×
Ad

ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಮಾ.12ಕ್ಕೆ ಮುಂದೂಡಿದ ಹೈಕೋರ್ಟ್

Update: 2018-03-09 21:17 IST

ಬೆಂಗಳೂರು, ಮಾ.9: ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿತು.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರು ಶುಕ್ರವಾರ ನಡೆಸಿದರು.
ಮುಹಮ್ಮದ್ ನಲಪಾಡ್ ಪರ ವಾದಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಇದು ಜಾಮೀನು ನೀಡಬಹುದಾದ ಆರೋಪ. ಎಲ್ಲ ಆರೋಪಿಗಳಿಗೂ ಜಾಮೀನು ನೀಡಬಹುದಾಗಿದೆ ಎಂದರು.

ಸಿ.ವಿ.ನಾಗೇಶ್ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಾದಿಸಿದ ಎಸ್‌ಪಿಪಿ ಶ್ಯಾಮ್ ಸುಂದರ್, ನಲಪಾಡ್ ನೇರವಾಗಿ ಹಲ್ಲೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಮುಚ್ಚಿದ ಲಕೋಟೆಯಲ್ಲಿ ನಿಮಗೆ ಸಿ.ಡಿ ಕೊಡಲಿದ್ದೇವೆ. ತನಿಖಾಧಿಕಾರಿಗಳು ಕೋರ್ಟ್‌ಗೆ ಸಿ.ಡಿ ಕೊಡುತ್ತಾರೆ. ಸಿ.ಡಿ ಯಲ್ಲಿರುವ ದೃಶ್ಯಾವಳಿಯನ್ನೊಮ್ಮೆ ವೀಕ್ಷಿಸಿ. ಆಗ ನಲಪಾಡ್ ಗೂಂಡಾಗಿರಿ ಗೊತ್ತಾಗಲಿದೆ ಎಂದು ವಾದಿಸಿದರು.

ವಿದ್ವತ್ ಬದಲು ಮಲ್ಯ ಆಸ್ಪತ್ರೆಯ ವೈದ್ಯ ಆನಂದ್‌ಗೆ ಜೀವ ಬೆದರಿಕೆ ಇದೆ. ಹೀಗಾಗಿ, ವೈದ್ಯ ಆನಂದ್ ವರದಿಯನ್ನು ತಿರುಚಿ ನೀಡಿದ್ದಾರೆ. ಡಿಸ್‌ಚಾರ್ಜ್ ಮಾಡಿದ ವರದಿ ಶಾಸಕ ಹಾರಿಸ್ ಅವರ ಕೈಗೆ ಸಿಕ್ಕಿದ್ದು ಹೇಗೆ? ಅದನ್ನು ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಇದರ ಬಗ್ಗೆ ನೀವೇ ಊಹಿಸಬೇಕು.
ವೈದ್ಯ ಆನಂದ್ ಮೇಲೆ ಸಾಕಷ್ಟು ಗುಮಾನಿಗಳಿವೆ. ಅವರು ನಲಪಾಡ್ ಫ್ಯಾಮಿಲಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ತನಿಖಾಧಿಕಾರಿಗಳ ತನಿಖೆಯಲ್ಲಿ ನಲಪಾಡ್ ಫ್ಯಾಮಿಲಿ ಮಧ್ಯಪ್ರವೇಶಿಸಿದೆ. ಮುಂಚೆ ವೈದ್ಯ ಆನಂದ್ ವಿದ್ವತ್‌ಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದೀಗ ರಿಪೋರ್ಟ್ ವಿದ್ವತ್ ವಿರುದ್ಧವಾಗಿ ನೀಡಿದ್ದಾರೆ.ನಲಪಾಡ್ ಫ್ಯಾಮಿಲಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ವೈದ್ಯ ಆನಂದ್ ವಿರುದ್ಧ ಈ ಕುರಿತು ತನಿಖೆಯಾಗಬೇಕು. ತನಿಖಾಧಿಕಾರಿಗಳಿಗೂ ಸಿಗದ ವೈದ್ಯಕೀಯ ದಾಖಲೆಗಳು ಆರೋಪಿ ಪರ ವಕೀಲರಿಗೆ ಹೇಗೆ ಸಿಕ್ಕವು. ದಾಖಲಾತಿಗಳು ಲೀಕ್ ಆಗಿರುವುದು ನಲಪಾಡ್ ತನಿಖೆಯಲ್ಲಿ ಮೂಗು ತೂರಿಸುತ್ತಿರುವುದನ್ನು ತೋರಿಸುತ್ತದೆ.

ಪ್ರಕರಣದ ಗಂಭೀರತೆಯನ್ನು ಸೀಸಿಟಿವಿ ಕ್ಯಾಮರಾದಲ್ಲಿ ನೋಡಿದ ಬಳಿಕ ಪೊಲೀಸರು ನಲಪಾಡ್ ಹಾಗೂ ಆತನ ಗ್ಯಾಂಗ್‌ನ ವಿರುದ್ಧ 307 ಸೆಕ್ಷನ್ ಹಾಕಿದ್ದಾರೆ. ನಲಪಾಡ್ ಯಾವುದೇ ಮಾನವೀತೆಯನ್ನೂ ತೋರಿಸದೆ ಸಿನಿಮಾಗಳಲ್ಲಿ ನಾಯಕ ನಟ ವಿಲನ್‌ಗಳ ಮೇಲೆ ದಾಳಿ ಮಾಡುವಂತೆ ವಿದ್ವತ್ ಮೇಲೆ ದಾಳಿ ಮಾಡಿದ್ದಾನೆ.ಹೀಗಾಗಿ, ನಲಪಾಡ್‌ಗೆ ಯಾವುದೆ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಶ್ಯಾಮಸುಂದರ್ ಅವರು ಪೀಠಕ್ಕೆ ತಿಳಿಸಿದರು.

ವಿದ್ವತ್‌ನನ್ನು ಹೊಡೆಯುವುವಾಗ ಹೊಟೇಲ್‌ನ ಮಾಲಕ ಹಾಗೂ ಸಿಬ್ಬಂದಿಗಳು ಬಂದು ನಲಪಾಡ್‌ಗೆ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡರೂ ಅದನ್ನು ಲೆಕ್ಕಿಸದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಾಗೂ ಬಾಟಲ್ ಹಾಗೂ ನಕ್ಕಲ್‌ನಿಂದ ಪಂಚ್ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News