×
Ad

ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ: ಪಿ.ಜಿ.ಆರ್.ಸಿಂಧ್ಯಾ

Update: 2018-03-06 21:12 IST

ಬೆಂಗಳೂರು, ಮಾ.6: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮುಂದಿನ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರಿನ 27 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ‘ವಿಕಾಸ ಪರ್ವ’ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಮಂಗಳವಾರ ನಗರದ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನ ಬಳಿಯಿಂದ ಪಾದಯಾತ್ರೆಗೆ ಚಾಲನೆ ನೀಡಿದ ಜೆಡಿಎಸ್ ಪಕ್ಷದ ಮುಖಂಡರು, ಬಳಿಕ ಎನ್.ಆರ್.ಕಾಲನಿಯಲ್ಲಿ ಬಹಿರಂಗ ಸಭೆ ನಡೆಸಿ, ಸಾರ್ವಜನಿಕರಿಗೆ ಪಕ್ಷದ ಯೋಜನೆಗಳ ಬಗೆಗಿನ ಕರಪತ್ರ ಹಂಚಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ನಟ ಉಪೇಂದ್ರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರೆ ಸ್ವಾಗತ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನ ಒಪ್ಪಿ ಯಾರೇ ಬರಬಹುದು. ಇನ್ನು ಸದನ ಸಮಿತಿಯಲ್ಲಿ ಆರೋಪ ಇರುವವರು, ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನ ನಾವು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳೋದಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿದ್ದೀರಿ. ಯಾವುದೇ ರೀತಿಯ ಪ್ರಗತಿ ಕಾಣಲಿಲ್ಲ. ಬರೀ ಓಲೈಕೆ ರಾಜಕೀಯ ಹೆಚ್ಚಾಗಿದೆ. ಹೀಗಾಗಿ, ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ತಮಗೆ ಸಿಕ್ಕ ಸಮಯದಲ್ಲಿ ಬೆಂಗಳೂರನ್ನು ದೇಶದಲ್ಲೇ ಮಾದರಿ ಮಾಡಬಹುದಿತ್ತು. ಆದರೆ, ಕಾಂಗ್ರೆಸ್ ಈ ಕಾರ್ಯ ಮಾಡಲಿಲ್ಲ. ಬಿಜೆಪಿ, ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದ ಅವರು, ಬೆಂಗಳೂರು ನಗರಕ್ಕೆ ಅವಶ್ಯಕತೆಯಿರುವ ಕುಡಿಯುವ ನೀರಿಗೆ ಕಾವೇರಿ ನದಿ ಮತ್ತು ಇತರೆ ನದಿ ಮೂಲಗಳಿಂದ ಕುಡಿಯುವ ನೀರಿನ ವ್ಯವಸ್ಥೆ, ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣ್, ಶಾಸಕ ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ಬೆಂಗಳೂರು ಜಿಲ್ಲಾಧ್ಯಕ್ಷ ಆರ್.ಪ್ರಕಾಶ್, ಬಸವನಗುಡಿ ಜೆಡಿಎಸ್ ಅಭ್ಯರ್ಥಿ ಬಾಗೇಗೌಡ, ರಮೇಶ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News