×
Ad

ಅಧಿಕಾರಿಗಳ ನಿರ್ಲಕ್ಷ್ಯ - ವಿಳಂಬ : ಸರಕಾರಕ್ಕೆ ಭಾರೀ ಆರ್ಥಿಕ ನಷ್ಟ

Update: 2018-03-09 21:19 IST

ಬೆಂಗಳೂರು, ಮಾ. 9: ‘ಅಧಿಕಾರಿಗಳ ನಿರ್ಲಕ್ಷ್ಯ-ವಿಳಂಬ ಧೋರಣೆಯಿಂದ ಕಾಮಗಾರಿಗಳ ವೆಚ್ಚ 200 ಪಟ್ಟು ಹೆಚ್ಚಾಗಿದ್ದು, ಕೆಲವೆಡೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಆರ್ಥಿಕ ನಷ್ಟಕ್ಕೂ ಕಾರಣವಾಗಿದ್ದಾರೆ. ಆರ್ಥಿಕ ಇಲಾಖೆ ಅನುಮತಿ ಪಡೆಯದೆ ಮರು ಟೆಂಡರ್ ಕರೆದಿದ್ದರಿಂದ ಕೋಟ್ಯಂತರ ರೂ.ನಷ್ಟವಾಗಿದೆ’ ಎಂಬ ಆಘಾತಕಾರಿ ಅಂಶ ‘ವಿಧಾನ ಪರಿಷತ್ತಿನ ಸರಕಾರಿ ಭರವಸೆಗಳ ಸಮಿತಿ’ ವರದಿಯಿಂದ ಬಯಲಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ಸಮಿತಿಯ ನಲವತ್ತಾರನೆಯ ವರದಿಯನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ, ಸಮಿತಿಯ 1379 ಭರವಸೆಗಳ ಪೈಕಿ ಒಟ್ಟು 74 ಸಭೆಗಳನ್ನು ನಡೆಸಿ, 34 ಇಲಾಖೆಯ 957 ಭರವಸೆಗಳನ್ನು ಮುಕ್ತಾಯಗೊಳಿಸಿದೆ.
ಅಲ್ಲದೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ, ಆರ್ಥಿಕ, ಮೂಲಸೌಲಭ್ಯ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಭರವಸೆಗಳನ್ನು ಸರಕಾರ ಈಡೇರಿಸಿದ ಹಿನ್ನೆಲೆಯಲ್ಲಿ ಸದರಿ ಆರು ಇಲಾಖೆಗಳ ಭರವಸೆಗಳು ಶೂನ್ಯಗೊಂಡಿರುತ್ತದೆ ಎಂದು ಹೇಳಿದರು.

ವೆಚ್ಚ ಹೆಚ್ಚಳ: ಬೆಣ್ಣೆತೋರಾ ನೀರಾವರಿ ಯೋಜನೆಗೆ 1960ರಲ್ಲಿ 78.83 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು. ಆದರೆ, ಇದೀಗ ಆ ಯೋಜನೆಗೆ 504.39 ಕೋಟಿ ರೂ.ಗಳಾಗಿದೆ. ಅಮರ್ಜಾ ಯೋಜನೆಗೆ 1972ರಲ್ಲಿ 5.70 ಕೋಟಿ ರೂ.ಎಂದು ಅಂದಾಜು ಮಾಡಿದ್ದು, ಇದೀಗ 295.83 ಕೋಟಿ ರೂ.ವೆಚ್ಚವಾಗಿದೆ.

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಿಂದ ಉಣಕಲ್ ಕೆರೆವರೆಗಿನ ಫ್ಲೆ ಓವರ್ ಕಾಮಗಾರಿಗೆ ಅನುಮತಿ ನೀಡಿದಾಗ 30 ಕೋಟಿ ರೂ.ಗಳಿಂದ ಇದೀಗ 300 ಕೋಟಿ ರೂ.ಗಳಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ ಧೋರಣೆಗೆ ಸಾಕ್ಷಿ, ಅಧಿಕಾರಿಗಳಿಗೆ ಇಚ್ಛಾಶಕ್ತಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕ್ರಮಕ್ಕೆ ಶಿಫಾರಸು: ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ 600 ಎಕರೆ ಭೂಮಿ ಅವಶ್ಯವಿದ್ದು, ಅದರ ಬದಲಿಗೆ ಅಧಿಕಾರಿಗಳು 707 ಎಕರೆ ಭೂ ಸ್ವಾಧೀನಕ್ಕೆ ನೋಟಿಫಿಕೇಷನ್ ಮಾಡಿದ್ದು, ಉಳಿದ ಭೂಮಿಯನ್ನು ರೈತರಿಗೆ ಹಿಂದಿರುಗಿಸಿಲ್ಲ. ಖಾಸಗಿ ಉದ್ದೇಶಕ್ಕೆ ಭೂಮಿ ನೀಡಿ ಕಾನೂನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದರು.

ಅಧಿಕಾರಿಗಳು ಕೋಟ್ಯಂತರ ರೂ.ಹಣ ದುರ್ಬಳಕೆ, ಕಾನೂನು ಉಲ್ಲಂಘನೆ, ವಿಳಂಬ ಧೋರಣೆಯಿಂದ ಹಲವು ಯೋಜನೆಗಳು ಹತ್ತು, ಇಪ್ಪತ್ತು, ಮೂವತ್ತು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಸೂಕ್ತ ನಿಗಾ ವಹಿಸಿಲ್ಲ. ಇದರಿಂದ ಸರಕಾರಕ್ಕೆ ನಷ್ಟ ಮತ್ತು ಜನರಿಗೆ ಅನ್ಯಾಯವಾಗಿದೆ. ಹೀಗಾಗಿ ಆಡಳಿತ ಯಂತ್ರಾಂಗಕ್ಕೆ ಚುರುಕುಮುಟ್ಟಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಕೆ.ಸಿ.ಕೊಂಡಯ್ಯ, ರಘುನಾಥರಾವ್ ಮಲ್ಕಾಪೂರೆ, ಭಾನುಪ್ರಕಾಶ್, ಶರವಣ, ಶರಣಪ್ಪ ಮಟ್ಟೂರು ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News