×
Ad

ಪಿಎಚ್‌ಡಿ ಅಧ್ಯಯನ ನಡೆಸುವ ತಲಾ ಐದು ವಿದ್ಯಾರ್ಥಿಗಳಿಗೆ ಫೆಲೋಶಿಪ್: ಸಚಿವ ತನ್ವೀರ್‌ಸೇಠ್

Update: 2018-03-06 20:18 IST

ಬೆಂಗಳೂರು, ಮಾ.6: 2018-19ನೆ ಸಾಲಿನಿಂದ ವಕ್ಫ್ ಹಾಗೂ ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಪಿಎಚ್‌ಡಿ ಸಂಶೋಧನೆ, ಅಧ್ಯಯನ ನಡೆಸುವ ತಲಾ ಐದು ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್‌ಸೇಠ್ ಪ್ರಕಟಿಸಿದರು.

ಮಂಗಳವಾರ ರಾಜ್ಯ ಉರ್ದು ಅಕಾಡೆಮಿ ವತಿಯಿಂದ ಎಡಿಎ ರಂಗಮಂದಿರದಲ್ಲಿ ಆಯೋಜಿಸಿದ್ದ 2014, 2015 ಹಾಗೂ 2016ನೆ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಉರ್ದು ಅಕಾಡೆಮಿಯ ಪ್ರಶಸ್ತಿಗಳನ್ನು ಇನ್ನು ಮುಂದೆ ಆಯಾ ಸಾಲಿನಲ್ಲೆ ಪ್ರದಾನ ಮಾಡಲು ಕ್ರಮ ಕೈಗೊಳ್ಳಲಾಗುವುದು. ಖವ್ವಾಲಿ, ಕವಿಗೋಷ್ಠಿಗಳಿಂದ ಉರ್ದು ಭಾಷೆಯ ಅಭಿವೃದ್ಧಿಯಾಗುವುದಿಲ್ಲ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉರ್ದು ಅಕಾಡೆಮಿಯ ಬಜೆಟ್ ಅನ್ನು 2.15 ಕೋಟಿ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, 50 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲು ಆದೇಶ ಹೊರಡಿಸಲಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ ಕೈಗೊಳ್ಳುತ್ತಿರುವ ಕ್ರಮಗಳನ್ನು ಮೆಚ್ಚಿ ಇತ್ತೀಚೆಗಷ್ಟೆ ಮಲೇಶಿಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ನಮಗೆ ನೀಡಿದ್ದಾರೆ. ನಾವು ರಚಿಸಿರುವ ವಕ್ಫ್ ನಿಯಮಗಳು-2017 ಅನ್ನು ದೇಶದ ಇತರ ರಾಜ್ಯಗಳು ಅನುಸರಿಸಲು ಮುಂದೆ ಬಂದಿವೆ ಎಂದು ಅವರು ಹೇಳಿದರು.

ಉರ್ದು ಭಾಷೆ ಅಪಾಯದಲ್ಲಿದೆ. ಸತ್ಯ ಹೇಳುವಾಗ ಕೆಲವು ಸಂದರ್ಭದಲ್ಲಿ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ನನ್ನನ್ನು ಉರ್ದು ವಿರೋಧಿ ಎಂದು ಕರೆದರು. ನನ್ನ ಪ್ರತಿಕೃತಿಗಳನ್ನು ದಹನ ಮಾಡಿದರು. ಉರ್ದು ನನ್ನ ಮಾತೃ ಭಾಷೆಯಾಗಿದ್ದು, ಅದರ ಬಗ್ಗೆ ಅಪಾರವಾದ ಗೌರವವಿದೆ ಎಂದು ಅವರು ತಿಳಿಸಿದರು.

ಅಲ್ಪಸಂಖ್ಯಾತರ ಶಿಕ್ಷಣ ಇಲಾಖೆ ವತಿಯಿಂದ ಮದ್ರಸಾಗಳಲ್ಲಿ ಕೊಠಡಿಗಳ ನಿರ್ಮಾಣ, ದುರಸ್ತಿಗಾಗಿ 55 ಕೋಟಿ ರೂ., ಉರ್ದು ಶಾಲೆಗಳ ಅಭಿವೃದ್ಧಿಗಾಗಿ 8 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಉರ್ದು ಅಕಾಡೆಮಿ ವತಿಯಿಂದ 22 ಉರ್ದು ಡಿಟಿಪಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತನ್ವೀರ್‌ಸೇಠ್ ಹೇಳಿದರು.

2011-12ರಲ್ಲಿ 444 ಕೋಟಿ ರೂ.ಗಳಿದ್ದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ, 2016-17ರಲ್ಲಿ 1586 ಕೋಟಿ ರೂ., 2017-18ರಲ್ಲಿ 2750 ಕೋಟಿ ರೂ.ಹಾಗೂ 2018-19ರಲ್ಲಿ 3004 ಕೋಟಿ ರೂ.ಗಳಾಗಿದೆ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವಾದಲ್ಲಿ ಹೆಚ್ಚುವರಿಯಾಗಿ 730 ಕೋಟಿ ರೂ.ಲಭ್ಯವಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಉರ್ದು ಹಾಲ್ ನಿರ್ಮಾಣ ಮಾಡಬೇಕೆಂಬ 50 ವರ್ಷಗಳ ಕನಸು ಈಗ ನನಸಾಗುತ್ತಿದೆ. ಶೇಷಾದ್ರಿಪುರಂನಲ್ಲಿ ಲಭ್ಯವಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಮೌಲಾನ ಆಝಾದ್ ಭವನ, ಉರ್ದು ಹಾಲ್ ನಿರ್ಮಾಣವಾಗಲಿದೆ. ಇದಕ್ಕಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತನ್ವೀರ್‌ಸೇಠ್ ಹೇಳಿದರು.

ಪ್ರತಿ ಜಿಲ್ಲೆಯಲ್ಲೂ ಉರ್ದು ಹಾಲ್ ನಿರ್ಮಾಣ ಮಾಡಬೇಕೆಂಬ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸಲಾಗುವುದು. ಉರ್ದು ಭಾಷೆಯ ಬೆಳವಣಿಗೆ, ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡುತ್ತಿರುವ ಪ್ರಶಸ್ತಿ ನಗದು ಮೊತ್ತವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.

2017-18ನೆ ಸಾಲಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 100 ಮೌಲಾನ ಆಝಾದ್ ಮಾದರಿ ಶಾಲೆಗಳನ್ನು ಆರಂಭಿಸಲಾಗಿದೆ. 700 ಶಿಕ್ಷಕರ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಖ್ವಾಜಾ ಬಂದೇ ನವಾಝ್ ವಿಶ್ವವಿದ್ಯಾಲಯ ವಿಧೇಯಕಕ್ಕೆ ಅನುಮೋದನೆ ದೊರೆತಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

2017-18ನೆ ಸಾಲಿನಲ್ಲಿ 500 ಉರ್ದು ಶಿಕ್ಷಕರಿಗೆ ಇಂಗ್ಲಿಷ್ ತರಬೇತಿ ನೀಡಲಾಗಿದೆ. ಮದ್ರಸಾಗಳ ಆಧುನೀಕರಣ ಯೋಜನೆಯಡಿಯಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜತೆಗೆ ಗಣಿತ, ಇಂಗ್ಲಿಷ್ ಹಾಗೂ ಕಂಪ್ಯೂಟರ್ ಶಿಕ್ಷಣ ಒದಗಿಸಲು 55 ಕೋಟಿ ರೂ.ಒದಗಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ಕೆಎಂಡಿಸಿ ಅಧ್ಯಕ್ಷ ಎಂ.ಎ.ಗಫೂರ್, ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್, ರಾಜ್ಯ ಉರ್ದು ಅಕಾಡೆಮಿಯ ಅಧ್ಯಕ್ಷ ಡಾ.ಸೈಯ್ಯದ್ ಖಾದಿರ್ ನಾಝಿಮ್ ಸರ್ಗಿರೋ, ರಿಜಿಸ್ಟ್ರಾರ್ ಸಿರಾಜ್ ಅಹ್ಮದ್ ಖಾಲಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಲಬುರ್ಗಿ ಜಿಲ್ಲೆಯ ಕವಿ ದಿವಂಗತ ಮುಹಮ್ಮದ್ ಹಬೀಬ್(ಹಝ್ರತ್ ಸಾಬಿರ್ ಶಾಹಬಾದಿ) ಅವರ ಐದು ದಶಕಗಳ ಸುದೀರ್ಘ ಉರ್ದು ಸಾಹಿತ್ಯ ಸೇವೆಗೆ ರಾಜ್ಯ ಸರಕಾರದ ವತಿಯಿಂದ 5 ಲಕ್ಷ ರೂ.ಗಳ ವಿಶೇಷ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News