ರಾಜ್ಯ ಸರಕಾರ ಯಾವುದರಲ್ಲಿ ನಂ.1: ಮುರುಳೀಧರ್ ರಾವ್ ಪ್ರಶ್ನೆ

Update: 2018-03-06 14:59 GMT

ಬೆಂಗಳೂರು, ಮಾ. 6: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಗರದ ತುಂಬ ‘ನಂ.1 ಕರ್ನಾಟಕ ರಾಜ್ಯ’ ಎಂದು ಫಲಕಗಳನ್ನು ಹಾಕಿದ್ದು, ಅವರು ಯಾವುದರಲ್ಲಿ ನಂ.1, ಗೂಂಡಾ ವರ್ತನೆಯಲ್ಲೊ, ಮಾಫಿಯಾದಲ್ಲೋ ಎಂದು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿನ ಚಾಮರಾಜಪೇಟೆಯಲ್ಲಿ ಬಿಜೆಪಿ ಏರ್ಪಡಿಸಿದ್ದ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರಕಾರ ನಂ.1 ಆಗಿದೆ. ಬೆಂಗಳೂರು ಕ್ರೈಂ ಸಿಟಿಯಾಗಿದೆ. ಹೀಗಾಗಿ ಈ ಸರಕಾರವನ್ನು ಕಿತ್ತೊಗೆಯಬೇಕು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಪಕ್ಷ ನಿರ್ನಾಮವಾಗಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್ ಎಲ್ಲ ಕಡೆ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಇದೀಗ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು.

ಮಾಜಿ ಡಿಸಿಎಂ ಆರ್.ಅಶೋಕ್ ಮಾತನಾಡಿ, ಚಾಮರಾಜಪೇಟೆಯಲ್ಲಿ ಬಿಜೆಪಿ ಎರಡು ಬಾರಿ ಗೆದ್ದಿದೆ. ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ ಪಕ್ಷಗಳು ಒಂದೇ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹೀಗಾಗಿ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಸುಲಭ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು. ಆದರೆ, ಗೂಂಡಾಗಳನ್ನು ಕಳುಹಿಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಅಶೋಕ್ ದೂರಿದರು. ಈ ವೇಳೆ ಸಂಸದ ಪಿ.ಸಿ. ಮೋಹನ್, ಮೇಲ್ಮನೆ ಸದಸ್ಯೆ ತಾರಾ ಅನುರಾಧ, ಮಾಳವಿಕಾ ಅವಿನಾಶ್, ನೆ.ಲ. ನರೇಂದ್ರ ಬಾಬು ಹಾಜರಿದ್ದರು.

ಕೈ-ಕಮಲ ಜಟಾಪಟಿ: ಚಾಮರಾಜಪೇಟೆಯಲ್ಲಿ ಬಿಜೆಪಿ ಏರ್ಪಡಿಸಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಪರ-ವಿರೋಧ ಘೋಷಣೆ ಕೂಗಿದ್ದು ನಡೆಯಿತು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಗೊತ್ತಾಗಿದೆ.

ಸಂಚಾರ ದಟ್ಟಣೆ: ‘ಬಿಜೆಪಿ ಹಮ್ಮಿಕೊಂಡಿದ್ದ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಹಿನ್ನೆಲೆಯಲ್ಲಿ ನಗರದ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರು, ದ್ವಿಚಕ್ರ ವಾಹನಗಳ ಸವಾರರು ಸುಡು ಬಿಸಿಲಿನಲ್ಲಿ ಕಂಗೆಟ್ಟಿದ್ದಲ್ಲದೆ, ತೀವ್ರ ಸಂಕಷ್ಟಕ್ಕೆ ಸಿಲುಕಿದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News