×
Ad

ಮಹಿಳೆಯರ ಸಮಸ್ಯೆಗಳಿಗೆ ಉತ್ತಮ ಸ್ಪಂದನ: ನಟಿ ಭಾರತಿ ವಿಷ್ಣುವರ್ಧನ್

Update: 2018-03-08 22:49 IST

ಬೆಂಗಳೂರು, ಮಾ.8: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಭಿಪ್ರಾಯಟ್ಟಿದ್ದಾರೆ.

ಗುರುವಾರ ನಗರದ ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಬೆಂಗಳೂರು ನಗರ ಪೊಲೀಸ್ ಹಾಗೂ ವನಿತಾ ಸಹಾಯ ವಾಣಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರ ಮತ್ತು ಮಕ್ಕಳ ಸಮಸ್ಯೆ ಹಿಂದಿನಿಂದಲೂ ಇದೆ, ಆದರೆ ಇದೀಗ ಸಂಘಟನೆಗಳು ಸಾರ್ವಜನಿಕರು ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ನಗರ ಜೀವನದಲ್ಲಿ ಮಹಿಳೆಯರು ಪ್ರತಿನಿತ್ಯ ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಗರ ಪೊಲೀಸರು ಹಾಗೂ ವನಿತಾ ಸಹಾಯವಾಣಿ ಮುಂದಾಗುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಮಾತನಾಡಿ, ನಗರದಲ್ಲಿ ಮಹಿಳೆಯರು ಯಾವುದೇ ರೀತಿಯ ದೂರು ನೀಡಿದರೂ ಸ್ವೀಕರಿಸಬೇಕೆಂದು ಎಲ್ಲ ಠಾಣೆಗಳಲ್ಲೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪೊಲೀಸ್ ಠಾಣೆ ಅಥವಾ ತಮ್ಮ ಕಚೇರಿಗೆ ಬರುವ ನೊಂದ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮದಲ್ಲಿ ವನಿತಾ ಸಹಾಯವಾಣಿ ಆಡಳಿತ ವ್ಯವಸ್ಥೆ ಅಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News