ಯುವಕರು ಜನಸೇವೆಯಲ್ಲಿ ತೊಡಗಿ ದೇಶದ ಅಭಿವೃದ್ದಿಗೆ ಕೊಡುಗೆ ನೀಡಬೇಕು: ನಿರ್ಮಲಾನಂದನಾಥ ಸ್ವಾಮೀಜಿ
ಬೆಂಗಳೂರು, ಮಾ.4: ಯುವಕರು ಜನಸೇವೆಯಲ್ಲಿ ತೊಡಗಿಕೊಳ್ಳುವ ಮೂಲಕ ರಾಜ್ಯದ ಹಾಗೂ ದೇಶದ ಅಭಿವೃದ್ದಿಗೆ ಅನನ್ಯ ಕೊಡುಗೆಯನ್ನು ನೀಡಬೇಕು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ನೂತನವಾಗಿ ಆರಂಭಿಸಿರುವ ಮಾರುತಿ ಸೇವಾ ಟ್ರಸ್ಟ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಸಂಪನ್ಮೂಲದ ಕೊರೆತೆಯಿಲ್ಲ. ಆದರೆ, ಅದರ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಪ್ರಮುಖ ಸಂಪನ್ಮೂಲವಾಗಿರುವ ಯುವ ಸಮುದಾಯ ಎಚ್ಚೆತ್ತು ಕೊಳ್ಳಬೇಕಾಗಿದೆ. ಯುವ ಸಮುದಾಯದ ಸದ್ಬಳಕೆಯಿಂದ ಮಾತ್ರ ದೇಶ ಸರಿ ದಾರಿಯಲ್ಲಿ ಸಾಗುವುದು ಸಾಧ್ಯ. ಅಲ್ಲದೆ, ದೇಶದ ಯುವಕರು ಹೆಚ್ಚೆಚ್ಚು ಜನ ಸೇವೆಯಲ್ಲಿ ತೊಡಗಿಕೊಳ್ಳಬೇಕು.
ಇದರಿಂದ ದೇಶದ ಕೊನೆಯ ಹಂತದಲ್ಲಿರುವ ಜನರನ್ನು ಕೆಲವು ಸೌಲಭ್ಯಗಳು ತಲುಪುತ್ತವೆ ಎಂದ ಅವರು, ನೂರಾರು ಕನಸುಗಳನ್ನು ಹೊತ್ತು ಪ್ರಾರಂಭವಾಗುತ್ತಿರುವ ಈ ಸೇವಾ ಟ್ರಸ್ಟ್‌ಗೆ ಯಶಸ್ಸು ಲಭಿಸಲಿ ಎಂದು ಇದೇ ಸಂದರ್ಭದಲ್ಲಿ ನುಡಿದರು.
ಟ್ರಸ್ಟ್‌ನ ಸಂಸ್ಥಾಪಕ ಮಾರುತಿ ಗೌಡ ಮಾತನಾಡಿ, ಈ ಸೇವಾ ಟ್ರಸ್ಟ್ ಅಡಿಯಲ್ಲಿ ಹಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಸ್ವಾಮೀಜಿಗಳ ಆಶಯದಂತೆ ನನ್ನ ಸಮಕಾಲೀನ ಯುವಕರು ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಅವರ ಮನವೊಲಿಸಲಾಗುವುದು ಎಂದರು.