×
Ad

ನಮ್ಮ ದೇಶದ ರೈತರು ಸಂಕಷ್ಟದಲ್ಲಿ: ಆರ್.ವಿ.ರಾಜಶೇಖರನ್

Update: 2018-03-04 18:09 IST

ಬೆಂಗಳೂರು, ಮಾ.4: ಹೊರ ರಾಷ್ಟ್ರಗಳಲ್ಲಿ ಕೃಷಿ ವಲಯಕ್ಕೆ ಅಧಿಕ ಸಬ್ಸಿಡಿ ನೀಡಲಾಗುತ್ತಿದೆ. ಹೀಗಾಗಿ, ಆ ದೇಶಗಳಲ್ಲಿನ ರೈತರು ಸರ್ವತೋಮುಖ ಅಭಿವೃದ್ಧಿ ಕಂಡಿದ್ದಾರೆ. ಆದರೆ, ನಮ್ಮ ದೇಶದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಆರ್.ವಿ.ರಾಜಶೇಖರನ್ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕಾಮಧೇನು ಹಂಸ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ, ಉಚಿತವಾಗಿ ನೀರಿನ ತೊಟ್ಟಿಗಳ ನಿರ್ಮಾಣ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ಸಿಕ್ಕಿಲ್ಲ. ಕೆಲ ವರ್ಷಗಳ ಹಿಂದೆ ಶೇ.68 ರಷ್ಟು ಇದ್ದ ಕೃಷಿ ಭೂಮಿ ಈಗ ಮರೆಯಾಗಿದೆ. ಇದು ರೈತರು ಸಂಕಷ್ಟದಲ್ಲಿರಲು ಕಾರಣವಾಗಿದೆ. ಅವರ ವಾಸ್ತವ ಸ್ಥಿತಿಗತಿಯ ಬಗ್ಗೆ ಮಾಧ್ಯಮಗಳು ಸರಿಯಾಗಿ ವಿಶ್ಲೇಷಣೆ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ಟ್ರಸ್ಟ್ ನ ಅಧ್ಯಕ್ಷ ಜಿ.ಜಯರಾಮ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳ ಲಕ್ಷಾಂತರ ಜಾನುವಾರುಗಳ ನೀರಿನ ದಾಹ ತೀರಿಸುವ ಸಲುವಾಗಿ ನೀರಿನ ತೊಟ್ಟಿಗಳ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಪಕ್ಷಿಗಳು, ಕುರಿಗಳು, ಮೇಕೆಗಳು, ದನ ಕರುಗಳಂತಹ ಮೂಕ ಜೀವಿಗಳ ನೀರಿನ ದಾಹ ನೀಗಿಸಲೆಂದು ಉಚಿತವಾಗಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆ.ವಿ.ರೆಡ್ಡಿ ಮಾತನಾಡಿ, ಜನಸಂದಣಿ ಇಲ್ಲದ ಜಾಗದಲ್ಲಿ ತೊಟ್ಟಿ ನಿರ್ಮಾಣ ಮಾಡಿರುವುದರಿಂದ ಅಲ್ಲಿ ಸದಾ ಹಕ್ಕಿಗಳ ಹಿಂಡೆ ತುಂಬಿರುತ್ತದೆ. ರಾಜ್ಯದ ಎಲ್ಲ ಗ್ರಾಮಗಳಲ್ಲಿಯೂ ಇದೇ ಮಾದರಿಯ ತೊಟ್ಟಿಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಇದನ್ನು ಕಾರ್ಯಗತಗೊಳಿಸಲು ಸ್ಥಳೀಯರು, ದಾನಿಗಳೂ ನಮ್ಮಿಂದಿಗೆ ಕೈಜೋಡಿಸಬೇಕು ಎಂದರು.

ಇದೇ ವೇಳೆ ಪ್ರಗತಿ ಪರ 10 ರೈತರಿಗೆ ಕ್ಷೀರ ಗೋ ಪ್ರಶಸ್ತಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿವಿಧ ಶಾಲೆಗಳ 280 ವಿದ್ಯಾರ್ಥಿಗಳಿಗೆ ವಿದ್ಯಾದೀಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News