ಶೂಟಿಂಗ್ ವಿಶ್ವಕಪ್: ಮನು ಬಾಕರ್‌ಗೆ ಚಿನ್ನ

Update: 2018-03-05 05:22 GMT

 ಮೆಕ್ಸಿಕೊ, ಮಾ.5: ಇಲ್ಲಿ ನಡೆಯುತ್ತಿರುವ ಈ ವರ್ಷದ ಮೊದಲ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್‌ನಲ್ಲಿ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಬಾಕರ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಅಕ್ಟೋಬರ್‌ನಲ್ಲಿ ಬ್ಯುನಸ್ ಐರಿಸ್‌ನಲ್ಲಿ ನಡೆಯಲಿರುವ 2018ರ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಈಗಾಗಲೇ ಸ್ಥಾನ ಗಿಟ್ಟಿಸಿಕೊಂಡಿರುವ ಮನು ರವಿವಾರ ನಡೆದ ಫೈನಲ್‌ನಲ್ಲಿ ಮೆಕ್ಸಿಕೊದ ಅಲೆಜಾಂಡ್ರ ಝಾವಲಾರನ್ನು ಸೋಲಿಸಿ ಚಿನ್ನ ಜಯಿಸಿದರು.

ಮನು ಒಟ್ಟು 237.5 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ, ಝವಾಲಾ 237.1 ಅಂಕ ಗಳಿಸಿದರು. ಫ್ರಾನ್ಸ್‌ನ ಸೆಲಿನ್ ಗೊಬರ್‌ವಿಲ್ಲೆ 217.0 ಅಂಕ ಗಳಿಸುವುದರೊಂದಿಗೆ ಕಂಚು ಜಯಿಸಿದರು.

ಭಾರತದ ಯಶಸ್ವಿನಿ ಸಿಂಗ್(196.1 ಅಂಕ)ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕ ವಂಚಿತರಾದರು.

ದಿನದಂತ್ಯಕ್ಕೆ ಭಾರತ ಒಟ್ಟು 5 ಪದಕ ಜಯಿಸಿದ್ದು, ಇದರಲ್ಲಿ 2 ಚಿನ್ನ, ಮೂರು ಕಂಚು ಪದಕ ಸೇರಿದೆ. ‘‘ಚಿನ್ನದ ಪದಕ ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನಗಿದು ಮೊದಲ ವಿಶ್ವಕಪ್. ಮುಂಬರುವ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿರುವೆ’’ ಎಂದು ಮನು ಪ್ರತಿಕ್ರಿಯಿಸಿದರು.

ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ರವಿ ಕುಮಾರ್(ಪುರುಷರ 10 ಮೀ. ಏರ್ ರೈಫಲ್)ಕಂಚು ಜಯಿಸುವುದರೊಂದಿಗೆ ಭಾರತದ ಪದಕದ ಖಾತೆ ತೆರೆದಿದ್ದರು. ಶನಿವಾರ ಶಹಝಾರ್ ರಿಝ್ವಿ ಹಾಗೂ ಜಿತು ರಾಯ್(10ಮೀ. ಏರ್ ಪಿಸ್ತೂಲ್)ಕ್ರಮವಾಗಿ ಚಿನ್ನ ಹಾಗೂ ಕಂಚು ಜಯಿಸಿದ್ದಾರೆ. ಮೆಹುಲ್ ಘೋಷ್(10 ಮೀ. ಏರ್‌ರೈಫಲ್)ಮಹಿಳೆಯರ ವಿಭಾಗದಲ್ಲಿ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News