×
Ad

'ಗಾರ್ಡನ್‌ಸಿಟಿ'ಯಾಗಿದ್ದ ಬೆಂಗಳೂರನ್ನು 'ಗಾರ್ಬೇಜ್ ಸಿಟಿ' ಮಾಡಿದ್ದು ಬಿಜೆಪಿ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Update: 2018-03-04 18:39 IST

ಬೆಂಗಳೂರು, ಮಾ.4: ಬಿಜೆಪಿಯವರಂತೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಜನರಿಗೆ ಸುಳ್ಳು ಹೇಳುವ ಅಗತ್ಯವಿಲ್ಲ. ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿಕೊಟ್ಟರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಐಟಿಐ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬಹೃತ್ ಸಮಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ರೈತರಿಗೆ ಮೂರು ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ, ವಿದ್ಯಾಸಿರಿ, ಶೂ ಭಾಗ್ಯ, ಶಾದಿ ಭಾಗ್ಯ, ಪಶು ಭಾಗ್ಯ, ಮೈತ್ರಿ, ಮನಸ್ವಿನಿ, ಇಂದಿರಾ ಕ್ಯಾಂಟೀನ್ ಸೇರಿದಂತೆ ನಾವು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಬಿಜೆಪಿಯವರು ‘ಬೆಂಗಳೂರು ಉಳಿಸಿ’ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ, ವಾಸ್ತವಾಗಿ ಬೆಂಗಳೂರನ್ನು ಬಿಜೆಪಿಯವರಿಂದಲೆ ರಕ್ಷಿಸಬೇಕಿದೆ. ವಿಶ್ವ ಆರ್ಥಿಕ ವೇದಿಕೆಯು ಬೆಂಗಳೂರನ್ನು ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂದು ಬಣ್ಣಿಸಿದೆ. ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮುಂದಿನ 5-6 ವರ್ಷಗಳಲ್ಲಿ 260 ಕಿ.ಮೀ. ಮೆಟ್ರೋ ರೈಲು ಮಾರ್ಗ ನಿರ್ಮಾಣ ಮಾಡುತ್ತೇವೆ. ಉಪನಗರ ರೈಲು ಯೋಜನೆಗೆ ನಾವು 300 ಕೋಟಿ ರೂ.ನೀಡಿದ್ದೇವೆ. ರಾಜ್ಯದ 1.43 ಕೋಟಿ ಕುಟುಂಬಗಳ ಪೈಕಿ 1.20 ಕೋಟಿ ಬಿಪಿಎಲ್ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಜನ, ರಾಜ್ಯದ ಮತದಾರರು ರಾಜಕೀಯವಾಗಿ ಪ್ರಬುದ್ಧ ವಾಗಿದ್ದಾರೆ. ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದ ಜನತೆ ಮತ್ತೆ ಕಾಂಗ್ರೆಸ್‌ಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಐದು ವರ್ಷ ಅಧಿಕಾರಲ್ಲಿದ್ದ ಬಿಜೆಪಿಯವರು ಗಾರ್ಡನ್‌ಸಿಟಿ (ಉದ್ಯಾನನಗರ)ಯಾಗಿದ್ದ ಬೆಂಗಳೂರನ್ನು ಗಾರ್ಬೆಜ್ ಸಿಟಿ(ಕಸದ ನಗರ)ಯನ್ನಾಗಿ ಮಾಡಿದರು. ಪಾಲಿಕೆಯ ಆಸ್ತಿಗಳನ್ನು ಅಡಮಾನ ವಿಟ್ಟಿದ್ದರು. ಮೂರು ಸಾವಿರ ಕೋಟಿ ರೂ.ಬಾಕಿ ಪಾವತಿಯಾಗಬೇಕಿತ್ತು. 3500 ಕೋಟಿ ರೂ.ಸಾಲವಿತ್ತು. ಅದನ್ನೆಲ್ಲ ನಮ್ಮ ಸರಕಾರ ತೀರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಇವತ್ತು ಬದಲಾವಣೆ ಕಾಣುತ್ತಿದ್ದರೆ ಅದು ನಮ್ಮ ಸರಕಾರ ನೀಡಿರುವ ಅನುದಾನದಿಂದ. 2016-17ರಲ್ಲಿ 7300 ಕೋಟಿ ರೂ., 2017-18ರಲ್ಲಿ 2500 ಕೋಟಿ ರೂ., 2018-19ರಲ್ಲಿ 2500 ಕೋಟಿ ರೂ.ನೀಡಿದ್ದೇನೆ. ಅಶೋಕ್...ಇಷ್ಟು ಮೊತ್ತವನ್ನು ನಿಮ್ಮ ಕಾಲದಲ್ಲಿ ನೀಡಲಾಗಿತ್ತಾ ಅಶೋಕ್ ಎಂದು ಅವರು ಹೇಳಿದರು.

2006ರಲ್ಲಿ 110 ಹಳ್ಳಿಗಳು, 7 ನಗರಸಭೆ ಹಾಗೂ 1 ಪುರಸಭೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸಿದರು. ಸಮ್ಮಿಶ್ರ ಸರಕಾರ, ಬಿಜೆಪಿ ಸರಕಾರದ ಅವಧಿಯಲ್ಲಿ ಈ ಹಳ್ಳಿಗಳಿಗೆ ಕುಡಿಯುವ ನೀರು, ಒಳಚರಂಡಿ, ರಸ್ತೆ ಸೇರಿದಂತೆ ಯಾವ ಸೌಲಭ್ಯವು ನೀಡಿಲ್ಲ. ಇವತ್ತು ನಮ್ಮ ಸರಕಾರ ಅನುದಾನ ನೀಡಿ ಈ ಎಲ್ಲ ಸೌಲಭ್ಯಗಳನ್ನು ಕಲ್ಪಿಸುತ್ತಿದೆ ಎಂದು ಅವರು ಹೇಳಿದರು.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಪಾಲಿಗೆ ಇದು ಐತಿಹಾಸಿಕ ದಿನ. ಸುಮಾರು 400 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರೆವೇರಿಸಲಾಗಿದೆ. ಇಷ್ಟೆಲ್ಲ ಅಭಿವೃದ್ಧಿ ಕೆಲಸಗಳಾಗಲು ನಿಮ್ಮ ಶಾಸಕ ಭೈರತಿ ಬಸವರಾಜ ಪ್ರಯತ್ನ ಕಾರಣ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಕೆ.ಆರ್.ಪುರ ತಾಲೂಕು ಕಚೇರಿ ಆವರಣದಲ್ಲಿ ಅನಾವರಣಗೊಳಿಸಿರುವ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬಸವರಾಜ ತಮ್ಮ ಸ್ವಂತ ಖರ್ಚಿನಿಂದ ನಿರ್ಮಿಸಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಬಸವರಾಜ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವುದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಶಾಸಕ ಭೈರತಿ ಬಸವರಾಜ ವಹಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಬಿಡಿಎ ಅಧ್ಯಕ್ಷ ವೆಂಕಟೇಶ್, ಶಾಸಕರಾದ ಶಿವರಾಜ್ ತಂಗಡಗಿ, ವಿನಿಶಾ ನಿರೋ, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಕೆ.ಮಾದೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಭಿವೃದ್ಧಿ ಬಗ್ಗೆ ಚರ್ಚೆಗೆ ಸಿಎಂ ಆಹ್ವಾನ
ಪ್ರಧಾನಿ ನರೇಂದ್ರಮೋದಿ ನಮ್ಮ ಸರಕಾರವನ್ನು 10 ಪಸೆಂಟ್ ಸರಕಾರ ಎಂದು ಆರೋಪಿಸಿದ್ದಾರೆ. ತಮ್ಮ ಪಕ್ಕದಲ್ಲಿ ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯನಾಯ್ಡು, ಜನಾರ್ದನರೆಡ್ಡಿ, ಕೃಷ್ಣಯ್ಯಶೆಟ್ಟಿಯನ್ನು ಕೂರಿಸಿಕೊಂಡು ನಮ್ಮ ಬಗ್ಗೆ ಮಾತನಾಡುತ್ತಾರೆ. ಇದೊಂದು ಬೇಜವಾಬ್ದಾರಿ, ಮಾನಗೆಟ್ಟ ಹೇಳಿಕೆ. ನಿಮ್ಮ ಬಳಿ ದಾಖಲೆಗಳಿದ್ದರೆ ಒಂದೇ ವೇದಿಕೆ ಬನ್ನಿ ಚರ್ಚಿಸೋಣ. ನಮಗೆ ನೈತಿಕ ಶಕ್ತಿಯಿದೆ. ಏಕೆಂದರೆ ಐದು ವರ್ಷಗಳಲ್ಲಿ ನಮ್ಮ ಸರಕಾರ ಯಾವುದೆ ಹಗರಣ, ಭ್ರಷ್ಟಾಚಾರವಿಲ್ಲದೆ ಪಾರದರ್ಶಕ ಆಡಳಿತ ನೀಡಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News