ಬೆಂಗಳೂರು: ಲೆನಿನ್ ಪ್ರತಿಮೆ ಧ್ವಂಸ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

Update: 2018-03-06 16:31 GMT

ಬೆಂಗಳೂರು, ಮಾ. 6: ತ್ರಿಪುರ ಚುನಾವಣಾ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರು ದ್ವೇಷ ಮತ್ತು ಅಧಿಕಾರದ ಮದದಿಂದ ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ್ದಾರೆಂದು ಆರೋಪಿಸಿ ಎಸ್‌ಯುಸಿಐ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೆನಿನ್ ಪ್ರತಿಮೆ ಧ್ವಂಸಗೊಳಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಪ್ರತಿಮೆಗೆ ಹಾನಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು, ನಾಗರಿಕ ಸಮಾಜದಲ್ಲಿ ತಾಲಿಬಾನಿ ಅಸಹಿಷ್ಣುತೆ ಬಿತ್ತಿ, ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯಲು ಯತ್ನಿಸುತ್ತಿರುವ ಬಿಜೆಪಿಯ ಕುತಂತ್ರಕ್ಕೆ ನಾವು ಬಲಿಯಾಗಬಾರದು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಎಸ್‌ಯುಸಿಐ ಮುಖಂಡ ಡಾ.ಟಿ.ಎಸ್. ಸುನೀತ್ ಕುಮಾರ್, ಜನತಂತ್ರ ವಿರೋಧಿ ಕೃತ್ಯವನ್ನು ಎಲ್ಲರೂ ಖಂಡಿಸಬೇಕು. ಲೆನಿನ್ ಕೇವಲ ರಷ್ಯಾದ ನಾಯಕರಲ್ಲ. ಮೊದಲ ಸಮಾಜವಾದಿ ಸಮಾಜವನ್ನು ಸ್ಥಾಪಿಸಿ, ಇಡೀ ವಿಶ್ವದ ಮುಂದೆ ಹೊಸದೊಂದು ಸಮಾಜದ ಮಾದರಿಯನ್ನು ಇಟ್ಟವರು ಲೆನಿನ್ ಎಂದು ಸ್ಮರಿಸಿದರು.

ಸಮ ಸಮಾಜ, ಸರ್ವರಿಗೂ ನ್ಯಾಯ ದೊರಕಿಸಿಕೊಡುವ, ಎಲ್ಲರಿಗೂ ಗೌರವಯುತವಾದ ಬದುಕನ್ನು ಖಾತ್ರಿ ಪಡಿಸಿದ ವ್ಯವಸ್ಥೆಯನ್ನು ರೂಪಿಸಿದ ಮಹಾನ್ ಶಿಲ್ಪಿ ಲೆನಿನ್. ಆದುದರಿಂದ, ಅವರು ವಿಶ್ವದ ನಾಯಕ. ದುಡಿಯುವ ಜನ ಸಮುದಾಯಕ್ಕೆ ನಲ್ಮೆಯ ದಾರಿದೀಪ ಲೆನಿನ್ ಎಂದು ಬಣ್ಣಿಸಿದರು.

ಅಧಿಕಾರದ ಮದದಿಂದ ಲೆನಿನ್ ಪ್ರತಿಮೆ ನಾಶಮಾಡುವುದೆಂದರೆ ಅದು ಲೆನಿನ್‌ರಿಗೆ ಎಸಗುವ ಅಪಚಾರವಲ್ಲ, ಜನತಂತ್ರಕ್ಕೆ ಎಸಗುವ ಅಪಮಾನ. ಈ ಘಟನೆಯಿಂದ, ಹಿಂದುತ್ವ ಬೋಧಿಸುವ ಬಿಜೆಪಿಯು ಇತರ ಜೀವನ ಸಿದ್ಧಾಂತಗಳ ಬಗ್ಗೆ ತಾನೆಷ್ಟು ಅಸಹಿಷ್ಣು ಎಂಬುದನ್ನು ಇನ್ನೊಮ್ಮೆ ಎತ್ತಿ ತೋರಿಸಿದೆ. ಇದು ಬಿಜೆಪಿ ನಾಯಕರ ಅಸ್ವಸ್ಥ ಮನಸ್ಸಿನ ಅಪ್ರಜಾತಾಂತ್ರಿಕ ಧೋರಣೆಗೆ ಸಾಕ್ಷಿ ಎಂದು ಟೀಕಿಸಿದರು.

ಹನುಮೇಶ್ ಮಾತನಾಡಿ, ತ್ರಿಪುರಾ ಚುನಾವಣೆಯಲ್ಲಿ ಗೆದ್ದು ವಿಜೃಂಭಿಸುತ್ತಿರುವ ಬಿಜೆಪಿ ಕಾರ್ಯಕರ್ತರು ಲೆನಿನ್‌ರ ಪ್ರತಿಮೆಗೆ ಧಕ್ಕೆಯನ್ನುಂಟು ಮಾಡಿದ್ದು ಅತ್ಯಂತ ಆಘಾತಕಾರಿಯಾಗಿದೆ. ಆದರೆ, ಮುಖ್ಯ ಪ್ರಶ್ನೆ ಎಂದರೆ, ಒಂದು ಪ್ರತಿಮೆಯನ್ನು ನಾಶಮಾಡುವಷ್ಟು ದ್ವೇಷ ಸರಿಯಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News