ಪತ್ನಿಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಮುಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದು ಹೀಗೆ

Update: 2018-03-09 09:57 GMT

ಕೋಲ್ಕತಾ, ಮಾ.9: ದೇಶಕ್ಕೆ ಮೋಸ ಮಾಡುವುದಕ್ಕಿಂತ ಸಾಯಲು ಬಯಸುವೆ ಎಂದು ಟೀಮ್ ಇಂಡಿಯಾ ವೇಗಿ ಮುಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆಂದು ಶಮಿ ಪತ್ನಿ ಹಸೀನಾ ಜಹಾನ್ ಪೊಲೀಸರಿಗೆ ದೂರು ನೀಡಿದ್ದು, ಈ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶಮಿ ‘‘ನಾನು ದೇಶಕ್ಕಾಗಿ ಆಡಿದ್ದೇನೆ. ನನಗೆ ಆಡಲು ಸಿಕ್ಕಿರುವ ಅವಕಾಶದಲ್ಲಿ ನನ್ನ ಸಾಮರ್ಥ್ಯದ ಶೇ 100ರಷ್ಟನ್ನು ದೇಶಕ್ಕಾಗಿ ಧಾರೆ ಎರೆದಿದ್ದೇನೆ ’’ ಎಂದು ಹೇಳಿದರು.

‘‘ನನಗೆ ಮೋಸ ಮಾಡಿದಂತೆ ಶಮಿ ದೇಶಕ್ಕೂ ಮೋಸ ಮಾಡುವುದರಿಂದ ಹಿಂದೆ ಸರಿದಿಲ್ಲ. ಶಮಿ ಮ್ಯಾಚ್ ಫಿಕ್ಸಿಂಗ್ ಉದ್ದೇಶಕ್ಕಾಗಿ ದುಬೈನಲ್ಲಿ ಪಾಕಿಸ್ತಾನದ ಮಹಿಳೆ ಅಲಿಷ್ಬಾ ಮೂಲಕ ಇಂಗ್ಲೆಂಡ್ ಮೂಲದ ಉದ್ಯಮಿ ಮುಹಮ್ಮದ್ ಭಾಯ್ ಎಂಬವರಿಂದ ಹಣ ಪಡೆದಿದ್ದಾರೆ. ಇದಕ್ಕೆ ನನ್ನಲ್ಲಿ ಪುರಾವೆ ಇದೆ’’ ಎಂದು ಹಸೀನಾ ಆರೋಪ ಮಾಡಿದ್ದರು.

ಹಸೀನಾ ವಕೀಲರೊಬ್ಬರ ಜೊತೆ ಕೋಲ್ಕತಾದ ಲಾಲ್ ಬಝಾರ್ ಪೊಲೀಸ್ ಠಾಣೆಗೆ ತೆರಳಿ ತನ್ನ ಪತಿ ಶಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಕೊಲೆಯತ್ನ ದೂರು ದಾಖಲಾಗಿದೆ. ಶಮಿ ಮತ್ತು ಅವರ ಕುಟುಂಬದ ಐವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಂತೆ ಕೋಲ್ಕತಾ ಪೊಲೀಸ್ ಮಹಿಳಾ ದೂರು ಪರಿಹಾರ ಘಟಕವು ತನಿಖೆ ಆರಂಭಿಸಿದೆ.

ಶಮಿ ಸಹೋದರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಶಮಿ ವಿರುದ್ಧ ಪತ್ನಿ ಹಸೀನಾ ಕೌಟುಂಬಿಕ ದೌರ್ಜನ್ಯ ಆರೋಪವನ್ನು ಮಾಡಿದ ಬೆನ್ನಲ್ಲೇ ಬಿಸಿಸಿಐ ಶಮಿ ಅವರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿತ್ತು. ಇದೀಗ ಶಮಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಶಮಿ ಮತ್ತು ಹಸೀನಾ ವಿವಾಹ 2014ರಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News