ಬೆಂಗಳೂರು: ಹಾಪ್‌ಕಾಮ್ಸ್‌ಗಳಲ್ಲಿ ಕಬ್ಬಿನಹಾಲು, ಹಾಲಿನ ಉತ್ಪನ್ನಗಳ ಮಾರಾಟ
ಬೆಂಗಳೂರು, ಮಾ.4: ನಗರದ ಹಾಪ್‌ಕಾಮ್ಸ್ ಮಳಿಗೆಗಳನ್ನು ಲಾಭದಾಯಕ ಗೊಳಿಸುವ ಸದುದ್ದೇಶದಿಂದ ಇನ್ನು ಮುಂದೆ ಕಬ್ಬಿನಹಾಲು ಹಾಗೂ ನಂದಿನಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ.
ತಿಂಗಳಿಗೆ 10ಸಾವಿರ ರೂ.ಗಳಿಗಿಂತ ಕಡಿಮೆ ವ್ಯಾಪಾರ ಆಗುತ್ತಿರುವ ಮಳಿಗೆಗಳನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಕಾಪ್‌ಕಾಮ್ಸ್ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ನಷ್ಟದಲ್ಲಿರುವ ಮಳಿಗೆಗಳನ್ನು ಫ್ರಾಂಚೈಸಿ ನೀಡುವುದು, ಮಳಿಗೆಯಲ್ಲಿಯೆ ಕಬ್ಬಿನ ಹಾಲಿನ ವ್ಯಾಪಾರ ಹಾಗೂ ಹಾಲು, ಹಾಲಿನ ಉತ್ಪನ್ನಗಳನ್ನು ಮಾಡುವುದು ಪ್ರಮುಖವಾಗಿದೆ.
ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ 325 ಮಾರಾಟ ಮಳಿಗೆಗಳಿವೆ. ನಗರದಲ್ಲಿ 270 ಮಳಿಗೆಗಳಿವೆ. ಅದರಲ್ಲಿ ನಷ್ಟದಲ್ಲಿರುವ 100ಮಳಿಗೆಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 50ಮಳಿಗೆಗಳ ಫ್ರಾಂಚೈಸಿ ನೀಡಲು ನಿರ್ಧರಿಸಿದ್ದೇವೆ ಎಂದು ಹಾಪ್‌ಕಾಮ್ಸ್‌ನ ಅಧ್ಯಕ್ಷ ಚಂದ್ರಗೌಡ ತಿಳಿಸಿದರು.
ಫ್ರಾಂಚೈಸಿ ಪಡೆದವರು ಒಂದು ಲಕ್ಷ ಠೇವಣಿ ಇಡಬೇಕು. ಜೊತೆಗೆ ಪ್ರತಿ ತಿಂಗಳು ಒಂದು ಲಕ್ಷದವರೆಗೆ ತರಕಾರಿ ಹಾಗೂ ಹಣ್ಣುಗಳನ್ನು ಹಾಪ್‌ಕಾಮ್ಸ್‌ನಿಂದಲೆ ಖರೀದಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ತರಕಾರಿ ವ್ಯಾಪಾರದಿಂದ ಉಂಟಾಗುವ ನಷ್ಟವನ್ನು ಸರಿದೂಗಿಸಲು ಕಬ್ಬಿನಹಾಲಿನ ವ್ಯಾಪಾರಕ್ಕೆ ಅನುಮತಿ ನೀಡಿದ್ದೇವೆ ಎಂದು ಅವರು ಹೇಳಿದರು.
ಪ್ರಾಯೋಗಿಕವಾಗಿ ಜೆಪಿ ನಗರದ ಎರಡು ಮಳಿಗೆಗಳಲ್ಲಿ ಕಬ್ಬಿನ ಹಾಲು ವ್ಯಾಪಾರ ಪ್ರಾರಂಭಿಸಲಾಗಿದೆ. ಇನ್ನು ಆರೇಳು ಕಡೆಗಳಲ್ಲಿ ಶೀಘ್ರದಲ್ಲಿಯೆ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮಳಿಗೆಗಳಲ್ಲಿ ಕಬ್ಬಿನ ಹಾಲು ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ಅನೇಕ ಈ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ.
ಕೆಎಂಎಫ್ ಜೊತೆ ಈಗಾಗಲೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ನೊಂದು ವಾರದಲ್ಲಿ ನಂದಿನಿ ಹಾಲಿನ ಉತ್ಪನ್ನಗಳು ಹಾಗೂ ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳು ನಮ್ಮ ಮಳಿಗೆಗಳಲ್ಲಿ ಸಿಗಲಿವೆ. ಮೊದಲ ಹಂತದಲ್ಲಿ 25ಮಳಿಗೆಗಳಲ್ಲಿ ಪ್ರಾರಂಭಿಸಲಾಗುತ್ತದೆ. ಜನರ ಪ್ರತಿಕ್ರಿಯೆ ನಂತರ ಉಳಿದ ಮಳಿಗೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.