ಬೆಂಗಳೂರು: ಐಕಾನಿಕ್ ವುಮೆನ್ ಪ್ರಶಸ್ತಿ ಪ್ರದಾನ
ಬೆಂಗಳೂರು, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಹಿಳೆಯರಿಗೆ ‘ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗುರುವಾರ ನಗರದ ದವನಂ ಸರೋವರ ಪೊರ್ಟಿಕೊ ಸೂಟ್ಸ್‌ನಲ್ಲಿ ಈಸ್ಟರ್ನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘಮಿತ್ರ ಅಯ್ಯಂಗಾರ್, ಭಾಗ್ಯರಂಗಾಚಾರ್, ಡಾ.ದೀಪಾ ಕಣ್ಣನ್, ಎಸ್.ಚಂದ್ರರಾಮತಿರಾವ್, ಪದ್ಮಜಾ ರಾಮಮೂರ್ತಿ, ವಿದ್ಯಾ ವೈ., ಶಿಲ್ಪಾ, ಅಶ್ವಿನಿ ಅಂಗಡಿ, ಡೈಸಿ ಜೋಸೆಫ್ ಅಮ್ಮಜಿ ಹಾಗೂ ರುಕ್ಸಾನಾ ಅವರಿಗೆ ನೃತ್ಯಪಟು, ಚಲನಚಿತ್ರ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ವಿಕ್ರಂ ಆಸ್ಪತ್ರೆ ವೈದ್ಯ ಡಾ.ಕೆ.ಎಸ್.ಮಂಜುನಾಥ್ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸೇವೆ ಸಲ್ಲಿಸುತ್ತಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಧನೆಗೈಯುತ್ತಿದ್ದಾರೆ. ಇಂದು ಸಾಧಕ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದ ಅವರು, ಈಸ್ಟರ್ನ್ ಸಂಸ್ಥೆ ಕುದೂರಿನ ಪ್ರೌಢಶಾಲೆಯ ನವೀಕರಣಕ್ಕೆ ಮುಂದಾಗಿದ್ದು, ಆ ಶಾಲೆಯ ವಿದ್ಯಾರ್ಥಿನಿಯರಿಗೆ 10 ಕಂಪ್ಯೂಟರ್‌ಗಳನ್ನು ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಶಾ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ಡಾ.ಗ್ಲೋರಿ ಅಲೆಕ್ಸಾಂಡರ್, ನಮ್ಮ ಬೆಂಗಳೂರು ಪ್ರತಿಷ್ಠಾನ ಸಿ.ಇ.ಓ ಶ್ರೀಧರ ಪಬ್ಬಿಶೆಟ್ಟಿ, ಈಸ್ಟರ್ನ್ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಫಿರ್ಜೊಮಿರನ್ ಸೇರಿದಂತೆ ಪ್ರಮುಖರಿದ್ದರು.