ಅಮೆರಿಕ: ಭಾರತೀಯ ರಾಯಭಾರ ಕಚೇರಿಯ ಫೋನ್ ಬಳಸಿ ವಂಚನೆ !

Update: 2018-03-05 15:50 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಮಾ. 5: ವಂಚಕರು ಜನರಿಂದ ಹಣ ವಸೂಲಿ ಮಾಡಲು ಅಮೆರಿಕದಲ್ಲಿನ ಭಾರತೀಯ ರಾಯಭಾರ ಕಚೇರಿಯ ಟೆಲಿಫೋನ್ ಸಂಪರ್ಕಗಳನ್ನು ಬಳಸಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ ಹಾಗೂ ಯಾವುದೇ ಶಂಕಿತ ಕರೆಗಳ ಬಗ್ಗೆ ಎಚ್ಚರದಿಂದಿರುವಂತೆ ಅದು ಜನರನ್ನು ಎಚ್ಚರಿಸಿದೆ.

ಈ ವಂಚನಾ ಜಾಲದ ಬಗ್ಗೆ ವಾಶಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಮೆರಿಕ ಸರಕಾರಕ್ಕೆ ಮಾಹಿತಿ ನೀಡಿದೆ ಹಾಗೂ ತನ್ನದೇ ಆದ ಆಂತರಿಕ ತನಿಖೆಯನ್ನು ಆರಂಭಿಸಿದೆ.

‘‘ಈ ವಂಚಕರು ಕರೆಗಳನ್ನು ಮಾಡಿ ಜನರಿಂದ ಕ್ರೆಡಿಟ್ ಕಾರ್ಡ್ ವಿವರಗಳು ಸೇರಿದಂತೆ ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತಾರೆ ಅಥವಾ ಭಾರತೀಯರಿಗೆ ಕರೆ ಮಾಡಿ ಅವರ ಪಾಸ್‌ಪೋರ್ಟ್‌ಗಳು, ವೀಸಾ ಅರ್ಜಿಗಳು, ವಲಸೆ ಅರ್ಜಿಗಳಲ್ಲಿ ದೋಷಗಳಿವೆ ಹಾಗೂ ಹಣ ಪಾವತಿಸಿ ಅವುಗಳನ್ನು ಸರಿಪಡಿಸಬೇಕು ಎಂದು ಹೇಳುತ್ತಾರೆ. ಒಂದು ವೇಳೆ ಈ ದೋಷಗಳನ್ನು ಸರಿಪಡಿಸದಿದ್ದರೆ ಸಂಬಂಧಪಟ್ಟ ವ್ಯಕ್ತಿಗಳು ಭಾರತಕ್ಕೆ ಗಡಿಪಾರಾಗಬಹುದು ಅಥವಾ ಅಮೆರಿಕದಲ್ಲಿ ಜೈಲು ಶಿಕ್ಷೆಗೆ ಒಳಗಾಗಬಹುದು ಎಂದು ಹೆದರಿಸುತ್ತಾರೆ’’ ಎಂದು ರಾಯಭಾರ ಕಚೇರಿ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ.

ಇಂಥ ಕೆಲವು ಕರೆಗಳನ್ನು ಭಾರತೀಯ ರಾಯಭಾರ ಕಚೇರಿಯಿಂದ ಮಾಡಲಾಗಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಹಾಗೂ ಇತರ ಕರೆಗಳಲ್ಲಿ ರಾಯಭಾರ ಕಚೇರಿಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.

ಕರೆ ಮಾಡಿ ಮಾಹಿತಿ ಕೇಳುವುದಿಲ್ಲ :ಭಾರತೀಯ ರಾಯಭಾರ ಕಚೇರಿ ಸ್ಪಷ್ಟನೆ

ತನ್ನ ಕಚೇರಿಯ ಯಾವುದೇ ಅಧಿಕಾರಿಗಳು ಯಾವುದೇ ಭಾರತೀಯರಿಗೆ ಅಥವಾ ವಿದೇಶಿ ನಾಗರಿಕರಿಗೆ ಕರೆಗಳನ್ನು ಮಾಡಿ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ ಎಂದು ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆಯಲ್ಲಿ ಹೇಳಿದೆ.

ಅರ್ಜಿ ಸಲ್ಲಿಸಿದವರಿಂದ ಯಾವುದೇ ಹೆಚ್ಚುವರಿ ಮಾಹಿತಿ ಬೇಕಿದ್ದಲ್ಲಿ, ಅಧಿಕೃತ ಇಮೇಲ್‌ಗಳ ಮೂಲಕ ಮಾತ್ರ ಕೋರಲಾಗುತ್ತದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News