‘ಕೈ’ ಟಿಕೆಟ್‌ಗೆ ಆಕಾಂಕ್ಷಿಗಳ ಮಧ್ಯೆ ಭಾರೀ ಪೈಪೋಟಿ: 8 ದಿನಗಳಲ್ಲಿ 1900 ಅರ್ಜಿಗಳು ಬಿಕರಿ
ಬೆಂಗಳೂರು, ಮಾ. 6: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಗೆ ಮೊದಲೇ ರಾಜಕೀಯ ವಲಯದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಆಕಾಕ್ಷಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಕೇವಲ 8 ದಿನಗಳಲ್ಲಿ ಸುಮಾರು 2 ಸಾವಿರದಷ್ಟು ಮಂದಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಯಸಿ ಕಾಂಗ್ರೆಸ್ ಪಕ್ಷದ ಅರ್ಜಿಗಳನ್ನು ಪಡೆದಿದ್ದಾರೆ. ಕಾರ್ಯಕರ್ತರು ಹಾಗೂ ಆಕಾಂಕ್ಷಿಗಳಿಂದ ಟಿಕೆಟ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಟಿಕೆಟ್ ಅರ್ಜಿ ವಿತರಣೆಯನ್ನು ಇನ್ನೂ 5 ದಿನ ವಿಸ್ತರಣೆ ಮಾಡಲಾಗಿದೆ.
ಚುನಾವಣೆಯಲ್ಲಿ ಸಚಿವರು, ಶಾಸಕರು ಸ್ಪರ್ಧಿಸುವ ಜತೆಗೆ ತಮ್ಮ ಕುಟುಂಬ ರಾಜಕಾರಣವೂ ಹೆಚ್ಚಾಗಿದ್ದು, ಮಂತ್ರಿ-ಶಾಸಕರು ತಮ್ಮ ಪುತ್ರ-ಪುತ್ರಿಯರು ಅರ್ಜಿ ಪಡೆದಿರುವುದು ರಾಜಕೀಯ ಕುತೂಹಲ ಕೆರಳಿಸಿದೆ.
ಈ ಬಾರಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಖರೀದಿಸಿದ್ದರೆ, ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮೈಸೂರಿನ ಟಿ.ನರಸೀಪುರದಿಂದ ಸ್ಪರ್ಧಿಸ ಬಯಸಿ ಅರ್ಜಿ ಖರೀದಿಸಿದ್ದಾರೆ. ಜತೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಬೆಂಗಳೂರಿನ ಜಯನಗರದಿಂದ ಕಣಕ್ಕಿಳಿಯ ಬಯಸಿ ಅರ್ಜಿ ಪಡೆದಿದ್ದಾರೆ.
ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ತುಮಕೂರಿನ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಲು ಅರ್ಜಿ ಪಡೆದಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಕಚೇರಿಯಲ್ಲಿ ಅರ್ಜಿ ನೀಡಲಾಗುತ್ತಿದ್ದು, ಮಾ. 10ರ ವರೆಗೆ ಅರ್ಜಿ ವಿತರಣೆ ಅವಧಿ ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿ ಇದುವರೆಗೂ 1,900 ಅರ್ಜಿಗಳು ಮಾರಾಟವಾಗಿದ್ದು, ಪ್ರತಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಲ್ಲೆ 5 ಮಂದಿ ಸ್ಪರ್ಧಾಕಾಂಕ್ಷಿಗಳು ಇದ್ದಾರೆ. ಅರ್ಜಿ ಶುಲ್ಕ 100ರೂ.ಗಳಾಗಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಮಾ.15 ಕೊನೆಯ ದಿನವಾಗಿದೆ ಎಂದು ತಿಳಿಸಲಾಗಿದೆ.
‘ಟಿಕೆಟ್ ಆಕಾಂಕ್ಷಿಗಳು ಅರ್ಜಿ ಜತೆ ಶುಲ್ಕವನ್ನು ಸಲ್ಲಿಸಬೇಕಾಗಿದ್ದು, ಸಚಿವರುಗಳಿಗೆ 1 ಲಕ್ಷ ರೂ., ಶಾಸಕರುಗಳಿಗೆ 50 ಸಾವಿರ ರೂ., ನಿಗಮ ಮಂಡಳಿ ಅಧ್ಯಕ್ಷರುಗಳಿಗೆ 25 ಸಾವಿರ ರೂ., ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 20 ಸಾವಿರ ರೂ. ಹಾಗೂ ಎಸ್ಸಿ-ಎಸ್ಟಿಗಳಿಗೆ 10ಸಾವಿರ ರೂ.ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ’
-ವಿ.ವೈ.ಘೋರ್ಪಡೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ