362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ರದ್ದು: ಹೈಕೋರ್ಟ್
ಬೆಂಗಳೂರು, ಮಾ.9: ಕಳೆದ 2011ನೆ ಸಾಲಿನಲ್ಲಿ ಕೆಪಿಎಸ್ಸಿ ನೇಮಕಾತಿ ನಡೆಸಿದ್ದ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ರಾಜ್ಯ ಸರಕಾರ ಈ ಮೊದಲು ನೇಮಕಾತಿ ರದ್ದುಪಡಿಸಿತ್ತು. ಆದರೆ, ಆಯ್ಕೆಯಾದ ಅಭ್ಯರ್ಥಿಗಳು ಕೆಎಟಿ ಮೊರೆ ಹೋದಾಗ ಕೆಎಟಿ ಸರಕಾರದ ಆದೇಶಕ್ಕೆ ತಡೆ ನೀಡಿತ್ತು. ಕೆಎಟಿ ಆದೇಶದ ವಿರುದ್ಧ ಅವಕಾಶ ವಂಚಿತ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಪೀಠವು ಶುಕ್ರವಾರ ನೇಮಕಾತಿ ರದ್ದುಗೊಳಿಸಿದೆ. ಎಲ್ಲ 362 ಹುದ್ದೆಗಳ ನೇಮಕಾತಿ ರದ್ದು. ಈಗಾಗಲೇ 70 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿ ಸರಕಾರ ಹೊರಡಿಸಿದ್ದ ಆದೇಶ ರದ್ದು ಮಾಡಿದ್ದು, ನೇಮಕಾತಿ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೆಎಟಿ ಆದೇಶದ ಅನ್ವಯ ನೇಮಕಾತಿಗೆ ಮುಂದಾಗಿದ್ದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೇಟ್ಟಿಲೇರಿದ್ದ ಉದ್ಯೋಗ ವಂಚಿತ ಅಭ್ಯರ್ಥಿಗಳು. ಈ ಹಿಂದೆ ಹೈಕೋರ್ಟ್ ಕೆಎಟಿ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. 2011ರಲ್ಲಿ ಕೆಪಿಎಸ್ಸಿ ನಡೆಸಿದ 362 ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಈ ಕುರಿತು ಸಿಐಡಿ ತನಿಖೆ ನಡೆಸಿತ್ತು. ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು. ಸಿಐಡಿ ವರದಿ ಆಧರಿಸಿ ರಾಜ್ಯ ಸರಕಾರ ನೇಮಕಾತಿ ರದ್ದುಪಡಿಸಿತ್ತು. ಆದರೆ ಇದಕ್ಕೆ ಕೆಎಟಿ ತಡೆಯಾಜ್ಞೆ ನೀಡಿತ್ತು. ಇದೀಗ ಹೈಕೋರ್ಟ್ ನೇಮಕಾತಿ ರದ್ದುಪಡಿಸಿದೆ.
ಪ್ರಕರಣವೇನು: ಕೆಪಿಎಸ್‌ಸಿಯು 2011ರ ನ.3ರಂದು 163 ಎ ಮತ್ತು 200 ಬಿ ವೃಂದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. 2013ರ ಜ.6ರಂದು ಪ್ರಾಥಮಿಕ ಪರಿಕ್ಷೆ ನಡೆಸಿ, ಫಲಿತಾಂಶವನ್ನು ಮಾ.16ರಂದು ಪ್ರಕಟಿಸಲಾಗಿತ್ತು. 2014ರ ಮಾ.22ರಂದು ಸಂಭಾವ್ಯ ಪಟ್ಟಿಯನ್ನು ಗೆಜೆಟೆಡ್‌ನಲ್ಲಿ ಪ್ರಕಟಿಸಿ ಸರಕಾರಕ್ಕೆ ಕಳುಹಿಸಿತ್ತು. ಈ ಮಧ್ಯೆ ಡಾ.ಎಚ್.ಪಿ.ಎಸ್. ಮೈತ್ರಿ ಮಾಡಿದ್ದ ಆರೋಪ ಮತ್ತು ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯದ ಮೇರೆಗೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಯು 2013ರ ಜೂ. 22ರಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ತದನಂತರ ಸರಕಾರ ಆ ತನಿಖೆಯನ್ನು 2014ರ ಜೂ.27ರಂದು ಸಿಐಡಿಗೆ ವಹಿಸಿತ್ತು.
ಸಿಐಡಿಯು ತನಿಖೆ ಪೂರ್ಣಗೊಳಿಸಿ 2013ರ ಸೆ.10ರಂದು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ, ಅವ್ಯವಹಾರ, ಸ್ವಜನಪಕ್ಷಪಾತ ಹಾಗೂ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ವರದಿಯಲ್ಲಿ ಸಿಐಡಿ ಸ್ಪಷ್ಟಪಡಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು 2014ರ ಆ.8ರಂದು 362 ಹುದ್ದೆಗಳ ಆಯ್ಕೆ ಪ್ರಕಿ್ರಯೆ ಹಿಂಪಡೆದುಕೊಂಡು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಆಯ್ಕೆಗೊಂಡಿದ್ದ ಹುದ್ದೆಗೆ ನೇಮಕಗೊಂಡಿದ್ದ ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಕೆಎಟಿಯು 2016ರ ಅ.19ರಂದು ಅರ್ಜಿಗಳನ್ನು ಪುರಸ್ಕರಿಸಿ ನೇಮಕಾತಿ ಪ್ರಕ್ರಿಯೆ ಹಿಂಪಡೆದಿದ್ದ ಸರಕಾರ ಅಧಿಸೂಚನೆ ರದ್ದುಪಡಿಸಿತ್ತು. ಹಾಗೆಯೇ, ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನಿರ್ದೇಶಿಸಿತ್ತು.
ಅದರಂತೆ ರಾಜ್ಯ ಸಚಿವ ಸಂಪುಟವು ಆಯ್ಕೆಗೊಂಡಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಮಾ.17ರಿಂದ ತೀರ್ಮಾನಿಸಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಉದ್ಯೋಗ ವಂಚಿತರು ಪಿಐಎಲ್ ಸಲ್ಲಿಸಿದ್ದರು. ಈ ಮಧ್ಯೆ ಕೆಎಟಿ ಆದೇಶಕ್ಕೆ ಮತ್ತು ಆ ಆದೇಶ ಆಧರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸರಕಾರ ನೇಮಕಾತಿ ಆದೇಶ ನೀಡುವುದಕ್ಕೆ ರಾಜ್ಯ ಹೈಕೋರ್ಟ್ 2017ರ ಎ.21ರಂದು ತಡೆಯಾಜ್ಞೆ ನೀಡಿತ್ತು. ಇದರಿಂದ ನೇಮಕಾತಿ ಆದೇಶ ನೀಡುವುದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ, ಈ ಆದೇಶಕ್ಕೂ ಮುನ್ನವೇ ಕೆಪಿಎಸ್‌ಸಿಯಿಂದ 78 ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದು ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.
ಅರ್ಜಿದಾರರ ಪರ ವಾದಿಸಿದ್ದ ವಕೀಲ ರೆಹಮತುಲ್ಲಾ ಕೊತ್ವಾಲ್, 2011ನೆ ಸಾಲಿನ ನೇಮಕಾತಿಯಲ್ಲಿ ಕೆಪಿಎಸ್‌ಸಿಯು ಸಾಕಷ್ಟು ಅವ್ಯವಹಾರ, ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಸಿಐಡಿ ವರದಿ ನೀಡಿತ್ತು. ಆ ವರದಿಯನ್ನೇ ಪರಿಗಣಿಸಿದ್ದ ರಾಜ್ಯ ಸರಕಾರವು ನೇಮಕಾತಿ ಪ್ರಕ್ರಿಯೆ ಹಿಂಪಡೆದಿತ್ತು. ಆದರೆ, ಆ ನಿರ್ಧಾರದ ವಿರುದ್ಧ ಕೆಎಟಿ ಹೊರಡಿಸಿದ ತೀರ್ಪು ಅನ್ನು ಇದೀಗ ಸರಕಾರ ಪಾಲಿಸಲು ಹೊರಟಿದೆ. ಅಂದರೆ ಅಕ್ರಮ ನಡೆದಿರುವುದು ಸ್ಪಷ್ಟವಾಗಿದ್ದರೂ ಅದನ್ನು ಒಪ್ಪಿಕೊಂಡು ಕಳಂಕಿತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುತ್ತಿದೆ. ಇದು ಕಾನೂನು ಬಾಹಿರ ಎಂದು ದೂರಿದ್ದರು.
ಮೇಲಾಗಿ ಕೆಎಟಿ ಆದೇಶವೇ ಕಾನೂನು ಬಾಹಿರವಾಗಿದೆ. ನೇಮಕಾತಿಯಲ್ಲಿ ಅಕ್ರಮ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದೆ ಎಂದು ತಿಳಿದಿದ್ದರೂ ಕಳಂಕಿತ ಅಭ್ಯರ್ಥಿಗಳಿಗೆ ಹುದ್ದೆ ನೀಡುವಂತೆ ಆದೇಶ ಮಾಡಿರುವುದು ಸರಿಯಲ್ಲ. ಇದರಿಂದ ಪ್ರತಿಭಾನ್ವಿತ ಮತ್ತು ಅರ್ಹ ಅಭ್ಯರ್ಥಿಗಳ ಹಕ್ಕುಗಳಿಗೆ ಧಕ್ಕೆಯಾಗಲಿದ್ದು, ಅವರು ಉದ್ಯೋಗದಿಂದ ವಂಚಿತರಾಗಲಿದ್ದಾರೆ. 1998, 1999 ಮತ್ತು 2004ನೆ ಸಾಲಿನ 723 ಎ ಮತ್ತು ಬಿ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಕೆಪಿಎಸ್‌ಸಿ ಅಕ್ರಮ ನಡೆಸಿತ್ತು ಎಂಬುದು ಗಮನಾರ್ಹ. ಹೀಗಾಗಿ, ಕೆಎಟಿ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಆಯ್ಕೆಯಾಗಿದ್ದ ಅಭ್ಯರ್ಥಿಗಳು ಆಕ್ಷೇಪಿಸಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಪೀಠವು ತೀರ್ಪು ಕಾಯ್ದಿರಿಸಿತ್ತು.