ಇಂದು ಟೀಮ್ ಇಂಡಿಯಾಕ್ಕೆ ಬಾಂಗ್ಲಾ ಸವಾಲು

Update: 2018-03-07 18:38 GMT

ಕೊಲಂಬೊ,ಮಾ.7: ನಿದಾಸ್ ಕಪ್ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದ ಟೀಮ್ ಇಂಡಿಯಾ ಗುರುವಾರ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಕಳೆದ ಆರು ತಿಂಗಳಿನಿಂದ ಟೀಮ್ ಇಂಡಿಯಾವನ್ನು ಮಣಿಸಲು ಕಾಯುತ್ತಿದ್ದ ಶ್ರೀಲಂಕಾ ತಂಡ ಕೊನೆಗೂ ಯಶಸ್ವಿಯಾಗಿದೆ. ಕುಶಾಲ್ ಪೆರೇರಾ ಅವರು 37 ಎಸೆತಗಳಲ್ಲಿ 66 ರನ್ ಗಳಿಸಿ ಲಂಕೆಗೆ ಗೆಲುವು ತಂದು ಕೊಟ್ಟಿದ್ದರು.

ಭಾರತ ಈ ಪಂದ್ಯದಲ್ಲಿ ಗೆಲ್ಲುವ ಎಲ್ಲ ಅವಕಾಶ ಇತ್ತು. ಆದರೆ ದುರ್ಬಲ ಬೌಲಿಂಗ್ ತಂಡಕ್ಕೆ ಹಿನ್ನಡೆಯಾಗಿದೆ. ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ಶಿಖರ್ ಧವನ್ 90 ರನ್ (49ಎ, 6ಬೌ, 3ಸಿ) ಗಳಿಸಿ ತಂಡಕ್ಕೆ ಸ್ಪರ್ಧಾತ್ಮಕ ರನ್ ಗಳಿಸಲು ನೆರವಾಗಿದ್ದರು. ಧವನ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಹಂಗಾಮಿ ನಾಯಕ ರೋಹಿತ್ ಶರ್ಮ ಸೊನ್ನೆ ಸುತ್ತಿದ್ದರು.

 ಭಾರತ ಮೊದಲ ಓವರ್‌ನ 4ನೇ ಎಸೆತದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ರೋಹಿತ್ ಶರ್ಮಾ ನಿರ್ಗಮನದ ಬಳಿಕ ಸುರೇಶ್ ರೈನಾ (1)ಕ್ರೀಸ್‌ಗೆ ಆಗಮಿಸಿದ್ದರೂ, ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಮೂರನೇ ವಿಕೆಟ್‌ಗೆ ಶಿಖರ್ ಧವನ್ ಮತ್ತು ಮನೀಷ್ ಪಾಂಡೆ 95 ರನ್‌ಗಳ ಜೊತೆಯಾಟ ನೀಡಿದ್ದರು. ಇದರಿಂದಾಗಿ ಭಾರತದ ಸ್ಕೋರ್ 12.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 104ಕ್ಕೆ ತಲುಪಿತ್ತು.

 ಎರಡನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ತಂಡದ ಅಂತಿಮ ಹನ್ನೊಂದರಲ್ಲಿ ಬದಲಾವಣೆಯ ಬಗ್ಗೆ ಸುಳಿವು ನೀಡಿಲ್ಲ. ಆದರೆ ಅಕ್ಷರ್ ಪಟೇಲ್ ಅವರು ಚಹಾಲ್ ಜೊತೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಪ್ರತಿಭಾವಂತ ದಾಂಡಿಗ ಲೋಕೇಶ್ ರಾಹುಲ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಮಧ್ಯಮ ಸರದಿಯ ದಾಂಡಿಗನಾಗಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. ಭಾರತದ ಬೌಲರ್‌ಗಳ ಪೈಕಿ ವಾಶಿಂಗ್ಟನ್ ಸುಂದರ್ ಕಡಿಮೆ ರನ್ ಬಿಟ್ಟುಕೊಟ್ಟಿದ್ದರು. ಅವರು 4 ಓವರ್‌ಗಳಲ್ಲಿ 28ಕ್ಕೆ 2 ವಿಕೆಟ್ ಉಡಾಯಿಸಿದ್ದರು. ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ಅನುಪಸ್ಥಿತಿಯಲ್ಲಿ ಶಾರ್ದುಲ್ ಠಾಕೂರ್ ಮತ್ತು ಜಯದೇವ್ ಉನದ್ಕಟ್ ಅವರು ದುಬಾ ರಿ ಎನಿಸಿಕೊಂಡಿದ್ದರು. ಠಾಕೂರ್ ಮೊದಲ ಓವರ್‌ನಲ್ಲೇ 27 ರನ್ ಬಿಟ್ಟುಕೊಟ್ಟಿದ್ದರು. ಅವರು 3.3 ಓವರ್‌ಗಳಲ್ಲಿ 42 ರನ್ ನೀಡಿದ್ದರೂ ವಿಕೆಟ್ ಎಗರಿಸುವಲ್ಲಿ ವಿಫಲರಾಗಿದ್ದರು. ಉನದ್ಕಟ್ 3 ಓವರ್‌ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಬಾಂಗ್ಲಾ ತಂಡದ ನಾಯಕ ಶಾಕೀಬ್ ಅಲ್ ಹಸನ್ ಅನುಪಸ್ಥಿತಿಯಲ್ಲಿ ಮಹ್ಮುದುಲ್ಲಾ ತಂಡವನ್ನು ನಾಯಕರಾಗಿ ಮುನ್ನಡೆಸುವರು. ಬಾಂಗ್ಲಾ ತಂಡ ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟೆಸ್ಟ್, ಟ್ವೆಂಟಿ -20 ಮತ್ತು ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು.

►ಭಾರತ : ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್(ಉಪನಾಯಕ), ಲೋಕೇಶ್ ರಾಹುಲ್, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ದೀಪಕ್ ಹೂಡಾ, ವಾಶಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾರ್ದುಲ್ ಠಾಕೂರ್, ಜೈದೇವ್ ಉನದ್ಕಟ್, ಮುಹಮ್ಮದ್ ಸಿರಾಜ್ ಮತ್ತು ರಿಷಭ್ ಪಂತ್.

►ಬಾಂಗ್ಲಾದೇಶ: ಮಹ್ಮುದುಲ್ಲಾ (ನಾಯಕ), ತಮೀಮ್ ಇಕ್ಬಾಲ್ , ಸೌಮ್ಯ ಸರ್ಕಾರ್, ಇಮ್ರುಲ್ ಕೈಸ್, ಮುಶ್ಫಿಕುರ್ರಹೀಮ್, (ವಿಕೆಟ್ ಕೀಪರ್), ಶಬ್ಬೀರ್ ರಹ್ಮಾನ್, ಮುಸ್ತಾಫಿಝರ್ರಹ್ಮಾನ್, ರುಬೇಲ್ ಹುಸೈನ್, ತಾಸ್ಕೀನ್ ಅಹ್ಮದ್, ಅಬು ಹೈದರ್, ಅಬು ಝಾಹಿದ್, ಆರೀಫುಲ್ ಹಕ್, ನಝ್ಮುಲ್ ಇಸ್ಲಾಂ, ನೂರುಲ್ ಹಸನ್, ಮೆಹಿದಿ ಹಸನ್, ಲಿಟನ್ ದಾಸ್.

ಪಂದ್ಯದ ಸಮಯ: ರಾತ್ರಿ 7:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News