ಬೆಂಗಳೂರು: ಪುಸ್ತಕ ಬಿಡುಗಡೆ ಕಾರ್ಯಕ್ರಮ
ಬೆಂಗಳೂರು, ಮಾ.4: ಎಸ್.ಎಲ್.ಶೇಷಗಿರಿ ರಾವ್ ಅವರ ಕಾವ್ಯೋದ್ಯಾನ, ಎಚ್.ದುಂಡಿರಾಜ್ ಅವರ ನೊಣಾನುಬಂಧ, ಡಾ.ವ್ಯಾಸರಾವ್ ನಿಂಜೂರು ಅವರ ಶ್ರೀ ಚಾಮುಂಡೇಶ್ವರಿ ಭವನ ಮತ್ತು ಹಿರೇಮಗಳೂರು ಕಣ್ಣನ್ ಅವರ ನುಡಿ ಪೂಜೆ ಪುಸ್ತಕಗಳನ್ನು ಹಿರಿಯ ಸಾಹಿತಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಬಿಡುಗಡೆ ಮಾಡಿದರು.
ರವಿವಾರ ನಗರದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ, ಎಸ್.ಎಲ್.ಶೇಷಗಿರಿ ರಾವ್ ಅವರಿ ಸಾಹಿತ್ಯ ಆಸಕ್ತಿ ಅದ್ಬುತವಾದದ್ದು. ಅವರು ಸದಾ ಸಾಹಿತ್ಯದ ಅಧ್ಯಯನದಲ್ಲಿಯೇ ತೊಡಗಿರುತ್ತಾರೆ. ನನ್ನ ಎಲ್ಲ ಬರಹಗಳನ್ನು ಓದಿ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದರು.
ಬಳಿಕ ಲೇಖಕ ಹಿರೇಮಗಳೂರು ಕಣ್ಣನ್ ಮಾತನಾಡಿ, ಕನ್ನಡ ಭಾಷೆಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಭಾಷೆ ಅಪವಿತ್ರಗೊಳ್ಳುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಕನ್ನಡ ಉಳಿವಿಗೆ ಶ್ರಮಿಸಬೇಕು ಎಂದ ಅವರು, ಬರಹಗಾರರಿಗೆ ಜವಾಬ್ದಾರಿ ಇದೆ ಎಂಬುದನ್ನು ಈ ಕಾರ್ಯಕ್ರಮ ಓದುಗರಿಗೆ ತೋರಿಸಿಕೊಟ್ಟಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕೆಂದು ನುಡಿದರು.
ಪುಸ್ತಕಗಳ ವಿವರ: ಚಾಮುಂಡೇಶ್ವರಿ ಭವನ ಕಾದಂಬರಿ 2ನೇ ಮುದ್ರಣವಾಗಿದ್ದು 304 ಪುಟಗಳಿವೆ. ನುಡಿಪೂಜೆಯೂ 2ನೆ ಮುದ್ರಣವಾಗಿದ್ದು 256 ಪುಟಗಳಿವೆ. ಮೊದಲ ಮುದ್ರಣ ಕಾಣುತ್ತಿರುವ ಕಾವ್ಯೋದ್ಯಾನ 192, ನೊಣಾನುಬಂಧ 200 ಪುಟಗಳನ್ನು ಒಳಗೊಂಡಿವೆ.