ಬೆಂಗಳೂರು: ಸೂಲಗಿತ್ತಿ ನರಸಮ್ಮಗೆ ಕೆಎಸ್ಸಾರ್ಟಿಸಿ ಜೀವಿತಾವಧಿ ಉಚಿತ ಬಸ್‌ಪಾಸ್ ವಿತರಣೆ
ಬೆಂಗಳೂರು, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಎಸ್ಸಾರ್ಟಿಸಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ, ಪದ್ಮಶ್ರೀ ಪುರಸ್ಕೃತೆ ಡಾ.ಸೂಲಗಿತ್ತಿ ನರಸಮ್ಮ ಅವರಿಗೆ ಪುರಸ್ಕಾರ ಮಾಡಿ ಜೀವಿತಾವಧಿ ಉಚಿತ ಬಸ್ ಪಾಸ್ ವಿತರಣೆ ಹಾಗೂ ಸರಕಾರಿ ಶಾಲಾ ಶಿಕ್ಷಕಿ ಅನಿತಾ ಮೇರಿ ಅವರಿಗೆ ಸನ್ಮಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ನರಸಮ್ಮ ಹಾಗೂ ಅನಿತಾ ಮೇರಿ ಅವರಿಗೆ 25 ಸಾವಿರ ನಗದು ಪುರಸ್ಕಾರವನ್ನು ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು. ಈ ವೇಳೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕೆಎಸ್ಸಾರ್ಟಿಸಿ ಅಧ್ಯಕ್ಷ ಗೋಪಾಲ್ ಕೆ.ಪೂಜಾರಿ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ವಿಶ್ರಾಂತಿ ಗೃಹಗಳಿಲ್ಲದ ಬಸ್ ನಿಲ್ದಾಣಗಳಲ್ಲಿ ಹಂತ ಹಂತವಾಗಿ 2 ತಿಂಗಳ ಒಳಗೆ ಮಹಿಳಾ ವಿಶ್ರಾಂತಿ ಗೃಹಗಳ ನಿರ್ಮಾಣ, ಲಭ್ಯವಿರುವ ಹಾಗೂ ನೂತನ ಮಹಿಳಾ ವಿಶ್ರಾಂತಿ ಗೃಹಗಳಲ್ಲಿ ಮಕ್ಕಳ ಪೋಷಣೆಗಾಗಿ (ತಾಯಂದಿರು ಮಕ್ಕಳಿಗೆ ಎದೆ ಹಾಲು ಕುಡಿಸಲು) ಪ್ರತ್ಯೇಕವಾದ ಸ್ಥಳಾವಕಾಶವನ್ನು ಒದಗಿಸಲಾಗುವುದು. ಸುರಕ್ಷಿತ ಮತ್ತು ಸುಸಜ್ಜಿತ ಕೋಣೆಯ ವ್ಯವಸ್ಥೆ, ತೊಟ್ಟಿಲು, ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ನಿರ್ಭಯಾ ಯೋಜನೆಯಡಿ ಲಿಂಗ ಸೂಕ್ಷ್ಮತೆ, ಮಹಿಳಾ ಜಾಗೃತಿ ಮತ್ತು ಅನುಷ್ಠಾನ ಪಡೆಗೆ 5.43 ಕೋಟಿ ರೂ., ಮಹಿಳಾ ಚಾಲಕರು/ನಿರ್ವಾಹಕರ ತರಬೇತಿ ಮತ್ತು ಮೂಲಭೂತ ಸೌಕರ್ಯಗಳಿಗಾಗಿ 7.80 ಕೋಟಿ ರೂ., ಬಸ್ ನಿಲ್ದಾಣಗಳಲ್ಲಿ ಮಹಿಳಾ ಸಂಬಂಧಿತ ಸೌಕರ್ಯಗಳಿಗಾಗಿ 5.85 ಕೋಟಿ ರೂ., ಸಿಸಿಟಿವಿ ಕಣ್ಗಾವಲು ಮತ್ತು ನಿರ್ವಹಣಾ ವ್ಯವಸ್ಥೆ ಹಾಗೂ 2 ಸಾವಿರ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆಗೆ 35.41 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ ಎಂದರು.
ಕೆಎಸ್ಸಾರ್ಟಿಸಿ ಚಾಲಕರ ಸುರಕ್ಷತೆಯ ದೃಷ್ಟಿಯಿಂದ ನಿಗಮದ ಎಲ್ಲಾ ಬಸ್‌ಗಳಲ್ಲಿ ಚಾಲಕರ ಆಸನಕ್ಕೆ ಏರ್ ಬ್ಯಾಗ್‌ನ್ನು ಅಳವಡಿಸಲು ಆದೇಶಿಸಲಾಗಿದೆ. ನಿಗಮದ ಪ್ರತಿಷ್ಠಿತ ವಾಹನಗಳಲ್ಲಿನ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸೀಟ್ ಬೆಲ್ಟ್ ಅಳವಡಿಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಿದ ಆಸನಗಳಿಗೆ ಪಿಂಕ್ ಬಣ್ಣ ಬಳಿಯಲಾಗುತ್ತದೆ. ನಿಗಮದ ಎಲ್ಲಾ ನೌಕರರು ಮತ್ತು ಅಧಿಕಾರಿಗಳಿಗೆ ಹೃದಯ ಸಂಬಂಧಿ ಹತ್ತು ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಂತೆ, ನಿಗಮದ 40 ವರ್ಷಕ್ಕೂ ಮೇಲ್ಪಟ್ಟ ಸಿಬ್ಬಂದಿ ಪತ್ರಿ ವರ್ಷ ಉಚಿತವಾಗಿ ಮಾಸ್ಟರ್ ಕ್ರೆಡಿಟ್ ಮತ್ತು ಆರೋಗ್ಯ ತಪಾಸಣೆ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದರು.