ಮಹಿಳಾ ಪ್ರತಿಭೆಗಳಿಗೆ ಮಾನ್ಯತೆ ಸಿಗಲಿ: ಆರ್.ವಿ.ದೇವರಾಜ್
ಬೆಂಗಳೂರು, ಮಾ.8: ರಾಜ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚಿದ್ದು, ಮತ್ತಷ್ಟು ಮಹಿಳಾ ಪ್ರತಿಭೆಗಳನ್ನು ಗುರುತಿಸುವ ಅಗತ್ಯವಿದೆ ಎಂದು ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಆರ್.ವಿ.ದೇವರಾಜ್ ಹೇಳಿದರು.
ನಗರದ ಬಸವನಗುಡಿಯಲ್ಲಿ ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಎಲ್ಲ ರಂಗದಲ್ಲೂ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯ ಕೊಡುಗೆಯಿಲ್ಲದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲವೆಂಬುದು ಸತ್ಯ. ಇದರ ನಡುವೆಯು ಅಸಹಾಯಕ ಹಾಗೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ, ಉತ್ತಮ ಕೆಲಸಗಳನ್ನು ದೊರಕಿಸಿಕೊಡುವಂತಹ ಕೆಲಸಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನದ ವತಿಯಿಂದ ಮಹಿಳೆಯರ ಅಭಿವೃದ್ಧಿಗೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆಂದು ತಿಳಿಸಿದರು.
ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಮಮತಾ ದೇವರಾಜ್ ಮಾತನಾಡಿ, ನಮ್ಮ ಕ್ಷೇತ್ರದ ಮಹಿಳೆಯರು ಉದ್ಯೋಗದ ಕೌಶಲ್ಯಗಳನ್ನು ಪಡೆದುಕೊಂಡು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲಿ ಎಂಬ ಸದುದ್ದೇಶದಿಂದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ದೇವಸಿಂಗ್ ಗಿಲ್, ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್, ಕಾಂಗ್ರೆಸ್ ಮುಖಂಡ ಎಂ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.