ಮಹಿಳೆಯರು ಜಾಗೃತರಾಗಿರಬೇಕು: ಜಿಗಣಿ ಶಂಕರ್
ಬೆಂಗಳೂರು, ಮಾ.6: ನಗರ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಿದಂತೆ ಅಪರಾಧ ಪ್ರಕರಣಗಳು ಅಧಿಕವಾಗುತ್ತಿವೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ಮಹಿಳೆಯರು ಜಾಗೃತರಾಗಿರಬೇಕೆಂದು ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಕರೆ ನೀಡಿದ್ದಾರೆ.
ಮಂಗಳವಾರ ಜಯಂತಿ ಕ್ರಿಯೇಶನ್‌ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ‘ಹುಷಾರಮ್ಮ ಹುಷಾರು’ ವೀಡಿಯೋ ಸಿ.ಡಿ. ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ, ಅದರಂತೆ ಕೊಲೆ, ಸುಲಿಗೆ, ದರೋಡೆಯಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಮಹಿಳೆಯರು ಜಾಗರೂಕರಾಗಬೇಕು ಎಂದರು.
ಮಹಿಳೆಯರ ಸುರಕ್ಷತೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಇಂದು ಹುಷಾರಮ್ಮ ಹುಷಾರು ವೀಡಿಯೋ ಸಿ.ಡಿ. ಹಾಗೂ ಪುಸ್ತಕ ಬಿಡುಗಡೆಗೊಳಿಸಲಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಎದುರಾಗುವ ಸಮಸ್ಯೆಗಳನ್ನು ಹಾಡು, ದೃಶ್ಯ ಮೂಲಕ ತೋರಿಸಲಾಗಿದೆ. ಮಹಿಳಾ ಸುರಕ್ಷತೆ ದೃಷ್ಟಿಯಿಂದ ಜಯಂತಿ ಕ್ರಿಯೇಶನ್‌ನ ಸಾಲೋಮನ್ ಜಿ, ಚಾಂದಿನಿಶೆಟ್ಟಿ ಇಂತಹ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಹಿರಿಯ ಚಿತ್ರನಟ ರಾಜೇಶ್ ಮಾತನಾಡಿ, ಕಳೆದ 50 ವರ್ಷಗಳಲ್ಲಿ ಮೈನಡುಗಿಸುವ ರೀತಿಯಲ್ಲಿ ಬೆಂಗಳೂರಿನ ಭೂಪಟ ಬದಲಾಗಿದ್ದು, ಪ್ರಚಲಿತ ವಿದ್ಯಮಾನಗಳನ್ನು ನೋಡಿದರೆ ಭಯ ಹುಟ್ಟಿಸುತ್ತದೆ. ಬೇರೆಡೆಯಿಂದ ನಗರಕ್ಕೆ ಬಂದವರು ಐಶಾರಾಮಿ ಜೀವನ ನಡೆಸಲು ಅಪರಾಧದಂತಹ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಹೆಣ್ಣು ಮಕ್ಕಳು ನಿರ್ಭಯವಾಗಿ ಜೀವಿಸುವುದು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯನಟ ರಾಜೇಶ್ ಅವರಿಗೆ ‘ಕರುನಾಡ ಕಲಾ ಮಾಣಿಕ್ಯ ಶಿಖರ’ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಚರ್ಮ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಲಿಡ್‌ಕರ್ ಸೋಮು, ಗಾಯಕಿ ಜಯಲಕ್ಷ್ಮಿ ಆನಂದ್, ಸಂಗೀತ ನಿರ್ದೇಶಕ ಪಳನಿ ಡಿ. ಸೇನಾಧಿಪತಿ, ಕಿರುತೆರೆ ನಟ ಡಾ.ರಾಮಯ್ಯ, ಸುರಕ್ಷ ಪ್ಯಾಕರ್ಸ್ ಅಂಡ್ ಮೂವರ್ಸ್‌ನ ಎಂ.ಪದ್ಮನಾಭನ್, ಸಹಾಯ ಹೃದಯಗಳ ಸಂಘದ ಅಧ್ಯಕ್ಷ ಎ.ಎಂ.ರವಿಚಂದ್ರನ್, ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಶ್ಮಿ ಸೇರಿದಂತೆ ಪ್ರಮುಖರಿದ್ದರು.