×
Ad

ಪ್ರಧಾನಿಯಾಗಲು ಮೋದಿ ನಾಲಾಯಕ್: ಸಿದ್ದರಾಮಯ್ಯ

Update: 2018-03-04 20:00 IST

ಬೆಂಗಳೂರು, ಮಾ.4: ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾರೂ ಇಲ್ಲ. ಪ್ರಧಾನಿ ಸ್ಥಾನಕ್ಕೆ ಅವರು ಅಗೌರವ ತಂದಿದ್ದಾರೆ. ಇಂತಹವರು ದೇಶದ ಪ್ರಧಾನಿ ಆಗೋಕೆ ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರವಿವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ಗೊಲ್ಲರಹಟ್ಟಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮತ್ತು ಮುಖ್ಯ ಸಂಪರ್ಕ ರಸ್ತೆಯ ಅಭಿವೃದ್ಧಿಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನರೇಂದ್ರಮೋದಿ ಬೆಂಗಳೂರಿಗೆ ಬಂದು ಎಷ್ಟು ಭಾಷಣ ಮಾಡಿದರೂ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಬಡವರಿಗೆ ಅನಿಲ ಸಂಪರ್ಕ ಕೊಟ್ಟಿದ್ದೇವೆ ಎಂದು ದೊಡ್ಡದಾಗಿ ಪೆಟ್ರೋಲ್ ಬಂಕ್ ಮುಂದೆ ಪ್ರಧಾನಿ ಫೋಟೋ ಹಾಕಿಸಿಕೊಂಡಿದ್ದಾರೆ. ಅವರು ಸಿಲಿಂಡರ್ ಮಾತ್ರ ಕೊಡುತ್ತಾರೆ. ನಾವು ಒಲೆ, ರೆಗ್ಯುಲೇಟರ್, ಲೈಟರ್ ಎಲ್ಲವನ್ನು ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಅಭಿವೃದ್ಧಿ, ರೈತರ ಸಾಲಮನ್ನಾ ಬಗ್ಗೆ ನರೇಂದ್ರಮೋದಿ ಮಾತನಾಡುವುದಿಲ್ಲ. ಅಚ್ಚೇ ದಿನ್ ಆಯೇಂಗೆ ಅಂದ್ರು, ನಾಲ್ಕು ವರ್ಷವಾದರೂ 2 ಲಕ್ಷ ಉದ್ಯೋಗ ಕೊಟ್ಟಿಲ್ಲ. ವಿದೇಶದಲ್ಲಿದ್ದ ಕಪ್ಪು ಹಣ ತರುತ್ತೇನೆ ಅಂದ್ರು ಯಾವುದೂ ಮಾಡಿಲ್ಲ ಎಂದು ಅವರು ಟೀಕಿಸಿದರು.

ಗುಜರಾತ್‌ನಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತರನ್ನೆ ನೇಮಕ ಮಾಡಿರಲಿಲ್ಲ. ಆನಂತರ ರಾಜ್ಯಪಾಲರ ಒತ್ತಾಯದ ಮೇರೆಗೆ ಲೋಕಾಯುಕ್ತ ನೇಮಕ ಮಾಡಿದ್ದಾರೆ. ಪ್ರಧಾನಿಯಾಗಿ ನಾಲ್ಕು ವರ್ಷ ಆಗಿದೆ. ಈವರೆಗೆ ಲೋಕಪಾಲ್ ನೇಮಕ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ನರೇಂದ್ರಮೋದಿ, ಯಡಿಯೂರಪ್ಪ, ಶೋಭಾ ಕರಂದ್ಲಾಜೆಗೆ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದೆ ಯಶವಂತಪುರ ಕ್ಷೇತ್ರದ ಶಾಸಕಿಯಾಗಿದ್ದ ಶೋಭಾ ಕರಂದ್ಲಾಜೆ, ಯಾವುದೆ ಅಭಿವೃದ್ಧಿ ಕೆಲಸ ಮಾಡದೆ, ಸೋಮಶೇಖರ್‌ಗೆ ಹೆದರಿ ರಾಜಾಜಿನಗರಕ್ಕೆ ಫಲಾಯನ ಮಾಡಿದರು. ಅಲ್ಲಿಯೂ ಆಯಮ್ಮ ಕೆಟ್ಟದಾಗಿ ಸೋತರು ಎಂದು ಸಿದ್ದರಾಮಯ್ಯ ಹೇಳಿದರು.

ಈಗ ಸಂಸದೆಯಾಗಿ ಶೋಭಾ ಕರಂದ್ಲಾಜೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಂದೆ ಅವರು ಲೋಕಸಭೆಯಾಗಲಿ, ವಿಧಾನಸಭೆಯಾಗಲಿ ಯಾವ ಚುನಾವಣೆಯಲ್ಲೂ ಗೆಲ್ಲುವುದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಲೂಟಿ ಹೊಡೆದದ್ದೇ ಸಾಧನೆ. ಇವರ ಕಾಲದಲ್ಲಿ ನಾಯಿಗಳಿಗೆ ರಕ್ಷಣೆ ಕೊಡಲು ಆಗಲಿಲ್ಲ. ಇಂತಹವರು ಯಾವ ಮುಖ ಇಟ್ಟುಕೊಂಡು ಜನರ ಬಳಿ ಹೋಗುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.

ನಾನು ಜೆಡಿಎಸ್ ಬಗ್ಗೆ ಮಾತನಾಡುವುದಿಲ್ಲ. ಕಳೆದ ಬಾರಿ ಬೆಂಗಳೂರಿನಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದರು. ಈ ಬಾರಿ ಒಂದು ಸ್ಥಾನದಲ್ಲೂ ಗೆಲ್ಲುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 25 ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸುವರ್ಣಾಕ್ಷರದಲ್ಲಿ ಬರೆಯುವ ದಿನ. ಬಿಬಿಎಂಪಿ, ಬಿಡಿಎ ವತಿಯಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇವೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳು ಇರಲಿಲ್ಲ. ಎಸ್.ಟಿ.ಸೋಮಶೇಖರ್ ಬಂದ ನಂತರ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯಗಳು ಸಿಕ್ಕಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ನಗರದಲ್ಲಿ ನಮ್ಮ ಪಕ್ಷದ 13 ಶಾಸಕರಿದ್ದಾರೆ. ಆದರೆ, ಸೋಮಶೇಖರ್, ಮುನಿರತ್ನ ಹಾಗೂ ಭೈರತಿ ಬಸವರಾಜ ಮೂರು ಜನ ಅವರವರ ಕ್ಷೇತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಯಾವುದೆ ದುರುದ್ದೇಶವಿಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಇವರ ನಡುವೆ ಅಭಿವೃದ್ಧಿ ಕೆಲಸದಲ್ಲಿ ಸ್ಪರ್ಧೆ ಏರ್ಪಟ್ಟಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸೋಮಶೇಖರ್ ಅತ್ಯಂತ ಕ್ರಿಯಾಶೀಲತೆ ಇರುವವರು. 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸೋಮಶೇಖರ್, ಮುಂದಿನ ಚುನಾವಣೆ ಯಲ್ಲೂ ಜಯ ಸಾಧಿಸಲಿದ್ದಾರೆ ಸಿದ್ದಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ವಹಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಲೋಕೋಪ ಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಭೈರತಿ ಬಸವರಾಜ, ಮೇಯರ್ ಸಂಪತ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕೋಮುವಾದದಿಂದ ಯಾರಾದರೂ ಪ್ರಾಣ ಕಳೆದುಕೊಂಡಿದ್ದರೆ ಅದಕ್ಕೆ ಆರೆಸೆಸ್ಸ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿಯೆ ಕಾರಣ. ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರು ಬಿಜೆಪಿಯವರು. ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News