ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು: ಜದಾ
ಬೆಂಗಳೂರು, ಮಾ.8: ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಮುಖಂಡರಾದ ಜದಾ ತಿಳಿಸಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಅನೇಕ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುರುಷ ಪ್ರಧಾನ ವ್ಯವಸ್ಥೆ ಇಂದಿಗೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಅಧಿಕಾರದಲ್ಲಿರುವ ಸರಕಾರಗಳು ಮಹಿಳೆಯರ ರಕ್ಷಣೆಗೆ ಯಾವುದೇ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಸಂಘಪರಿವಾರ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ಮೇಲೆ ಭೀಕರವಾದ ಹಲ್ಲೆ ಮಾಡುತ್ತಿದ್ದರೂ ಕಾನೂನು ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತರೂಢ ಸರಕಾರಗಳು ನಿರ್ಲಕ್ಷ ತೋರಿಸುತ್ತಿವೆ. ಹೀಗಾಗಿ, ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮುಂದೆ ಬರಬೇಕು. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇತ್ತೀಚಿಗೆ ತ್ರಿಪುರಾ ಚುನಾವಣೆಯ ನಂತರ ಲೆನಿನ್ ಪ್ರತಿಮೆಯನ್ನು ನಾಶ ಮಾಡಿರುವ ಸಂಘ ಪರಿವಾರದ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿದ ಅವರು, ಲೆನಿನ್, ಅಂಬೇಡ್ಕರ್ ಹಾಗೂ ಪೆರಯಾರ್‌ರವರ ಸಿದ್ಧಾಂತ ಮತ್ತು ಪಾತ್ರ ಮಹಿಳಾ ಚಳುವಳಿಯಲ್ಲಿ ಮಹತ್ವವಾದದ್ದು ಮತ್ತು ಸ್ಮರಣೀಯ ಎಂದು ಹೇಳಿದರು.
ಮಹಿಳಾ ಮುಖಂಡರಾದ ಜ್ಯೋತಿ ಮಾತನಾಡಿ, ನಮ್ಮ ದೇಶದ ಮಹಿಳಾ ಚಳುವಳಿಯ ಮುಖ್ಯ ರಾಜಕೀಯ ಬೇಡಿಕೆಯಾದ ವಿಧಾನ ಸಭೆ ಮತ್ತು ಸಂಸತ್ತಿನಲ್ಲಿ 33% ಮಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಅಂಶವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡೆಗಣಿಸಿವೆ. ಎರಡೂ ರಾಜಕೀಯ ಪಕ್ಷಗಳ ಮಹಿಳೆಯರ ಕುರಿತು ಮೃದು ಧೋರಣೆ ಅನುಸರಿಸುತ್ತಿವೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಜಯಮ್ಮ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಉಪಸ್ಥಿತರಿದ್ದರು.