ ಅವರಿಂದ ಶುರುವಾಯಿತಾದರೂ, ನವ್ಯ-ಬಂಡಾಯ-ದಲಿತ ಚಳವಳಿಗಳಂತೆ, ಕನ್ನಡ ಸಾಹಿತ್ಯದಲ್ಲಿ ಅದು ಒಂದು ಹೊಸ ಮಾರ್ಗವಾಗಿ ಸ್ಪಷ್ಟವಾಗಿ ಕಾಣಿಸಿಕೊಂಡದ್ದು ಇಪ್ಪತ್ತನೇ ಶತಮಾನ ಉತ್ತರಾರ್ಧದಲ್ಲೇ. ಮಹಿಳಾ ವಿಮೋಚನೆಯ ಒಂದು ಸಂಘಟನೆಯಾಗಿ ಮತ್ತು ಸಾಹಿತ್ಯದಲ್ಲಿ ಸ್ತ್ರೀವಾದಿ ಅಭಿವ್ಯಕ್ತಿ ಮಾರ್ಗವಾಗಿ ಪ್ರಕಟಗೊಂಡ ಕನ್ನಡ ಸಾಹಿತ್ಯದ ಈ ಹೊಸ ಆಯಾಮದ ಪ್ರವರ್ತಕ ಲೇಖಕಿಯರಲ್ಲಿ ಮೊದಲಿಗರು ಇತ್ತೀಚೆಗಷ್ಟೆ (23-02-2018)ನಮ್ಮನ್ನಗಲಿದ ಶ್ರೀಮತಿ ವಿಜಯಾ ದಬ್ಬೆಯವರು.

ವಿಜಯಾ ದಬ್ಬೆ ಪ್ರಥಮತಃ ಸೃಜನಶೀಲ ಲೇಖಕಿ. ನಂತರ ವಿಚಾರವಾದಿ, ಹೋರಾಟಗಾರ್ತಿ ಇತ್ಯಾದಿ. ಕವಿಯಾಗಿ ನವ್ಯೋತ್ತರ ಕಾವ್ಯ ಸಂದರ್ಭದಲ್ಲಿ ಗಮನಾರ್ಹ ಕಾವ್ಯ ರಚಿಸಿದವರು.ಸಂಶೋಧನೆ, ಗ್ರಂಥ ಸಂಪಾದನೆ, ವಿಮರ್ಶೆ-ಹೀಗೆ ಸಾಹಿತ್ಯದ ಇತರ ಪ್ರಕಾರಗಳಲ್ಲೂ ಗಣನೀಯ ಕೃತಿಗಳ ಲೇಖಕಿಯಾಗಿ ಸಾಹಿತ್ಯಾಸಕ್ತರ ಗಮನ ಸೆಳೆದವರು. ಮಿಗಿಲಾಗಿ ಮಹಿಳಾ ಸಾಹಿತ್ಯದ ಓದು ಮತ್ತು ಬರವಣಿಗೆಗಳಿಗೆ ಸ್ತ್ರೀವಾದದ ಹೊಸ ಕಾಣ್ಕೆಯನ್ನು ಕಂಡುಕೊಂಡವರು ಹಾಗೂ ಸ್ತ್ರೀ ವಿಮೋಚನಾ ಚಳವಳಿಯ ಕ್ರಿಯಾವಾದಿ ಕಾರ್ಯಕರ್ತರು.ಇವೆಲ್ಲ ಕೂಡಿಯೇ ವಿಜಯಾ ದಬ್ಬೆಯವರ ರಚನೆಗಳು ಕನ್ನಡದಲ್ಲಿ ಸ್ತ್ರೀವಾದಿ ಸಾಹಿತ್ಯ ಎಂಬ ಹೊಸ ಮಾರ್ಗದ ಅನ್ವೇಷಣೆಯ ಪ್ರಯತ್ನವಾಗಿ ಮುಖ್ಯವಾಗುತ್ತವೆ.
ವಿಜಯಾ ದಬ್ಬೆಯವರು ಜನಿಸಿದ್ದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದಬ್ಬೆ ಗ್ರಾಮದಲ್ಲಿ. ತಂದೆ ಕೃಷ್ಣ ಮೂರ್ತಿ, ತಾಯಿ, ಶ್ರೀಮತಿ ಸೀತಾಲಕ್ಷ್ಮೀ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಳಸಾಪುರ ಮತ್ತು ಜಾವಗಲ್‌ಗಳಲ್ಲಿ. ಹಾಸನ, ಮೈಸೂರುಗಳಲ್ಲಿ ಪದವಿ, ಸ್ನಾತಕೋತ್ತರ ಶಿಕ್ಷಣ. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಡಾಕ್ಟರೇಟ್ ಪದವಿಗೆ ಆರಿಸಿಕೊಂಡದ್ದು ನಾಗಚಂದ್ರನ ಕೃತಿಗಳ ಅಧ್ಯಯನ. 1973ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭ.

ವಿಜಯಾ ದಬ್ಬೆ ಅವರ ಕಾವ್ಯ ಬಹುತೇಕ ಸ್ತ್ರೀ ಕೇಂದ್ರಿತವಾದದ್ದು. ಸ್ತ್ರೀಯ ಅಸ್ಮಿತೆ ಮತ್ತು ಸ್ತ್ರೀ ಶೋಷಣೆ ಈ ಎರಡು ನೆಲೆಗಳಲ್ಲಿ ವಿಜಯಾ ಅವರ ಕವನಗಳು ನಮ್ಮ ಬದುಕು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ವಿಮರ್ಶೆಯ ನಿಕಷಕ್ಕೆ ಒಡ್ಡುತ್ತವೆ. ‘ಇರುತ್ತವೆ’ (1975) ವಿಜಯಾ ದಬ್ಬೆ ಅವರ ಪ್ರಥಮ ಕವನ ಸಂಕಲನ. ಮಹಿಳೆಯ ಅಸ್ಮಿತೆಯನ್ನು ನಿರಾಕರಿಸಿ, ರಕ್ಷಣೆಯ ನೆಪದಲ್ಲಿ ಹೆಣ್ಣನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವ ವ್ಯವಸ್ಥೆಯನ್ನು ಬಯಲುಮಾಡುವುದು ಈ ಸಂಕಲನದ ಬಹುಪಾಲು ಕವನಗಳ ಮುಖ್ಯ ದನಿ. ನಂತರದ ವರ್ಷಗಳಲ್ಲಿ ‘ನೀರು ಲೋಹದ ಚಿಂತೆ’(1985) ಮತ್ತು ‘ತಿರುಗಿ ನಿಂತ ಪ್ರಶ್ನೆ (1995) ಪ್ರಕಟಗೊಂಡವು. ಪಾರಂಪರಿಕ ಸಮಾಜದಲ್ಲಿನ ಸ್ತ್ರೀ ಪಾತ್ರ ಕುರಿತ ಪರಿಕಲ್ಪನೆಯಲ್ಲಿ ಬದಲಾವಣೆಗೆ ಆಗ್ರಹಿಸುವ ಸ್ತ್ರೀ ಹಕ್ಕೊತ್ತಾಯದ ಪ್ರಣಾಳಿಕೆ ಎಂದು ಅರ್ಥೈಸಲಾಗುವ ‘ನೀರು ಮತ್ತು ಲೋಹ’ ಸಂಕಲನದಲ್ಲಿ ಗತಕಾಲ ಮತ್ತು ವರ್ತಮಾನ ಕಾಲಗಳಲ್ಲಿನ ಸಾಮಾಜಿಕ ಕ್ರೌರ್ಯವನ್ನು ಚಾರಿತ್ರಿಕ ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದೆ ಎಂದು ವಿಮರ್ಶಕರ ಅಂಬೋಣ.

ಶೀರ್ಷಿಕೆಯ ಸಾಂಕೇತಿಕ ಮಹತ್ವದಿಂದಲೇ ನಮ್ಮನ್ನು ಆಕರ್ಷಿಸುವ ಈ ಸಂಕಲನದ ಕವಿತೆಗಳು, ಚರಿತ್ರೆಯಲ್ಲಿ ಲೋಹದ ಸ್ಥಗಿತತೆಯೂ, ಆವಿಯಾಗುವ ನೀರಿನ ಚಲನಶೀಲತೆಯೂ ಏಕಕಾಲದಲ್ಲಿ ಘಟಿಸುತ್ತಿರುವ ನೈಸರ್ಗಿಕ/ಸಾಮಾಜಿಕ ವಿಪರ್ಯಾಸವನ್ನು ಪರಾಮರ್ಶಿಸುತ್ತವೆ. ನೀರು ಮತ್ತು ಲೋಹ ಬದುಕಿನಲ್ಲಿ ಎಲ್ಲರ, ವಿಶೇಷವಾಗಿ ಸ್ತ್ರೀಯರ, ಆಸೆ-ಅಪೇಕ್ಷೆಗಳ ಸಂಕೇತ. ಎಂದೇ ಮಹಿಳಾ ಹೋರಾಟಗಳಲ್ಲಿ ಇದು ಮುಖ್ಯ ವಿಷಯವಾಗುತ್ತದೆ ಎನ್ನುವುದು ಒಪ್ಪತಕ್ಕ ಮಾತು. ಮೊದಲಿಗೆ ಮಹಿಳೆ ತನ್ನತನವನ್ನು ಅರಿತುಕೊಳ್ಳುವುದು, ತನ್ನ ಬೇಕುಬೇಡಗಳನ್ನು, ಅಗತ್ಯಗಳು-ಆಸೆಗಳನ್ನು ಖಚಿತವಾಗಿ ಕಂಡುಕೊಳ್ಳುವುದು, ನಂತರ ಅವುಗಳ ಈಡೇರಿಕೆಗಾಗಿ ಕ್ರಿಯಾಶೀಲಳಾಗುವುದು-ಈ ಒಂದು ಚಿಂತನಾ ಕ್ರಮದಲ್ಲಿ ಈ ಸಂಕಲನದ ಕವನಗಳ ಬೆಳವಣಿಗೆಯಿದೆ. ಎಂದೇ ಕೆಲವರಿಗೆ ‘ನೀರು ಲೋಹದ ಚಿಂತೆ’ ಸ್ತ್ರೀವಾದಿ ಆಂದೋಲನದ ಘೋಷವಾಕ್ಯವಾಗಿ ಕಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

‘ತಿರುಗಿ ನಿಂತ ಪ್ರಶ್ನೆ’ಯಲ್ಲಿ-ನವ ವಸಾಹತೀಕರಣದ ಹಿನ್ನೆಲೆಯಲ್ಲಿ ಸ್ತ್ರೀ-ಪುರುಷರ ಸಮಸ್ಯೆ, ಸಂದಿಗ್ಧತೆಗಳನ್ನು ಶೋಧಿಸುವ ಪ್ರಯತ್ನವನ್ನು ಕಾಣುತ್ತೇವೆ. ವಿಮರ್ಶೆ, ಗ್ರಂಥಸಂಪಾದನೆ, ಸಂಶೋಧನೆಗಳಲ್ಲೂ ವಿಜಯಾ ದಬ್ಬೆ ಅವರ ಕೊಡುಗೆ ಗಮನಾರ್ಹವಾದುದು. ‘ನಯಸೇನ’(1977), ‘ಸಂಪ್ರತಿ’(1977) ಹಾಗೂ ‘ಮಹಿಳೆ ಮತ್ತು ಮಾನವತೆ’ ವಿಜಯಾ ಅವರ ವಿಮರ್ಶಾ ಕೃತಿಗಳಾದರೆ ನಾಗಚಂದ್ರ ಒಂದು ಅಧ್ಯಯನ’(1982),‘ಶ್ಯಾಮಲಾ ಸಂಚಯ’(1988) ‘ಸಾರಸರಸ್ವತಿ’(1996) ಸಂಶೋಧನಾ ಕೃತಿಗಳು. ‘ಸಾನಂದ ಗಣೇಶ ಸಾಂಗತನ’(1976) ಮತ್ತು ‘ನಾಗಚಂದ್ರ’(1996),‘ಹಿತೈಷಿಣಿಯ ಹೆಜ್ಜೆಗಳು’ ಸಂಪಾದಿತ ಕೃತಿಗಳು.‘ಮಹಿಳೆ-ಸಾಹಿತ್ಯ-ಸಮಾಜ’(1989), ‘ನಾರಿ ಮತ್ತು ದಾರಿ’ ಮಹಿಳಾ ಅಧ್ಯಯನದ ಗಂಭೀರ ಕೃತಿಗಳು.

ಮಹಿಳೆಯರ ಶೋಷಣೆಯ ಬೇರುಗಳನ್ನು ಶೋಧಿಸುವುದು ವಿಜಯಾ ದಬ್ಬೆಯವರ ಕಾವ್ಯದ ಮುಖ್ಯ ಆಶಯವಾಗಿರುವಂತೆ ವಿಮರ್ಶೆಯಲ್ಲೂ ಅದೇ ಕಾಳಜಿ ಪ್ರಧಾನವಾಗಿರುವುದು ಅವರ ಸ್ತ್ರೀವಾದಿ ಚಿಂತನೆಗೆ ಅನುಗುಣವಾಗಿಯೇ ಇದೆ. ಎಂದೇ ನಾಗಚಂದ್ರನ ಕೃತಿಗಳಲ್ಲಿ ಸಹಜವಾಗಿಯೇ ಅವನ ‘ರಾಮಚಂದ್ರ ಚರಿತ ಪುರಾಣ’ ವಿಜಯಾ ಅವರ ವಿಶೇಷ ಗಮನ ಸೆಳೆದಿದೆ. ಇಲ್ಲಿ ನಯಸೇನನ ಸೀತೆಯ ಪಾತ್ರವನ್ನು ಸ್ತ್ರೀವಾದಿ ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ. ವಿಜಯಾ ಅವರ ವಿಮರ್ಶಾ ಕೃತಿಗಳಲ್ಲೂ ಸ್ತ್ರೀವಾದಿ ದೃಷ್ಟಿಕೋನವೇ ಢಾಳವಾಗಿದೆ.ಮಹಿಳಾ ಸಾಹಿತ್ಯವನ್ನು ಶುದ್ಧ ಸಾಹಿತ್ಯದ ಮಾನದಂಡಗಳಿಂದ ನೋಡದೆ, ಸ್ತ್ರೀ ಸಂವೇದನೆಯನ್ನು ರೂಪಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡಬೇಕೆಂಬುದು ಅವರ ದೃಢ ನಿಲುವು. ಹಿತೈಷಿಣಿ ಹೆಜ್ಜೆಗಳು, ಶ್ಯಾಮಲಾ ಸಂಚಯ, ಸರಸ್ವತಿ ದೇವೀ ಗೌಡರ ‘ಸಾಹಿತ್ಯ ವಾಚಿಕೆ’ ಮೊದಲಾದ ಕೃತಿಗಳ ಪರಾಮರ್ಶೆ ಅವರ ಈ ನಿಲುವಿನ ಪ್ರಾಯೋಗಿಕ ವಿಮರ್ಶೆಯೇ ಆಗಿದೆ.

ವ್ಯಕ್ತಿ ಚಿತ್ರ, ಪ್ರವಾಸ ಸಾಹಿತ್ಯ ಪ್ರಕಾರಗಳಲ್ಲೂ ವಿಜಯಾ ದಬ್ಬೆಯ ವರು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ಅನುಪಮಾ ನಿರಂಜನ’ ಮತ್ತು ‘ಮೇರಿ ಮೆಕ್ ಲಿಯಡ್ ಬೆಥೊನೆ’, ಕನ್ನಡ ವ್ಯಕ್ತಿಚಿತ್ರ ಕಥಾನಕದ ವಿಮರ್ಶೆಯ ಸಂದರ್ಭದಲ್ಲಿ ಅಲಕ್ಷಿಸಲಾಗದಂಥ ಕೃತಿಗಳು. ವ್ಯಕ್ತಿ ಚಿತ್ರವೆಂದರೆ, ವ್ಯಕ್ತಿತ್ವದ ಬಾಹ್ಯಗುಣಗಳನ್ನು ರೇಖಿಸುವ ಕ್ಯಾರಿಕೇಚರ್ ಮಾದರಿಯ ಬರಹ ಎಂಬ ಪರಿಕಲ್ಪನೆಗಿಂತ ಭಿನ್ನವಾದ ಬರವಣಿಗೆ ವಿಜಯಾ ಅವರದು. ವ್ಯಕ್ತಿಯ ವ್ಯಕ್ತಿತ್ವದ ಪ್ರಧಾನ ಗುಣಗಳು-ದೌರ್ಬಲ್ಯಗಳ ನಿರೂಪಣೆಯ ಜೊತೆಗೆ ಈ ಗುಣದೌರ್ಬಲ್ಯಗಳನ್ನು ಹಾಗೂ ವ್ಯಕ್ತಿಯ ಸಾಧನೆಗಳನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿಮರ್ಶಿಸಿ ತೂಗುವ ಪರಿಯನ್ನು ವಿಜಯಾ ಅವರ ವ್ಯಕ್ತಿಚಿತ್ರಗಳಲ್ಲಿ ಗಮನಿಸಬಹುದಾಗಿದೆ. ಈ ಮಾತಿಗೆ ನಿದರ್ಶನವಾಗಿ ‘ಅನುಪಮಾ ನಿರಂಜನ’ ಕೃತಿಯನ್ನು ನೋಡಬಹುದು. ಈ ಕೃತಿಯಲ್ಲಿ ವಿಜಯಾ ಅವರು ಅನುಪಮಾ ನಿರಂಜನರ ಜೀವನ ಮತ್ತು ವ್ಯಕ್ತಿತ್ವಗಳನ್ನು ಸಮರ್ಥವಾಗಿ ಕಟ್ಟಿಕೊಡುವುದರ ಜೊತೆಗೆ ಮಹಿಳಾ ಸೃಜನಶೀಲತೆಯ ಸಂದಿಗ್ಧತೆಗಳ ಹಿನ್ನೆಲೆಯಲ್ಲಿ ಅವರ ಕೃತಿಗಳ ಮೌಲ್ಯಮಾಪನ ಮಾಡುತ್ತಾರೆ. ಎಡಪಂಥೀಯ ಒಲವು ಮತ್ತು ವೈದ್ಯ ವೃತ್ತಿ ಹೇಗೆ ಅನುಪಮಾ ಅವರ ಕೃತಿಗಳ ಇತಿಮಿತಿಗಳಾಗಿವೆ ಎಂಬುದನ್ನು ಎತ್ತಿ ಹೇಳುತ್ತಾರೆ. ತನ್ನ ಜನಾಂಗದ ಉನ್ನತಿಗಾಗಿ ಶ್ರಮಿಸಿದ ನಿಗ್ರೋ ಮಹಿಳೆ ಮೇರಿ ಮೆಕ್‌ಲಿಯಡ್ ಬೆಥೂನೆ ಕೃತಿಯಲ್ಲೂ ಅವರ ವ್ಯಕ್ತಿತ್ವ ರೂಪಿಸಿದ ಸಮಾಜದ ಹಿನ್ನೆಲೆಯ ವಿಮರ್ಶೆಯಿದೆ.

‘ಉರಿಯ ಚಿಗುರ ಉತ್ಕಲೆ’ ಪ್ರವಾಸ ಕಥನವಾದರೂ ವಿಜಯಾ ಅವರು ಉತ್ಕಲ ದೇಶವನ್ನು ಕಾಣುವುದು ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲೇ.ಉತ್ಕಲದ ಸಾಹಿತ್ಯ, ಕಲೆ, ಸಾಮಾಜಿಕ ನಡಾವಳಿ ಹಾಗೂ ಆ ರಾಜ್ಯದ ಆದಿವಾಸಿಗಳ ಸಾಮಾಜಿಕ ಪದ್ಧತಿಗಳನ್ನು ವಿಜಯಾ ಅವರು ವಿಮರ್ಶೆಯ ಕಣ್ಣುಗಳಿಂದ ನೋಡಿದ್ದಾರೆ. ಪ್ರಸಿದ್ಧ ತೆಲುಗು ಸಾಹಿತಿ ವಿ. ಅರ್. ನಾರ್ಲ ಅವರ ‘ಗುರಜಾಡ’ ವಿಜಯಾ ಅವರ ಅನುವಾದಿತ ಕೃತಿ. ಸ್ತ್ರೀ ವಿಮೋಚನೆಗೆ ಸಂಬಂಧಿಸಿದ ಸಿದ್ಧಾಂತಗಳನ್ನು ವಿಶ್ಲೇಷಿಸುವ ಮೈಥಿಲಿ ಶಿವರಾಮನ್ ಅವರ ‘ವಿಮೋಚನೆಯೆಡೆಗೆ’ ಇನ್ನೊಂದು ಮಹತ್ವದ ಅನುವಾದಿತ ಕೃತಿಯಾಗಿದೆ. ವಿಜಯಾ ದಬ್ಬೆಯವರು ಸುಮಿತ್ರಾ ಬಾಯಿಯವರ ಜೊತೆಗೂಡಿ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಇಷ್ಟೇ ಅಲ್ಲ. ವಿಜಯಾ ದಬ್ಬೆಯವರ ಸ್ತ್ರೀವಾದಿ ಬುದ್ಧಿಪ್ರಧಾನ ತಾತ್ವಿಕ ಚಿಂತನೆಗಳಿಗೆ ಭದ್ರ ಅಡಿಪಾಯ ಒದಗಿಸಿರುವುದು, ಬೆನ್ನೆಲುಬಾಗಿ ನಿಂತಿರುವುದು, ಅವರು ಕಂಡುಂಡಿರುವ ದಿನನಿತ್ಯದ ಪ್ರಾಪಂಚಿಕ ಅನುಭವ. ಇದು ಅವರ ಸ್ತ್ರೀವಾದಿ ಸಾಹಿತ್ಯ ರಚನೆಯನ್ನು ಒಂದು ಮಾರ್ಗವನ್ನಾಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದೆ. ಇವುಗಳಲ್ಲಿ ತಕ್ಷಣ ಕಣ್ಣಿಗೆ ಕಾಣಿಸುವುದು ಸಮತಾ ವೇದಿಕೆ ಮತ್ತು ಸಮತಾ ಆಧ್ಯಯನ ಕೇಂದ್ರ. ಈ ಎರಡೂ ಸಂಸ್ಥೆಗಳ ಸ್ಥಾಪಕ ಸದಸ್ಯರಾದ ವಿಜಯಾ ದಬ್ಬೆಯವರಿಗೆ ಇವು ವಿದ್ವತ್ ಪ್ರಪಂಚದಲ್ಲಿ ಸ್ತ್ರೀವಾದಿ ಸಾಹಿತ್ಯವನ್ನು ಒಂದು ಸಾಹಿತ್ಯ ಮಾರ್ಗವನ್ನಾಗಿ ರೂಪಿಸಲು ಅಂಗೈನೆಲ್ಲಿಯಂತೆ ಒದಗಿ ಬಂದವು. ಈ ಎರಡೂ ನೆಲೆಗಳಲ್ಲಿ ಸ್ತ್ರೀ ವಿಮೋಚನಾ ಕ್ರಿಯಾವಾದಿಯಾಗಿ ಕೆಲಸಮಾಡಿದ ಅನುಭವ ಅವರ ಬೌದ್ಧಿಕ ಚಿಂತನೆಗಳಿಗೆ ಹೆಗಲೆಣೆಯಾಗಿ ಅವರನ್ನು ಒಬ್ಬ ಸ್ತ್ರೀವಾದಿ ಲೇೀಖಕಿಯಾಗಿ ರೂಪಿಸಿರುವುದು ಖಚಿತ.ವಿಜಯಾ ದಬ್ಬೆಯವರು ಬರವಣಿಗೆ ಶುರುಮಾಡುವ ವೇಳೆಗೆ ಕನ್ನಡದಲ್ಲಿ ಮಹಿಳಾ ಸಾಹಿತ್ಯ ಕೃಷಿ ಸಮೃದ್ಧವಾಗಿದ್ದರೂ ಅದಕ್ಕೆ ಸ್ತ್ರೀವಿಮೋಚನೆಯಂಥ ತಾತ್ವಿಕ ಗುರಿಗಳಿರಲಿಲ್ಲ. ಲೇಖಕಿಯರಿಗೆ ಹೀಗೊಂದು ತಾತ್ವಿಕಬದ್ಧತೆ ಮತ್ತು ಗುರಿಗಳನ್ನು ಗೊತ್ತುಪಡಿಸಿ ವಿಜಯಾ ದಬ್ಬೆಯವರು ಕನ್ನಡದಲ್ಲಿ ಸ್ತ್ರೀವಾದಿ ಸಾಹಿತ್ಯ ಮಾರ್ಗದ ಹೊಳಹುಗಳನ್ನು ತೋರಿದರು. ಇದು ವಿಜಯಾ ದಬ್ಬೆಯವರ ಚರಿತ್ರಾರ್ಹ ಸಾಧನೆ.

 ಕನ್ನಡಿಗರು, ಸ್ತ್ರೀವಾದ ಕುರಿತು ತಮಗೊಂದು ಹೊಸ ಬೆಳಕಿಂಡಿ ತೋರಿದ ವಿಜಯಾ ದಬ್ಬೆಯವರ ಸಾಧನೆಯನ್ನು ಗುರುತಿಸಿ ಸಮ್ಮಾನಿಸಿರುವುದುಂಟು. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ...ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಆದರೆ ಇದೆಲ್ಲದರ ಎದುರೂ ಅಟ್ಟಹಾಸಗೈವ ಶಕ್ತಿಯೊಂದು ಚೈತನ್ಯಶೀಲರಾಗಿದ್ದಾಗಲೇ ಅವರನ್ನು ನಿಷ್ಕ್ರಿಯಗೊಳಿಸಿ ಅವರ ಬುದ್ಧಿಶಕ್ತಿಗೆ ಕಡಿವಾಣ ಹಾಕಿದ್ದು ದುರದೃಷ್ಟಕರ ಎಂಬುದು ಸಾಂಪ್ರದಾಯಿಕ ವ್ಯಾಖ್ಯೆಗೆ ಮಾತ್ರ ನಿಲುಕುವಂಥಾದ್ದು. ಸೃಜನಶೀಲಪ್ರತಿಭೆ ಮತ್ತು ಬುದ್ಧಿಶಕ್ತಿ ಎರಡೂ ಕ್ರಿಯಾಶೀಲವಾಗಿದ್ದ ಫಲದಾಯಕ ದಿನಗಳಲ್ಲೇ ಅಪಘಾತವೊಂದರಲ್ಲಿ ವಿಜಯಾದಬ್ಬೆ ಸ್ಮರಣ ಶಕ್ತಿ ಕಳೆದುಕೊಂಡರು. ನಂತರ ಇಪ್ಪತ್ತು ರ್ಷಗಳ ಕಾಲ ಕನ್ನಡದ ಸಾಂಸ್ಕೃತಿಕ ಬೆಳವಣಿಗೆಗಳಿಗೆ, ಸ್ತ್ರೀವಾದಿ ಸಾಹಿತ್ಯದ ಕಲರವಗಳಿಗೆ ಕಿವಿಡುಮೂಕ ಸಾಕ್ಷಿಯಾಗಿದ್ದುಕೊಂಡು ಇಹಲೋಕ ತ್ಯಜಿಸಿದರು. ಕನ್ನಡ ಸ್ತ್ರೀವಾದಿ ಸಾಹಿತ್ಯ ಮಾರ್ಗದ ಪ್ರವರ್ತಕ ಹೆಜ್ಜೆಗಳಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರದು ಅಳಿಸಲಾಗದ ಹೆಗ್ಗುರುತು. ಬಿದಿರು ದಬ್ಬೆಗೆ ಇರುವ ಜೀವಶಕ್ತಿ, ಆಸರೆಯಾಗಿ ನಿಲ್ಲುವ ಅದರ ಸಾಮರ್ಥ್ಯ ಪ್ರಕೃತಿಯ ಸೋಜಿಗಗಳಲ್ಲೊಂದು. ಎಂದೇ ವಿಜಯಾ ಅವರ ಹೆಸರಿಗೆ ಅಂಟಿಕೊಂಡಿರುವ ‘ದಬ್ಬೆ’ ಅವರ ಸ್ತ್ರೀವಾದಿ ಸಾಹಿತ್ಯ ನಿರ್ಮಿತಿಯ ಹಿನ್ನೆಲೆಯಲ್ಲಿ ಅವರ ಅನ್ವರ್ಥ ನಾಮವೂ ಹೌದು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News