×
Ad

ಫಾಲಿ ನಾರಿಮನ್ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ: ಸಿದ್ದರಾಮಯ್ಯ

Update: 2018-03-08 20:58 IST

ಬೆಂಗಳೂರು, ಮಾ.8: ಕಾವೇರಿ ಜಲ ವಿವಾದ ಕುರಿತಂತೆ ಸರ್ವೋಚ್ಛ ನ್ಯಾಯಾಲಯವು ಪ್ರಸಕ್ತ ಸಾಲಿನ ಫೆ.16 ರಂದು ನೀಡಿರುವ ಸಾಧಕ ಬಾಧಕಗಳನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಗ್ರಹಿಸಿ, ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಬೇಕೆ ಅಥವಾ ಬೇಡವೇ ಎಂಬ ಅಂಶವನ್ನು ರಾಜ್ಯದ ಪರ ವಕೀಲರಾದ ಫಾಲಿ ಎಸ್. ನಾರಿಮನ್ ಹಾಗೂ ಶಾಮ್ ದಿವಾನ್ ನೇತೃತ್ವದ ಕಾನೂನು ತಂಡದ ಅಭಿಪ್ರಾಯವನ್ನು ಪಡೆದು ಆ ನಿಟ್ಟಿನಲ್ಲಿ ಮುನ್ನಡೆಯುವ ನಿಲುವನ್ನು ತಾಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಪಕ್ಷಗಳ ಮುಖಂಡರ ಸಭೆ ಗುರುವಾರ ಸರ್ವಾನುಮತದ ನಿರ್ಧಾರವನ್ನು ಕೈಗೊಂಡಿತು.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ಕ್ರಮ ಕುರಿತು ಸರ್ವ ಪಕ್ಷಗಳ ಸದನ ನಾಯಕರು, ಕಾವೇರಿ ಕಣಿವೆ ಪ್ರದೇಶದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯ ನಂತರ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಪ್ರಸ್ತಾಪವನ್ನು ಕಾವೇರಿ ಜಲ ವಿವಾದ ನ್ಯಾಯಾಧಿಕರಣದಲ್ಲಿ ಮಾಡಲಾಗಿತ್ತಾದರೂ, ಫೆ.16 ರಂದು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನಲ್ಲಿ ಈ ಬಗ್ಗೆ ಎಲ್ಲೂ ಪ್ರಸ್ತಾಪಿಸಿರುವುದಿಲ್ಲ ಎಂಬುದು ಗಮನಾರ್ಹ.

ಆದರೆ, ತೀರ್ಪು ಹೊರಡಿಸಿದ ಆರು ವಾರಗಳೊಳಗೆ ಅಂತಾರಾಜ್ಯ ಜಲ ವಿವಾದ ಕಾಯ್ದೆ 1956ರ ಪರಿಚ್ಛೇಧ 6(ಎ) ಪ್ರಕಾರ ವ್ಯಾಜ್ಯ ಪರಿಹಾರ ವೇದಿಕೆಯ ರಚಿಸುವ ಮೂಲಕ ಒಂದು ವ್ಯವಸ್ಥೆಯನ್ನು ರೂಪಿಸಲು ಸೂಚಿಸಲಾಗಿದೆ. ಇದರ ಸಾಧಕ ಬಾಧಕಗಳನ್ನೂ ಪರಿಶೀಲಿಸಿ ತಿಳಿಸಲು ರಾಜ್ಯ ಪರ ಕಾನೂನು ತಂಡಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜಲ ಸಂಪನ್ಮೂಲ ಇಲಾಖೆಯು ಮಾರ್ಚ್ 9 ರಂದು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಸರಕಾರದ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಆ ಸಭೆಯಲ್ಲಿ ಹೊರಹೊಮ್ಮುವ ಅಭಿಪ್ರಾಯ-ಅನಿಸಿಕೆ, ಸಲಹೆ-ಸೂಚನೆಗಳನ್ನು ಆಧರಿಸಿ ರಾಜ್ಯದ ನಿಲುವನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಸಚಿವರಾದ ಎಂ.ಬಿ. ಪಾಟೀಲ್, ಜಯಚಂದ್ರ, ಕೆ. ಜೆ.ಜಾರ್ಜ್, ಡಾ.ಎಚ್. ಸಿ.ಮಹದೇವಪ್ಪ, ಕೃಷ್ಣಪ್ಪ, ಎ. ಮಂಜು, ಎಚ್.ಎಂ. ರೇವಣ್ಣ, ಎಂ.ಆರ್. ಸೀತಾರಾಂ, ತನ್ವೀರ್ ಸೇಠ್, ರಾಜ್ಯ ವಿಧಾನ ಸಭೆಯಲ್ಲಿನ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಮುಖಂಡರಾದ ಬಸವರಾಜ ಹೊರಟ್ಟಿ ಮತ್ತು ದತ್ತ, ಸಂಸದರಾದ ಪಿ. ಸಿ. ಮೋಹನ್ ಮತ್ತು ಸಿ.ಎಸ್. ಪುಟ್ಟರಾಜು ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News