ಎಸ್ಸಿ, ಎಸ್ಟಿ ಸಮುದಾಯಕ್ಕೆ ಬ್ಯಾಂಕ್‌ಗಳು ಸಾಲ ನೀಡಲಿ: ಎಂ.ಲಕ್ಷ್ಮಿನಾರಾಯಣ

Update: 2018-03-06 15:31 GMT

ಬೆಂಗಳೂರು, ಮಾ.6: ರಾಜ್ಯ ಸರಕಾರ ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡುತ್ತಿರುವ ಅನುದಾನಗಳಿಗೆ ಪೂರಕವಾಗಿ ಬ್ಯಾಂಕ್‌ಗಳೂ ಸಾಲ ಸೌಲಭ್ಯ ನೀಡಿದರೆ ದಲಿತ ಸಮುದಾಯ ಉದ್ಯಮಿಗಳಾಗಲು ಸಾಧ್ಯವಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ತಿಳಿಸಿದರು.

ಮಂಗಳವಾರ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್ ನಗರದ ಅಶೋಕ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕ ದಲಿತ ಉದ್ದಿಮೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಬ್ಯಾಂಕ್‌ಗಳು ಲಕ್ಷಾಂತರ ರೂ.ವನ್ನು ವಿವಿಧ ಸಮುದಾಯದ ಜನರಿಗೆ ಸಾಲ ಕೊಡುತ್ತದೆ. ಆದರೆ, ದಲಿತ ಸಮುದಾಯಕ್ಕೆ ಸಾಲ ನೀಡುವ ಪ್ರಮಾಣ ಕಡಿಮೆಯಿದೆ. ಇದು ಬದಲಾಗಬೇಕು ಎಂದು ತಿಳಿಸಿದರು.

ರಾಜ್ಯ ಸರಕಾರ ದಲಿತ ಸಮುದಾಯದ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ನೀಡಿವೆ. ಮುಖ್ಯವಾಗಿ ಉದ್ಯಮ ಕ್ಷೇತ್ರದ ಪರವಾಗಿ ಹಲವು ಯೋಜನೆಗಳನ್ನು ರೂಪಿಸಿವೆ. ಆದರೆ, ಆ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ದಲಿತ ಸಮುದಾಯದ ಹಿಂದುಳಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಉದ್ಯಮಿಗಳಾಗಿ ಬೆಳೆಯುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಅಪರ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಮಾತನಾಡಿ, ದಲಿತ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆದಿದೆ. ಆದರೆ, ವಾಣಿಜ್ಯ ಕ್ಷೇತ್ರದಲ್ಲಿ ಇತರೆ ಸಮುದಾಯಗಳಿಗೆ ಹೋಲಿಸಿದರೆ ಸಾಕಷ್ಟು ಹಿಂದುಳಿದಿದೆ. ಹೀಗಾಗಿ ದಲಿತ ಸಮುದಾಯ ಉದ್ಯಮಿಗಳಾಗಿ ರೂಪಗೊಳ್ಳಬೇಕಾಗಿದೆ ಎಂದು ಆಶಿಸಿದರು.

ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಇಂಡಸ್ಟ್ರಿಯಲಿಸ್ಟ್ಸ್ ಅಸೋಸಿಯೇಷನ್ ಕಾರ್ಯಧ್ಯಕ್ಷ ಶ್ರೀನಿವಾಸನ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದ ಇಷ್ಟು ವರ್ಷಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಸಮುದಾಯ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯನವಾಗಿದೆ. ಕೋಟ್ಯಂತರ ರೂ.ಅನುದಾನ, ಉಚಿತ ನಿವೇಶನ, ಉದ್ಯಮ ಪ್ರಾರಂಭಿಸಲು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಐಎಡಿಬಿಯ ಕಾರ್ಯನಿರ್ವಾಹಕ ಸದಸ್ಯ ಜಯರಾಂ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ವಿಕಾಸ್ ಕುಮಾರ್‌ವಿಕಾಸ್, ಎಸ್‌ಐಡಿಬಿಐನ ಪ್ರಧಾನ ವ್ಯವಸ್ಥಾಪಕ ಎ.ಸಿ.ಸಾಹು, ಎನ್‌ಎಸ್‌ಐಸಿಯ ರವಿಕುಮಾರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News