ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸಂಚಾರ
ಬೆಂಗಳೂರು, ಮಾ.8: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮಾ.23ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ತಮ್ಮ ಪ್ರವೇಶ ಪತ್ರ ತೋರಿಸಿ, ಪರೀಕ್ಷಾ ಕೇಂದ್ರಗಳಿಗೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ.
ಮಾ.23ರಿಂದ ಎ.6ರವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾ ಸಂಸ್ಥೆಗಳ ಹೊರತಾಗಿ ಬೇರೆ ವಿದ್ಯಾ ಸಂಸ್ಥೆಗಳಲ್ಲಿಯೂ ಪರೀಕ್ಷಾ ಕೇಂದ್ರಗಳು ನಿಯೋಜನೆಯಾಗಿವೆ. ಹೀಗಾಗಿ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಉಚಿತವಾಗಿ ಪ್ರಯಾಣಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಅವಕಾಶ ನೀಡಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಅವಧಿಯಲ್ಲಿ ಪ್ರವೇಶ ಪತ್ರ ತೋರಿಸಿ, ಪರೀಕ್ಷಾ ಕೇಂದ್ರಗಳ ವರೆಗೆ ಸಂಚರಿಸಬಹುದಾಗಿದೆ ಹಾಗೂ ಪರೀಕ್ಷೆ ಮುಗಿದ ಬಳಿಕ ತಮ್ಮ ವಾಸ ಸ್ಥಳಕ್ಕೆ ಹಿಂದಿರುಗಬಹುದಾಗಿದೆ. ಅಲ್ಲದೇ, ನಿಲ್ದಾಣವಲ್ಲದ ಸ್ಥಳಗಳ ಹತ್ತಿರ ಪರೀಕ್ಷಾ ಕೇಂದ್ರಗಳಿದ್ದರೆ, ವಿದ್ಯಾರ್ಥಿಗಳು ಬಸ್ಸನ್ನು ಹತ್ತಲು-ಇಳಿಯಲು ಚಾಲಕ-ನಿರ್ವಾಹಕರು ಅವಕಾಶ ಕಲ್ಪಿಸಬೇಕೆಂದು ಬಿಎಂಟಿಸಿ ಪ್ರಕಟನೆ ತಿಳಿಸಿದೆ.