ಆಸ್ಟ್ರೇಲಿಯದ ಕಾಮನ್‌ವೆಲ್ತ್ ಗೇಮ್ಸ್ ತಂಡದಲ್ಲಿ ಪಂಜಾಬ್ ಮೂಲದ ಮಹಿಳಾ ಕುಸ್ತಿಪಟು!

Update: 2018-03-05 15:23 GMT

ಮೆಲ್ಬೋರ್ನ್,ಮಾ.5: ಗೋಲ್ಡ್‌ಕೋಸ್ಟ್‌ನಲ್ಲಿ ಎಪ್ರಿಲ್ 4 ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಸ್ಟ್ರೇಲಿಯ ತಂಡ ಆಯ್ಕೆ ಮಾಡಿರುವ ಮಹಿಳೆಯರ ಕುಸ್ತಿ ತಂಡದಲ್ಲಿ ಪಂಜಾಬ್‌ನಲ್ಲಿ ಹುಟ್ಟಿ ಬೆಳೆದಿರುವ ರೂಪಿಂದರ್ ಕೌರ್ ಸ್ಥಾನ ಪಡೆದಿದ್ದಾರೆ.

ರೂಪಿಂದರ್ ಸಹಿತ ಮೂವರು ಮಹಿಳೆಯರು ಹಾಗೂ ಐವರು ಪುರುಷರನ್ನು ಒಳಗೊಂಡ ಕುಸ್ತಿ ತಂಡ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಲಿದ್ದಾರೆ. ತಂಡದಲ್ಲಿ ರೂಪಿಂದರ್ ಮಾತ್ರ ಭಾರತ ಮೂಲದವರಾಗಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಕೌರ್ ಕಳೆದ ವರ್ಷ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲಿ 48 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಇತ್ತೀಚೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ 13ನೇ ಆವೃತ್ತಿಯ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ.

‘‘ನಾನು ಏಳನೇ ತರಗತಿಯಲ್ಲಿದ್ದಾಗ ಜುಡೋ ಮೇಲೆ ಒಲವು ಹೊಂದಿದ್ದೆ. 10ನೇ ತರಗತಿಯಲ್ಲಿದ್ದಾಗ ಕುಸ್ತಿಯಲ್ಲಿ ಆಸಕ್ತಿ ಮೂಡಿತು.ಆ ಬಳಿಕ ಮೊದಲ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಆಡಿದ್ದೆ. ನನ್ನ ತಂದೆ ಕಾಬಲ್ ಸಿಂಗ್ ಸಂಧು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ನನ್ನ ಅಜ್ಜ-ಅಜ್ಜಿಯಂದಿರು ನನ್ನ ಬೆಂಬಲಕ್ಕೆ ನಿಂತಿದ್ದರು’’ ಎಂದು ಕೌರ್ ಹೇಳಿದ್ದಾರೆ.

ಟರ್ಕಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೌರ್ ಚಿನ್ನ ಜಯಿಸಿದ್ದರು. 2004ರಲ್ಲಿ ಹೈದರಾಬಾದ್‌ನಲ್ಲಿ ನಡೆದ ನ್ಯಾಶನಲ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದುಕೊಂಡ್ದಿರು. 2007ರಲ್ಲಿ ಅಧ್ಯಯನಕ್ಕಾಗಿ ಆಸ್ಟ್ರೇಲಿಯಕ್ಕೆ ತೆರಳಿದ ಕೌರ್ ಆಸ್ಟ್ರೇಲಿಯನ್ ನ್ಯಾಶನಲ್ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಆರಂಭಿಸಿದರು.

 2012ರಲ್ಲಿ ಆಸ್ಟ್ರೇಲಿಯ ಕುಸ್ತಿ ಸಂಸ್ಥೆಯಿಂದ (ಎಡಬ್ಲು ಎ)ಆಯ್ಕೆಯಾದರು. ಎಡಬ್ಲುಎ ನನ್ನ ಪ್ರಾಯೋಜಕತ್ವವಹಿಸಿಕೊಂಡಿದ್ದಲ್ಲದೆ, ಖಾಯಂ ನಿವಾಸವನ್ನು ನೀಡಿತು. ಆ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಲು ಆರಂಭಿಸಿದ್ದೆ. 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದೆ ಎಂದರು.

2013ರಲ್ಲಿ ವಿವಾಹವಾಗಿರುವ ಕೌರ್ ಕುಸ್ತಿಯಲ್ಲಿ ಮುಂದುವರಿದಿದ್ದಾರೆ. 2016ರಲ್ಲಿ ಜನಿಸಿರುವ 2 ವರ್ಷದ ಪುತ್ರಿ ಕೌರ್‌ಗೆ ಸ್ಫೂರ್ತಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News