ಬರ ದೇಶದ ಆಹಾರ ಭದ್ರತೆಗೆ ಮಾರಕ: ಸಚಿವ ಕೃಷ್ಣಭೈರೇಗೌಡ

Update: 2018-03-08 12:35 GMT

ಬೆಂಗಳೂರು, ಮಾ.8: ಬರ ಪರಿಸ್ಥಿತಿಯಿಂದ ದೇಶದ ಆಹಾರ ಭದ್ರತೆ ಹಾಗೂ ಕೃಷಿ ಚಟುವಟಿಕೆಗೆ ಮಾರಕವಾಗಲಿದೆ. ಹೀಗಾಗಿ, ಬರ ಪರಿಸ್ಥಿತಿಯನ್ನು ನಿರ್ವಹಿಸಲು ದೀರ್ಘಾವಧಿ, ಅಲ್ಪಾವಧಿ ಹಾಗೂ ಕ್ಷಣಿಕ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯದ ವಿಪತ್ತು ನಿರ್ವಹಣೆ ಇಲಾಖೆ ಹಾಗೂ ಕೇಂದ್ರದ ಕೃಷಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಬರ ನಿರ್ವಹಣೆ ಕಾರ್ಯತಂತ್ರ-ಉತ್ಕೃಷ್ಟ ಪದ್ಧತಿಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ಬರಗಾಲದಿಂದ ಪಾರಾಗಬೇಕು ಎಂದಾದರೆ ಕೃಷಿ ಬೆಳೆ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡುಕೊಳ್ಳಬೇಕು. ಅದೇ ರೀತಿ ಕಡಿಮೆ ನೀರು ಬಳಸಿ ಬೆಳೆಯುವ ಸಿರಿಧಾನ್ಯಗಳನ್ನು ಬೆಳೆಯುವವರ ಸಂಖ್ಯೆ ಜಾಸ್ತಿಯಾಗಬೇಕು ಎಂದರು.

ಬರ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಇಂದು ಬರದಿಂದ ದೇಶದ ಆಹಾರ ಉತ್ಪಾದನೆಯ ಮೇಲೆ ಶೇ.25 ರಷ್ಟು ಪರಿಣಾಮ ಉಂಟಾಗಿದೆ ಎಂದು ಕೇಂದ್ರ ಸರಕಾರ ಆರ್ಥಿಕ ಸಮೀಕ್ಷೆಗಳು ಬಹಿರಂಗ ಮಾಡಿವೆ. ಹೀಗಾಗಿ, ಹವಾಮಾನ ಬದಲಾವಣೆ ಸಮಸ್ಯೆಯನ್ನು ತಳಮಟ್ಟದಿಂದ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ 13 ವರ್ಷ ಬರ ಪರಿಸ್ಥಿತಿಯನ್ನು ಎದುರಿಸಿದೆ. ಈ ಬರವನ್ನು ಎದುರಿಸಲು ಅನೇಕ ನೂತನ ಆವಿಷ್ಕಾರಗಳನ್ನು ಮಾಡಲಾಗಿದೆ. ಆದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೂತನ ಕಾರ್ಯತಂತ್ರಗಳನ್ನು ರೂಪಿಸಬೇಕು. ಈಗಿನ ವಿಜ್ಞಾನ ಯುಗದಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಭೀಕರ ಕ್ಷಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ ಬರವೆಂಬುದು ಸಾಮಾನ್ಯ ವಿಷಯವಾಗಿಬಿಟ್ಟಿದೆ. ದಕ್ಷಿಣ ರಾಜ್ಯಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಆದುದರಿಂದ ಎಲ್ಲ ರಾಜ್ಯಗಳು ಒಟ್ಟಾಗಿ ಸೇರಿ ಬರವನ್ನು ಎದುರಿಸಲು ಬೇಕಾದ ತಯಾರಿ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಯನ್ನು ಇಂದಿನಿಂದಲೇ ಕಾರ್ಯತಂತ್ರ ರೂಪಿಸಿ ದೂರ ಮಾಡುವ ಪ್ರಯತ್ನ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.

ಯಾವುದೇ ದೂರುಗಳಿಲ್ಲ: ರಾಜ್ಯ ಸರಕಾರ ‘ಪರಿಹಾರ’ ಎಂಬ ಆ್ಯಪ್ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇನ್‌ಪುಟ್ ಸಬ್ಸಿಡಿ ಹಣ ಜಮಾ ಮಾಡುತ್ತಿದೆ. ಇದು ಅತ್ಯಂತ ಪಾರದರ್ಶಕವಾಗಿದ್ದು, ಈ ಕುರಿತು ಇದುವರೆಗೂ ಯಾವುದೇ ದೂರುಗಳು ಬಂದಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಬರ ಎದುರಿಸಲು ಸರಕಾರಗಳು ಸಾಕಷ್ಟು ಹಣ ವ್ಯಯಿಸುತ್ತಿದ್ದರೂ ಬರ ನಿಂತಿಲ್ಲ. ಆದುದರಿಂದ ಪರಿಣಾಮಕಾರಿಯಾಗಿ ಬರ ಎದುರಿಸಲು ಆಧುನಿಕ ತಂತ್ರಜ್ಞಾನದ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಬರ ಎದುರಿಸಲು ಎಲ್ಲರೂ ಸೇರಿ ಸೂಕ್ತ ತಂತ್ರಗಳನ್ನು ರೂಪಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೇಂದ್ರ ಸರಕಾರದ ಕೃಷಿ ಕಾರ್ಯದರ್ಶಿ ಡಾ.ಅರವಿಂದ ದಳವಾಯಿ, ರಾಜ್ಯ ಸರಕಾರದ ವಿಪತ್ತು ನಿರ್ವಹಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗರಾಂ ಬಡೇರಿಯಾ, ನಿರ್ದೇಶಕ ಶ್ರೀನಿವಾಸರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News