ನಿತ್ಯಾನಂದ, ಶಿಷ್ಯರ ವಿರುದ್ದ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ತಡೆ

Update: 2018-03-06 15:25 GMT

ಬೆಂಗಳೂರು, ಮಾ.6: ಭಕ್ತೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಹಾಗೂ ಅವರ ಐವರು ಭಕ್ತರ ವಿರುದ್ಧ ರಾಮನಗರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.

ಅತ್ಯಾಚಾರ ಪ್ರಕರಣದ ಆರೋಪಗಳಿಂದ ಮುಕ್ತಗೊಳಿಸಲು ಕೋರಿ ನಿತ್ಯಾನಂದ ಹಾಗೂ ಆತನ ಶಿಷ್ಯರಾದ ಗೋಪಾಲ ಶೀಲಂ ರೆಡ್ಡಿ, ಶಿವ ವಲ್ಲಭನೇನಿ, ರಾಗಿಣಿ ವಲ್ಲಭನೇನಿ, ಧನಶೇಖರ ಮತ್ತು ಜಮುನ ರಾಣಿ ಸಲ್ಲಿಸಿರುವ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬುಧವಾರ ಅರ್ಜಿದಾರರ ವಿರುದ್ಧ ಆರೋಪಗಳನ್ನು ರಚಿಸಲು ಅಧೀನ ನ್ಯಾಯಾಲಯ ಮುಂದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪದಿಂದ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅರ್ಜಿಯು ವಿಚಾರಣಾ ಹಂತದಲ್ಲಿದೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಕೆಲಕಾಲ ಮುಂದೂಡುವಂತೆ ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಆದರೆ ಈ ಮನವಿಯನ್ನು ತಿರಸ್ಕರಿಸಿಸುವ ಅಧೀನ ನ್ಯಾಯಾಲಯ, ಮಾ.7ರಂದು ಅರ್ಜಿದಾರರ ವಿರುದ್ಧ ಆರೋಪ ರಚಿಸುವುದಾಗಿ ತಿಳಿಸಿದೆ. ಹೀಗಾಗಿ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದರು.

ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಅಧೀನ ನ್ಯಾಯಾಲಯದಲ್ಲಿ ನಿತ್ಯಾನಂದ ಹಾಗೂ ಇತರ ಐವರ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ, ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಪ್ರಕರಣವೇನು: ಬಿಡದಿ ಧ್ಯಾನಪೀಠದಲ್ಲಿ ಭಕ್ತೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಕರಣದ ಸಂಬಂಧ ತನಿಖಾಧಿಕಾರಿಗಳು ಸಲ್ಲಿಸಿದ್ದ ದೋಷಾರೋಪ ಪಟ್ಟಿ ಆಧರಿಸಿ ಆರೋಪಗಳನ್ನು ರಚಿಸಿ ವಿಚಾರಣೆ ನಡೆಸುವಂತೆ ರಾಮನಗರ ಸೆಷನ್ಸ್ ನ್ಯಾಯಾಲಯಕ್ಕೆ 2017ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಅದರಂತೆ ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ಆರೋಪಗಳಿಂದ ಮುಕ್ತಗೊಳಿಸುವಂತೆ ಕೋರಿ ನಿತ್ಯಾನಂದ ಮತ್ತವರ ಶಿಷ್ಯರು ಸಲ್ಲಿಸಿದ್ದ ಅರ್ಜಿಗಳನ್ನು ಸೆಷನ್ಸ್ ನ್ಯಾಯಾಲಯ ಫೆ.19ರಂದು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News