ರಾಜಕೀಯ ಮಾಡುವವರೊಂದಿಗೆ ಹೋಗಲಾರೆ: ನಟ ಉಪೇಂದ್ರ

Update: 2018-03-06 13:13 GMT

ಬೆಂಗಳೂರು, ಮಾ.6: ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ(ಕೆಪಿಜೆಪಿ)ಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ 45 ದಿನದಲ್ಲಿ ಹೊಸ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಲಿದ್ದೇವೆ ಎಂದು ನಟ ಉಪೇಂದ್ರ ತಿಳಿಸಿದರು.

ಮಂಗಳವಾರ ತಾವರೆಕೆರೆ ಸಮೀಪದ ರುಪ್ಪೀಸ್ ರೆಸ್ಟೋರೆಂಟ್‌ನಲ್ಲಿ ಪ್ರಜಾಕೀಯ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಜೆಪಿಯ ಸಂಸ್ಥಾಪಕ ಮಹೇಶ್ ಗೌಡ ರಾಜಕೀಯ ಮಾಡಲು ಹೊರಟಿದ್ದಾರೆ. ಹೀಗಾಗಿ ಪ್ರಜಾಕೀಯ ಮಾಡಲು ಬಯಸುವ ನಮಗೆ ಅವರೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲವೆಂದು ತಿಳಿಸಿದರು.

ಈ ಕ್ಷಣದಿಂದ ನನಗೂ ಕೆಪಿಜೆಪಿಗೂ ಯಾವುದೆ ಸಂಬಂಧವಿಲ್ಲ. ನಾನು ಹಾಗೂ ನನ್ನ ಬೆಂಬಲಿತ ಅಭ್ಯರ್ಥಿಗಳು ಕೆಪಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ. ನಾವೆಲ್ಲರೂ ರಾಜಕೀಯ ಒಪ್ಪಿಕೊಂಡು ಬಂದವರಲ್ಲ. ಪ್ರಜಾಕೀಯವನ್ನೆ ಉಸಿರಾಗಿಸಿಕೊಂಡು, ಅದರಲ್ಲೇ ಹೋರಾಡಲು ಬಂದವರು. ಹೀಗಾಗಿ ಕೆಪಿಜೆಪಿಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಉಪೇಂದ್ರ ಘೋಷಣೆ ಮಾಡಿದರು.

ಟಿಕೆಟ್ ಹಂಚಿಕೆಯಲ್ಲಿ ಭಿನ್ನಮತ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮತ್ತು ಉಪೇಂದ್ರ ಮಧ್ಯೆ ಭಿನ್ನಮತ ಸ್ಫೋಟಗೊಂಡಿತ್ತು. ನಟ ಉಪೇಂದ್ರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿರುವುದರ ಕುರಿತು ಮಹೇಶ್‌ಗೌಡ ಸೇರಿದಂತೆ ಪಕ್ಷದ ಹಲವರು ಬೇಸರ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಕೆಪಿಜೆಪಿಯಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದವು. ಭಿನ್ನಮತ ಹೆಚ್ಚಾದ ಪರಿಣಾಮ ನಟ ಉಪೇಂದ್ರ ನೇತೃತ್ವದ ಬಣ ಪಕ್ಷದಿಂದ ಹೊರ ಬಂದಿದೆ.

ಹೊಸ ಪಕ್ಷದ ಸ್ಥಾಪನೆ: ನಾನೂ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕೆಪಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ. ಈಗಾಗಲೇ ತಜ್ಞರ ಅಭಿಪ್ರಾಯ ಪಡೆಯಲಾಗಿದ್ದು, 45 ದಿನದಲ್ಲಿ ಹೊಸ ಪಕ್ಷ ರಚಿಸಬಹುದಾಗಿದೆ. ನಮ್ಮ ಬೆಂಬಲಿಗರೆಲ್ಲರೂ ಹೊಸ ಪಕ್ಷದ ಸದಸ್ಯತ್ವ ಪಡೆಯಲಿದ್ದು, ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ನಟ ಉಪೇಂದ್ರ ಹೇಳಿದರು.

ನಾವು ಪ್ರಜಾಕೀಯ ಮಾಡುವ ಮನಸ್ಸುಳ್ಳವರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕೂಡ ಮುಂದಿನ ದಿನಗಳಲ್ಲಿ ಪ್ರಜಾಕೀಯ ಮಾಡಬಹುದು. ಈಗಾಗಲೇ ನಮ್ಮಲ್ಲಿ 200 ಜನ ಅಭ್ಯರ್ಥಿಗಳು ಇದ್ದಾರೆ. ಅದರಲ್ಲಿ 150 ಅಭ್ಯರ್ಥಿಗಳ ಪಟ್ಟಿ ಮಾಡಿದ್ದೇವೆ. ಇನ್ನೂ 100 ಜನ ಬರುವವರಿದ್ದಾರೆ ಎಂದು ಅವರು ವಿವರಿಸಿದರು.

ಕೆಪಿಜೆಪಿಗೆ ನಟ ಉಪೇಂದ್ರ ರಾಜೀನಾಮೆ ನೀಡುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿದ್ದ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ. ಈಗ ಹೊಸ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯ ಮಗ್ನರಾಗಿದ್ದು, ಕೆಲವೆ ದಿನಗಳಲ್ಲಿ ಹೊಸ ಪಕ್ಷ ಘೋಷಣೆಯಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ.
-ಪ್ರಿಯಾಂಕಾ, ನಟಿ ಹಾಗೂ ಉಪೇಂದ್ರ ಪತ್ನಿ

ಕೆಪಿಜೆಪಿ ಸ್ಥಾಪಕ ಮಹೇಶ್ ಗೌಡರ ಮನಸ್ಸಿನಲ್ಲಿ ಉಪೇಂದ್ರರವರ ಕುರಿತು ಇಂತಹ ದುರುದ್ದೇಶವಿದೆ ಎನ್ನುವುದು ಗೊತ್ತಿರಲಿಲ್ಲ. ಹೀಗಾಗಿ ಉಪೇಂದ್ರ ಹಾಗೂ ನನ್ನನ್ನು ಒಳಗೊಂಡಂತೆ ಹಲವು ಮಂದಿ ಕೆಪಿಜೆಪಿಗೆ ರಾಜೀನಾಮೆ ನೀಡಿದ್ದೇವೆ. ನಾವೆಲ್ಲರೂ ಉಪೇಂದ್ರ ನೇತೃತ್ವದ ಹೊಸ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದೇವೆ.
-ರೂಪಾ ಅಯ್ಯರ್ ಚಿತ್ರನಟಿ, ಅಂಕಣಕಾರ್ತಿ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News