×
Ad

ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಆದ್ಯತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-03-04 17:48 IST

ಬೆಂಗಳೂರು, ಮಾ.3: ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಂತಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ಮೇರೆಗೆ ರಾಜ್ಯ ಸರಕಾರದಿಂದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕೆಐಎಡಿಬಿ ಸುವರ್ಣ ಸಂಭ್ರಮ ಮಹೋತ್ಸವ ಹಾಗೂ ಪ್ರಧಾನ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಉದ್ಯೋಗದಿಂದ ಮಾತ್ರ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಾಧ್ಯ. ಆ ನಿಟ್ಟಿನಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಐಎಡಿಬಿ ಕೈಗೊಂಡ ಉದ್ಯಮಸ್ನೇಹಿ ಕ್ರಮಗಳಿಂದಾಗಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 165 ಕೈಗಾರಿಕಾ ಪ್ರದೇಶಗಳನ್ನು ನಿರ್ಮಾಣಗೊಂಡಿದ್ದು, ಸಾವಿರಾರು ಕೈಗಾರಿಕೆಗಳು ಸ್ಥಾಪನೆಗೊಂಡಿವೆ ಎಂದು ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.
ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯವೊಂದಿರುವ ಮಾನವ ಸಂಪನ್ಮೂಲ ಪೂರೈಸಲು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಹೊಸದಾಗಿ ತೆರೆಯಲಾಗಿದೆ. ಈ ಮುಖಾಂತರ ಈ ವರ್ಷ 5 ಲಕ್ಷ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ದಲಿತರಿಗೆ, ಮಹಿಳೆಯರಿಗೆ ಹಾಗೂ ಹಿಂದುಳಿದವರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನೆರವಾಗುವಂತೆ ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿ ಮಾಡಲಾಗಿದೆ. ಮಹಿಳೆಯರಿಗಾಗಿ ರಾಜ್ಯದಲ್ಲಿ 5 ಮಹಿಳಾ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆಯಾಗಿ ರಾಜ್ಯವನ್ನು ಎಲ್ಲ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನಕ್ಕೇರಿಸುವುದು ಸರಕಾರದ ಗುರಿಯಾಗಿದೆ ಎಂದು ಅವರು ಹೇಳಿದರು.

ಇನ್‌ಫೋಸಿಸ್ ಸಂಸ್ಥೆ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮಾತನಾಡಿ, ಇನ್‌ಫೋಸಿಸ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಲ್ಲಿ ಕರ್ನಾಟಕ ರಾಜ್ಯ ಸರಕಾರದ ಕೊಡುಗೆ ಅಪಾರ. ಇಂದು ಇನ್‌ಫೋಸಿಸ್ ಸಂಸ್ಥೆ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಸುತ್ತಿದ್ದು, ಒಟ್ಟು 800 ಎಕರೆ ಜಾಗವನ್ನು ಸಕರಾರದಿಂದ ಪಡೆದಿದೆ ಎಂದು ಸ್ಮರಿಸಿದರು.

ದೇಶದಲ್ಲಿಯೇ ಅತಿಹೆಚ್ಚು ಸಾಫ್ಟ್‌ವೇರ್ ರಫ್ತು ಮಾಡುವ ಸಂಸ್ಥೆ ಎಂಬ ಮನ್ನಣೆ ಪಡೆದಿರುವ ಇನ್‌ಫೋಸಿಸ್ ಕರ್ನಾಟಕ ನೆಲದ ಸಂಸ್ಥೆಯಾಗಿದೆ. ರಾಜ್ಯದಲ್ಲಿ ಒಟ್ಟು 10ಸಾವಿರ ಕೋಟಿ ರೂ.ಬಂಡವಾಳ ಹೂಡಿದ್ದು, ಕಳೆದ ಸಾಲಿನಲ್ಲಿ ಒಟ್ಟು 20 ಸಾವಿರ ಕೋಟಿ ರೂ. ರಫ್ತು ವ್ಯವಹಾರ ನಡೆಸಿದೆ ಎಂದು ಅವರು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಡೆ ಮಾತನಾಡಿ, ಬಂಡವಾಳ ಹೂಡಿಕೆದಾರರು ನಮ್ಮ ಅತಿಥಿಗಳಿದ್ದಂತೆ. ಅವರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ನೋಡಿಕೊಳ್ಳುವುದು ಸರಕಾರದ ಜವಬ್ಧಾರಿ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದಂತೆ ಉದ್ಯೋಗವು ತಾನಾಗಿಯೆ ಹೆಚ್ಚಾಗಲಿದೆ ಎಂದು ತಿಳಿಸಿದರು.

ಮೊದಲ ಪೀಳಿಗೆಯ ಕೈಗಾರಿಕೋದ್ಯಮಿಗಳಿಗೆ ಹಾಗೂ ಯುವ ಸ್ಟಾರ್ಟ್‌ಪ್‌ಗಳಿಗೆ ಹೆಚ್ಚಿನ ಒತ್ತನ್ನು ಹಾಗೂ ಸೌಲಭ್ಯಗಳನ್ನು ನೀಡಬೇಕು. ಆ ನಿಟ್ಟಿನಲ್ಲಿ ಅಗತ್ಯವಿರುವ ಹೊಸ ಯೋಜನೆ ಮತ್ತು ನೀತಿಗಳನ್ನು ಜಾರಿಗೊಳಿಸಲು ಅಧಿಕಾರಿಗಳು ಚಿಂತನೆ ನಡೆಸಬೇಕು ಎಂದು ಅವರು ಆಶಿಸಿದರು.

ಈ ವೇಳೆ ಕೆಐಎಡಿಬಿ ಕಳೆದ 50 ವರ್ಷಗಳ ಬೆಳೆದು ಬಂದ ಹಾದಿ ಹಾಗೂ ಸಾಧನೆ ಕುರಿತ 30 ನಿಮಿಷಗಳ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಬೆಳವಣಿಗೆಯಲ್ಲಿ ಕೊಡುಗೆ ನೀಡಿದ ಮಂಡಳಿಯ ನಿವೃತ್ತ ಮತ್ತು ಪ್ರಸ್ತುತ ಕಾರ್ಯನಿರ್ವಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಜಯರಾಮ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ದರ್ಪಣ್ ಜೈನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರೈತರಿಗೆ ಕಿರುಕುಳ ಬೇಡ
‘ಕೆಐಎಡಿಬಿ ಕೈಗಾರಿಕೆ ಸ್ಥಾಪಿಸುವ ನೆಪದಲ್ಲಿ ರೈತರಿಂದ ಅನಗತ್ಯವಾಗಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ. ಸರಿಯಾಗಿ ಪರಿಶೀಲಿಸಿ ಬೇಡಿಕೆಗೆ ಅನುಗುಣವಾಗಿ ಭೂಮಿಯನ್ನು ವಶಪಡಿಸಿಕೊಂಡು, ರೈತರಿಗೆ ಸೂಕ್ತ ಪರಿಹಾರವನ್ನು ವಿತರಣೆ ಮಾಡಬೇಕು’
-ಆರ್.ವಿ.ದೇಶಪಾಂಡೆ ಬೃಹತ್ ಕೈಗಾರಿಕಾ ಸಚಿವ

‘ದೇಶದಲ್ಲೆ ಅತಿ ಹೆಚ್ಚುಕಾಲ ಕೈಗಾರಿಕಾ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಆರ್.ವಿ.ದೇಶಪಾಂಡೆಯವರ ಹೆಸರನ್ನು ಗಿನ್ನಿಸ್ ಬುಕ್‌ಗೆ ಸೇರಿಸಬೇಕು. ನಾವಿಬ್ಬರು ಏಕಕಾಲದಲ್ಲಿ ವಿಧಾನಸೌಧ ಪ್ರವೇಶಿಸಿದ್ದರೂ ದೇಶಪಾಂಡೆ ನನಗಿಂತಲೂ ಹೆಚ್ಚು ಅವಧಿಯಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಶ್ಲಾಘನೀಯ’

-ಸಿದ್ದರಾಮಯ್ಯ,ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News