ಕೇಂದ್ರ ಸರಕಾರದಿಂದ ಕನ್ನಡಿಗರಿಗೆ ಅನ್ಯಾಯ: ಬಿಜೆಪಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ
ಬೆಂಗಳೂರು, ಮಾ.6: ನೈರುತ್ಯ ರೈಲ್ವೆ ಆ್ಯಕ್ಟ್ ಅಪ್ರೆಂಟಿಸ್ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಸಬ್‌ಸ್ಟಿಟ್ಯೂಟ್ ಮುಖಾಂತರ ಖಾಯಂ ಆಗಿ ನೇರ ನೇಮಕಾತಿ ಮಾಡಿಕೊಳ್ಳದೇ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಮಾ.12 ರಂದು ಬಿಜೆಪಿ ಕಚೇರಿ ಎದುರು ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿ ರವಿ ಗಾಣಿಗೇರ, 2010 ರಿಂದ 2017 ರವರೆಗೂ 2,500 ಕ್ಕೂ ಅಧಿಕ ಅಭ್ಯರ್ಥಿಗಳು ನೈರುತ್ಯರೈಲ್ವೆಯ ಹುಬ್ಬಳ್ಳಿ ಮತ್ತು ಮೈಸೂರಿನ ಹಾಗೂ ಬೆಂಗಳೂರಿನ ರೈಲ್ವೆ ಕಾರ್ಯಾಗಾರದಲ್ಲಿ 1 ಮತ್ತು 2 ವರ್ಷ ಆ್ಯಕ್ಟ್ ಅಪ್ರೆಂಟಿಸ್ ತರಬೇತಿ ಪಡೆದಿದ್ದು, ಕೇಂದ್ರ ಸರಕಾರ ನಡೆಸುವ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರವನ್ನು ಪಡೆದಿದ್ದೇವೆ ಎಂದು ಹೇಳಿದರು.
ರಾಜ್ಯದ 26 ಜಿಲ್ಲೆಗಳಲ್ಲಿನ ರೈಲ್ವೆಯಲ್ಲಿ ಇದುವರೆಗೂ ಅಪ್ರೆಂಟಿಸ್ ತರಬೇತಿ ಪಡೆದ ಅಭ್ಯರ್ಥಿಗಳನ್ನು ಖಾಯಂ ಆಗಿ ಕೆಲಸಕ್ಕೆ ಸಬ್‌ಸ್ಟಿಟ್ಯೂಟ್ ಮೂಲಕ ನೇರ ನೇಮಕ ಮಾಡಿಕೊಳ್ಳದೇ ರೈಲ್ವೆ ಇಲಾಖೆ ಮತ್ತು ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ. ಆದರೆ, ಇದೇ ರೀತಿ ಮಹಾರಾಷ್ಟ್ರದ ಮುಂಬೈನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಇದುವರೆಗೂ 4786 ಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ನಮ್ಮನ್ನು ನೇಮಕ ಮಾಡಿಕೊಳ್ಳದೇ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಕರ್ನಾಟಕದ ಅಭ್ಯರ್ಥಿಗಳು ಕಳೆದ ಮೂರು ವರ್ಷಗಳಿಂದ ರೈಲ್ವೆ ಮಂಡಳಿ, ಕೇಂದ್ರ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಆದರೆ, ಸರಕಾರ ಆದೇಶ ಹೊರಡಿಸಿ ಮುಂದಿನ ರೈಲ್ವೆಯ ಗ್ರೂಪ್-ಡಿ ನೇಮಕಾತಿಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದವರಿಗೆ ಶೇ.20 ರಷ್ಟು ಕಾಯ್ದಿರಿಸಲಾಗುತ್ತದೆ ಎಂದು ಹೇಳಲಾಗಿದೆ. ಇದು ಪರೋಕ್ಷವಾಗಿ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಆದೇಶದಂತೆ ಹೊಸದಾಗಿ ಅರ್ಜಿ ಸಲ್ಲಿಸಿ, ಮತ್ತೆ ಪರೀಕ್ಷೆ, ಸಂದರ್ಶನ ಎದುರಿಸಬೇಕಾದರೆ ಈಗ ನಾವು ರೈಲ್ವೆ ಇಲಾಖೆಯಿಂದ ತರಬೇತಿ ಪಡೆದು ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.
ನೈರುತ್ಯ ರೈಲ್ವೆಯಲ್ಲಿ 8 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿಯಿದ್ದು, ಆರ್‌ಆರ್‌ಸಿ ಮುಖಾಂತರ ತುರ್ತಾಗಿ ನೇಮಕಾತಿ ಮಾಡಲು ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದಾರೆ. ಆದರೂ, ನೇಮಕಾತಿ ಮಾಡಿಕೊಳ್ಳದೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ, ಕೂಡಲೇ ಅಪ್ರೆಂಟಿಸ್ ವೃತ್ತಿ ಪ್ರಮಾಣ ಪತ್ರ ಪಡೆದಿರುವ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.