×
Ad

ರಾಜರಾಜೇಶ್ವರಿ ಸಮೂಹ ಸಂಸ್ಥೆಯಿಂದ ಸಿಬ್ಬಂದಿಗೆ ಕಿರುಕುಳ: ಆರೋಪ

Update: 2018-03-08 18:13 IST

ಬೆಂಗಳೂರು, ಮಾ.8: ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಸಮೂಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿ ಮತ್ತು ಶುಶ್ರೂಶಕಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್‌ನ ಅಧ್ಯಕ್ಷ ಜಿ.ಆರ್. ಶಿವಶಂಕರ್, ಇಲ್ಲಿ ಕೆಲಸ ಮಾಡುತ್ತಿರುವ ಬೋಧಕೇತರ ಸಿಬ್ಬಂದಿಗಳಿಗೆ ಸರಕಾರ ನಿಗದಿ ಮಾಡಿದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. 15 ವರ್ಷಗಳಿಂದ ಕೆಲಸ ಮಾಡುತ್ತಿರುವ ಹೆಣ್ಣು ಮ್ಕಕಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಯೂನಿಯನ್ ಮಾಡಿಕೊಂಡ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಹಾಗೂ ಹೊರ ರಾಜ್ಯದ ಶುಶ್ರೂಶಕಿಯರು ಇಲ್ಲಿನ ಸಮೂಹ ಸಂಸ್ಥೆಯ ವಸತಿಗೃಹದಲ್ಲಿ ವಾಸವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯೂನಿಯನ್‌ನಲ್ಲಿ ಸಕ್ರಿಯವಾಗಿರುವ ಮಹಿಳಾ ಸಿಬ್ಬಂದಿ ವಸತಿ ಗೃಹಗಳಿಗೆ ಫೆಬ್ರವರಿಯಲ್ಲಿ ಏಕಾಏಕಿ ಬೀಗ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ಬಾರಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಪರಿಶೀಲನೆ ನಡೆಸಿದರು. ಆದರೆ, ಅವರು ಪರಿಶೀಲನೆ ನಡೆಸಿದ ನಂತರ ಮಹಿಳಾ ನೌಕರರಿಗೆ ಹೆಚ್ಚಿನ ಕಿರುಕುಳ ನೀಡುವುದಕ್ಕೆ ಆರಂಭಿಸಿದ್ದಾರೆ. ಮಹಿಳಾ ಆಯೋಗ ಕೇವಲ ಬೂಟಾಟಿಕೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.

ಶುಶ್ರೂಶಕಿ ಸಾವಿತ್ರಿ ಮಾತನಾಡಿ, ನಮಗೆ ನೀಡಬೇಕಾದ ಸಂಬಳವನ್ನು ಸರಿಯಾಗಿ ನೀಡುತ್ತಿಲ್ಲ. ರಜೆ ನೀಡುವುದಿಲ್ಲ, ಸೌಲಭ್ಯ ಕೇಳಿದರೆ ಕೆಲಸ ಬಿಟ್ಟು ಹೋಗಿ ಎನ್ನುತ್ತಾರೆ. ಎಸ್ಟೇಟ್ ಅಧಿಕಾರಿ ಡಾ. ದನಂಜಯ್ ಹಾಗೂ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್, ಮಾನವ ಸಂಪನ್ಮೂಲ ಅಧಿಕಾರಿ ಜ್ಯೋತಿ ಜಾತಿ ನಿಂದನೆ ಮಾಡುತ್ತಾರೆ. ಯುವತಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿದರು.

ಮಾ.13 ರಂದು ಪ್ರತಿಭಟನೆ: ಸಮೂಹ ಸಂಸ್ಥೆಯಲ್ಲಿನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ಮಾ.13ರಂದು ಕಾರ್ಮಿಕ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಅನಂತರ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ರಾಜಭವನ ಮುತ್ತಿಗೆ ಹಾಕಲಾಗುತ್ತದೆ ಎಂದು ಶಿವಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News