×
Ad

ಕಾವೇರಿ ಜಲ ವಿವಾದ ಕುರಿತು ಸುಪ್ರೀಂ ತೀರ್ಪು: ನಿತಿನ್ ಗಡ್ಕರಿ ಜೊತೆ ದೇವೇಗೌಡ ಚರ್ಚೆ

Update: 2018-03-08 21:14 IST

ಹೊಸದಿಲ್ಲಿ/ಬೆಂಗಳೂರು, ಮಾ.8: ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಜೊತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚರ್ಚೆ ನಡೆಸಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ನಿತಿನ್ ಗಡ್ಕರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕೆಲ ವಿಷಯಗಳನ್ನು ಅಧ್ಯಯನ ಮಾಡಿದ್ದೇನೆ. ಅದರ ಆಧಾರದ ಮೇಲೆ ಗಡ್ಕರಿ ಜೊತೆ ಚರ್ಚಿಸಿದ್ದೇನೆ ಎಂದರು.

ಮರು ಪರಿಶೀಲನೆ ಅರ್ಜಿ ಹಾಕುವ ಕುರಿತು ಚರ್ಚಿಸಿದ್ದೇನೆ. ಕರ್ನಾಟಕ ಸರಕಾರ ಏಕೆ ಇನ್ನು ಅರ್ಜಿ ಹಾಕಿಲ್ಲ ಎಂದು ಗಡ್ಕರಿ ಕೇಳಿದರು. ನಾನು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಬಳಿ ಕೇಂದ್ರ ಸರಕಾರ ಕಾಲಾವಕಾಶ ಕೇಳುವಂತೆ ಮನವಿ ಮಾಡಿದ್ದೇನೆ ಎಂದು ದೇವೇಗೌಡ ಹೇಳಿದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆಯಿಂದ ಆಗುವ ಸಮಸ್ಯೆಗಳನ್ನು ಪರಿಗಣಿಸುವಂತೆ ಕೋರಿದ್ದೇನೆ. ಕರ್ನಾಟಕ ಹಾಗೂ ತಮಿಳುನಾಡು ಎರಡು ರಾಜ್ಯಗಳಿಗೂ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಸಂಸತ್ ಆವರಣದಲ್ಲಿ ತಮಿಳುನಾಡು ಸಂಸದರು ಮಂಡಳಿ ರಚನೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೆ ಕುಡಿಯುವ ನೀರು ಎಷ್ಟು ಬೇಕೆಂದು ಯೋಚಿಸಬೇಕು. ಕಾವೇರಿ ಕಣಿವೆಯ ಏತ ನೀರಾವರಿ ಯೋಜನೆಗಳನ್ನು ರದ್ದು ಮಾಡಿದ್ದಾರೆ. ನ್ಯೂನತೆಗಳನ್ನು ಸರಿಪಡಿಸಿ ಮಂಡಳಿ ರಚನೆ ಮಾಡಬೇಕು ಎಂದು ದೇವೇಗೌಡ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದೇನೆ. ನ್ಯಾಯಾಧೀಕರಣದಿಂದ ನಮಗೆ ಆಗಿರುವ ಅನ್ಯಾಯವನ್ನು ಹೇಳಲು ಅವಕಾಶ ಸಿಕ್ಕಿಲ್ಲ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನಾವು ಸಂತೋಷಪಡುವಂತಹ ಯಾವ ಅಂಶಗಳು ಇಲ್ಲ. ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಗಡ್ಕರಿ ಗಮನಕ್ಕೆ ತಂದಿದ್ದೇನೆ. ತೀರ್ಪಿನ ಕುರಿತು ಮರು ಪರಿಶೀಲನಾ ಅರ್ಜಿ ಹಾಕುವಂತೆ ಗಡ್ಕರಿ ಸಲಹೆ ನೀಡಿದ್ದಾರೆ ಎಂದು ದೇವೇಗೌಡ ಹೇಳಿದರು.

ಸುಪ್ರೀಂಕೋರ್ಟ್ ಈ ತೀರ್ಪು 15 ವರ್ಷ ಅನ್ವಯಿಸಲಿದೆ ಎಂದು ಹೇಳಿದೆ. ಆದುದರಿಂದ, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ ಕೇಂದ್ರವೇ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

14 ಟಿಎಂಸಿ ಹೆಚ್ಚುವರಿ ನೀರು ಸಿಕ್ಕಿದೆ ಎಂದು ರಾಜ್ಯದ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಆಳವಾಗಿ ಅಧ್ಯಯನ ಮಾಡಿದರೆ ನಾವು ಸಂತೋಷ ಪಡುವಂತಹ ಯಾವುದೆ ಅಂಶಗಳು ಅಲ್ಲಿ ಸಿಗುವುದಿಲ್ಲ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ವರ್ಗಾವಣೆಗೆ ಆಕ್ರೋಶ
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ. ಯಾವ ರಾಜಕೀಯ ವ್ಯಕ್ತಿಯ ಪ್ರಭಾವಕ್ಕೂ ಈಡಾಗದ ಅಧಿಕಾರಿ. ಅರ್ಹತೆಯನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ದೇವೇಗೌಡ ಸೇರಿದಂತೆ ಯಾವ ರಾಜಕಾರಣಿ ಬಗ್ಗೆಯೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಇಂತಹ ಸಾಕಷ್ಟು ಉದಾಹರಣೆಗಳನ್ನು ನಾನು ಹೇಳಬಲ್ಲೆ.
-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News