ಲೋಕಾಯುಕ್ತರ ಹತ್ಯೆ ಯತ್ನ ಪ್ರಕರಣ: ಶರ್ಮಾ 5 ದಿನ ವಶಕ್ಕೆ; ಸಿಸಿಬಿ ತನಿಖೆ
ಬೆಂಗಳೂರು, ಮಾ.8: ಕರ್ನಾಟಕ ಲೋಕಾಯುಕ್ತ ಪಿ.ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕುವಿನಿಂದ ಇರಿದು ಮಾರಣಾಂತಕ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ ಆರೋಪ ಪ್ರಕರಣ ಸಂಬಂಧ ತೇಜ್‌ರಾಜ್ ಶರ್ಮಾನನ್ನು ಐದು ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ಸಿಸಿಬಿ ಕೈಗೆತ್ತಿಕೊಂಡಿದೆ.
ಪ್ರಕರಣ ಸಂಬಂಧ ಆರೋಪಿ ತೇಜ್‌ರಾಜ್ ಶರ್ಮಾ(33)ನನ್ನು ವಿಧಾನಸೌಧ ಠಾಣಾ ಪೊಲೀಸರು, ಎಂಟನೆ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೊಳಪಡಿಸುವ ವಶಕ್ಕೆ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸಮ್ಮತಿ ನೀಡಿದರು.
ಆರೋಪಿಯಿಂದ ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೇಳಿಕೆ ಪಡೆದುಕೊಳ್ಳಬೇಕಿದೆ. ಬುಧವಾರ ಮಧ್ಯಾಹ್ನದಿಂದ ವಿಚಾರಣೆ ನಡೆಸಲಾಗಿದೆ. ಆದರೂ, ಕೆಲವು ವಿಷಯಗಳು, ಆತ ಲೋಕಾಯುಕ್ತರಿಗೆ ಕೊಟ್ಟ ದೂರುಗಳು ಮತ್ತು ಹಲವು ಅನುಮಾನಗಳಿರುವ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಐದು ದಿನಗಳ ಕಾಲ ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ನಗರದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಮಾಹಿತಿ ನೀಡಿದರು.
ಸಿಸಿಬಿ: ಲೋಕಾಯುಕ್ತರ ಹತ್ಯೆ ಯತ್ನ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಆದೇಶ ಹೊರಿಡಿಸಿದ್ದಾರೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆ ಮೇರೆಗೆ ಪ್ರಕರಣವನ್ನು ಈಗ ವರ್ಗಾವಣೆ ಮಾಡಲಾಗಿದೆ.