ಹಿರಿಯ ಪತ್ರಕರ್ತರಿಗೆ ಉಚಿತ ನಿವೇಶನ : ಎಚ್.ಎಂ.ರೇವಣ್ಣ
ಬೆಂಗಳೂರು, ಮಾ.9: ಮಾನ್ಯತೆ ಪಡೆದ ಹಿರಿಯ ಪತ್ರಕರ್ತರಿಗೆ ನಗರದ ಕೆ.ಆರ್.ಪುರಂ ಬಳಿಯ ಆವಲಹಳ್ಳಿಯಲ್ಲಿ ಉಚಿತ ನಿವೇಶನ ನೀಡಲು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ 30 ಮಂದಿ ಸಂಪಾದಕರು ಮತ್ತು ವರದಿಗಾರರಿಗೆ ಮಾಧ್ಯಮ ಕಿಟ್(ಲ್ಯಾಪ್ ಟಾಪ್, ಕ್ಯಾಮರಾ ಮತ್ತು ಪ್ರಿಂಟರ್) ಹಾಗೂ ಜಾಹೀರಾತು ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಕರ್ತರು ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ನಮ್ಮ ಸರಕಾರ ಈಡೇರಿಸಿದೆ. ಹಿಂದುಳಿದ ವರ್ಗಗಳ ಪತ್ರಕರ್ತರು ತಮಗೆ ಮಾಧ್ಯಮ ಸಲಕರಣೆಗಳನ್ನು ನೀಡಿ ಎಂದು ಮನವಿ ಮಾಡಿದ್ದರು. ಅವರು ಬೇಡಿಕೆಯನ್ನು ತಕ್ಷಣವೇ ಈಡೇರಿಸಿದ್ದೇವೆ. ಅದೇ ರೀತಿಯಲ್ಲಿ ಇತರೆ ವರ್ಗದ ಪತ್ರಕರ್ತರು ಮನವಿ ಸಲ್ಲಿಸಿದರೆ ಅವರ ಬೇಡಿಕೆಯನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಹಿಂದಿನ ದಿನಗಳಲ್ಲಿ ಲಂಕೇಶ್, ಟಿಎಸ್‌ಆರ್ ಸೇರಿದಂತೆ ಹಲವು ಹಿರಿಯ ಪತ್ರಕರ್ತರ ಅಂಕಣಗಳು ತಮ್ಮ ಚಿಂತನೆಗಳನ್ನು ಬೆಳೆಸಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ವಿಶ್ಲೇಷಣಾತ್ಮಕ ರಾಜಕೀಯ ವರದಿಗಳು ಕಾಣೆಯಾಗಿವೆ. ಆದರೆ, ಜಿಲ್ಲಾ ಹಾಗೂ ಸ್ಥಳೀಯ ಪತ್ರಿಕೆಗಳು ವೌಲಿಕವಾಗಿ ಕೆಲಸ ಮಾಡುತ್ತಿವೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ಹಿಂದುಳಿದ ಸಮುದಾಯದ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಹಾಗೂ ಸೃಜನಾತ್ಮಕವಾಗಿ ಬೆಳೆಯಬೇಕೆಂಬ ಸದುದ್ದೇಶದಿಂದ ಮಾಧ್ಯಮ ಕಿಟ್‌ನ್ನು ಕೊಡಲಾಗುತ್ತಿದೆ. ಇದು ಪತ್ರಕರ್ತರಿಗೆ ಸರಕಾರ ಕೊಡುತ್ತಿರುವ ಸಣ್ಣ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ತನ್ವೀರ್ ಸೇಠ್, ಪರಿಷತ್ ಸದಸ್ಯ ಬೋಸರಾಜ್, ಸಂಸದ ಚಂದ್ರಪ್ಪ, ಬಿ.ವಿ.ನಾಯಕ್, ಮಾಧ್ಯಮ ಅಕಾಡೆಮಿ ಅ್ಯಕ್ಷ ಸಿದ್ದರಾಜು ಮತ್ತಿತರರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ದಲಿತ ಹಾಗೂ ಹಿಂದುಳಿದ ಸಮುದಾಯದ ಪತ್ರಕರ್ತರಿಗೆ ಮಾಧ್ಯಮ ಕಿಟ್‌ನ್ನು ನೀಡುತ್ತಿದೆ. ಇದರ ಪ್ರೇರಣೆಯಿಂದ ಅಲ್ಪಸಂಖ್ಯಾತ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ಸಮುದಾಯದ ಪತ್ರಕರ್ತರಿಗೆ ಮಾಧ್ಯಮ ಕಿಟ್‌ನ್ನು ಶೀಘ್ರವೇ ನೀಡಲಾಗುವುದು.
-ತನ್ವೀರ್ ಸೇಠ್, ಸಚಿವ ಅಲ್ಪಸಂಖ್ಯಾತ ಇಲಾಖೆ