ಖೋಟಾ ನೋಟು ಚಲಾವಣೆ: ಇಬ್ಬರ ಬಂಧನ
ಬೆಂಗಳೂರು, ಮಾ.4: ಖೋಟಾ ನೋಟು ತಯಾರು ಮಾಡಿ, ಚಲಾವಣೆ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ 1.57 ಲಕ್ಷ ರೂ. ಮೌಲ್ಯದ ಖೋಟಾ ನೋಟು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಚೋಳರಪಾಳ್ಯದ ಚೇತನ್(34), ಉದಯ್‌ಕುಮಾರ್ ಕುಮಾರ್(38) ಬಂಧಿತಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಮಾ.3ರಂದು ವಿಜಯನಗರದ 5ನೇ ಕ್ರಾಸ್, 7ನೆ ಮುಖ್ಯರಸ್ತೆಯ ಮನೆಯೊಂದರಲ್ಲಿ ದೇಶದ ಚಲಾವಣೆಯಲ್ಲಿರುವ ನೋಟುಗಳನ್ನು ನಕಲಿ ಮುದ್ರಿಸಿಕೊಂಡು ಚಲಾವಣೆ ಜಾಲದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು 2 ಸಾವಿರ ರೂ., 500 ರೂ., ಮತ್ತು 200ರೂ.ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ನಕಲಿಯಾಗಿ ತಯಾರು ಮಾಡಿಕೊಂಡು, ವಶದಲ್ಲಿಟ್ಟುಕೊಂಡು, ಅವುಗಳನ್ನು ನೈಜವೆಂದು ನಂಬಿಸಿ, ಸಾರ್ವಜನಿಕರಿಗೆ ಚಲಾವಣೆ ಮಾಡಿ ಅಕ್ರಮ ಸಂಪಾದನೆ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಕಲರ್ ಪ್ರಿಂಟರ್, ಒಂದು ಪೇಪರ್ ಕಟರ್, ಮೂರು ಮೊಬೈಲ್ ವಶಕ್ಕೆ ಪಡೆದು, ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.