×
Ad

ಚೂರಿ ಇರಿತಕ್ಕೊಳಗಾದ ಲೋಕಾಯುಕ್ತರ ಸ್ಥಿತಿ ಗಂಭೀರ

Update: 2018-03-08 19:48 IST

ಬೆಂಗಳೂರು, ಮಾ.8: ಮಾರಣಾಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಕರ್ನಾಟಕ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಆರೋಪಿ ತೇಜ್‌ರಾಜ್ ಶರ್ಮಾ, ವಿಶ್ವನಾಥ್‌ಶೆಟ್ಟಿ ಅವರ ಹೊಟ್ಟೆ, ಎದೆ ಭಾಗಕ್ಕೆ ಬಲವಾಗಿ ಚಾಕು ಇರಿದ ಪರಿಣಾಮ ರಕ್ತಸ್ರಾವವಾಗಿತ್ತು. ಬಳಿಕ ವೈದ್ಯರು, ಶಸ್ತ್ರ ಚಿಕಿತ್ಸೆ ಮಾಡಿದ್ದು, ಇನ್ನು ಮೂರು ದಿನಗಳ ಕಾಲ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರೆಸಲು ವೈದ್ಯರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶ್ವನಾಥ್‌ಶೆಟ್ಟಿ ಅವರಿಗೆ ಮಧುಮೇಹ ಕಾಯಿಲೆಯೂ ಇರುವುದರಿಂದ ವೈದ್ಯರು ಎಚ್ಚರವಹಿಸಿದ್ದಾರೆ. ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ವಿವಿಧ ಪರೀಕ್ಷೆಗಳನ್ನು ಮಾಡಲಾಯಿತು. ಬಳಿಕ ಗಟ್ಟಿಯಾದ ಆಹಾರ ನೀಡಲು ವೈದ್ಯರು ಮುಂದಾಗಿಲ್ಲ ಎಂದು ತಿಳಿದುಬಂದಿದೆ.

ಭೇಟಿ ನಿರಾಕರಣೆ: ವಿಶ್ವನಾಥ್‌ಶೆಟ್ಟಿ ಅವರ ಆರೋಗ್ಯ ವಿಚಾರಿಸಲು ಅವರ ಸ್ನೇಹಿತರು, ಸಂಬಂಧಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಲ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಆದರೆ, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಭೇಟಿ ಮಾಡಲು ಅವಕಾಶ ನೀಡಲಿಲ್ಲ.

ವಾಗ್ದಾಳಿ: ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ರಾಜ್ಯ ಸರಕಾರದ ಮೇಲೆ ವಾಗ್ದಾಳಿ ಮುಂದುವರೆಸಿದರು.

ಕೇಂದ್ರ ಸಚಿವ ಪಿಯೂಶ್ ಗೋಯಲ್ ಮಾತನಾಡಿ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸುಮಾರು 20 ನಿಮಿಷಗಳ ಕಾಲ ತೇಜ್‌ರಾಜ್ ಶರ್ಮಾ ಹಲ್ಲೆ ನಡೆಸಿದ್ದಾರೆ. ಆದರೂ, ಭದ್ರತಾ ಸಿಬ್ಬಂದಿಗೆ ಎಚ್ಚರವಾಗಿಲ್ಲ ಎಂದು ದೂರಿದರು.

ವಿಶ್ವನಾಥ್‌ಶೆಟ್ಟಿ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೀಗಾಗಿಯೇ, ಇಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ಇವರೊಂದಿಗೆ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್ ಭೇಟಿ ನೀಡಿದರು.

ಅದೇ ರೀತಿ, ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್, ವಿ.ಆರ್.ಸುದರ್ಶನ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಾ ಪ್ರಭಾ, ವೈಟ್‌ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಸೇರಿ ಪ್ರಮುಖ ಗಣ್ಯರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News