×
Ad

ನೇರ ವೇತನ ಪಾವತಿ ಅಸಾಧ್ಯ: ಮಂಜುನಾಥ ಪ್ರಸಾದ್

Update: 2018-03-06 22:06 IST

ಬೆಂಗಳೂರು, ಮಾ.6: ಬಿಬಿಎಂಪಿಯ ಪೌರಕಾರ್ಮಿಕರಿಗೆ ಮಾತ್ರ ನೇರವಾಗಿ ವೇತನ ಪಾವತಿ ಮಾಡಲು ಅವಕಾಶವಿದ್ದು, ಆಟೊ ಹಾಗೂ ಕಾಂಪ್ಯಾಕ್ಟರ್‌ಗಳ ಮೂಲಕ ಕಸ ಸಾಗಣೆ ಮಾಡುವವರಿಗೆ ಪಾಲಿಕೆ ಮೂಲಕ ನೇರವಾಗಿ ವೇತನ ಪಾವತಿ ಅಸಾಧ್ಯ ಎಂದು ಆಯುಕ್ತ ಮಂಜುನಾಥ ಪ್ರಸಾದ್ ಇಂದಿಲ್ಲಿ ಹೇಳಿದರು.

ಮಂಗಳವಾರ ನಗರದ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಪಾಲಿಕೆಯ 2018ರ ಬಜೆಟ್ ಕುರಿತ ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪೌರಕಾರ್ಮಿಕರಿಗೆ ಮಾತ್ರ ನೇರವಾಗಿ ವೇತನ ಪಾವತಿ ಮಾಡುವ ಕುರಿತು ಸರಕಾರದ ಆದೇಶವಿದೆ. ಆದರೆ, ಆಟೋ ಟಿಪ್ಪರ್‌ಗಳು ಹಾಗೂ ಕಾಂಪ್ಯಾಕ್ಟರ್‌ಗಳ ಚಾಲಕರಿಗೆ ಗುತ್ತಿಗೆದಾರರೇ ವೇತನ ನೀಡಬೇಕಾಗುತ್ತದೆ. ಈ ವಿಷಯವನ್ನು ಮುಷ್ಕರ ನಡೆಸುತ್ತಿರುವ ಚಾಲಕರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಚಾಲಕರಿಗೆ ಪಾಲಿಕೆಯಿಂದ ವೇತನ ನೀಡಲಾಗದು. ಆದರೆ, ಚಾಲಕರು, ಹೆಲ್ಪರ್‌ಗಳು ಸೊಸೈಟಿ ಮಾಡಿಕೊಂಡಲ್ಲಿ ಅವರೇ ಆಟೊ ಟಿಪ್ಪರ್‌ಗಳ ಮಾಲಕರಾಗಬಹುದು. ಅವರುಗಳ ಆಟೊ ಟಿಪ್ಪರ್‌ಗಳನ್ನು ಖರೀದಿಸಲು ಮುಂದಾದಲ್ಲಿ ಪಾಲಿಕೆಯೇ ಅವರಿಗೆ ಬ್ಯಾಂಕ್‌ಗಳ ಮೂಲಕ ಹಣಕಾಸಿನ ನೆರವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದರು.

ಹೈದರಾಬಾದ್‌ನಲ್ಲಿ ಇಂತಹ ವ್ಯವಸ್ಥೆ ಇದೆ. ಅದೇ ರೀತಿ ಇಲ್ಲಿಯೂ ಆದಲ್ಲಿ ಚಾಲಕರೇ ಮಾಲಕರಾಗಿ ಮೂರು ವರ್ಷಗಳಲ್ಲಿ ವಾಹನದ ಸಾಲ ತೀರಿಸಬಹುದು. ನಂತರ ವಾಹನಕ್ಕೆ ಸಂಪೂರ್ಣವಾಗಿ ಮಾಲಕರಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News