ಕೊರಿಯಾ ವಿರುದ್ಧ ಭಾರತಕ್ಕೆ 3-1 ಮುನ್ನಡೆ

Update: 2018-03-09 18:40 GMT

ಸಿಯೋಲ್, ಮಾ.9: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ನಡೆದ ಕೊರಿಯಾ ವಿರುದ್ಧದ ನಾಲ್ಕನೇ ಪಂದ್ಯವನ್ನು 3-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.
 ಜಿನ್‌ಚುನ್ ನ್ಯಾಶನಲ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತದ ಗುರ್ಜಿತ್ ಕೌರ್(2ನೇ ನಿಮಿಷ) ಹಾಗೂ ದೀಪಿಕಾ(14ನೇ ನಿಮಿಷ)ತಲಾ ಒಂದು ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.

47ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದ ಪೂನಂ ರಾಣಿ ಭಾರತವನ್ನು ಸುಸ್ಥಿತಿಗೆ ತಲುಪಿಸಿದರು. ದಕ್ಷಿಣ ಕೊರಿಯಾದ ಪರ ಮಿ ಹಿಯುನ್ ಪಾರ್ಕ್ 57 ನೇ ನಿಮಿಷದಲ್ಲಿ ಸಮಾಧಾನಕರ ಗೋಲು ಬಾರಿಸಿದರು.
ಭಾರತ ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಇದನ್ನು ಗುರ್ಜಿತ್ ಕೌರ್ ಗೋಲಾಗಿ ಪರಿವರ್ತಿಸಿದರು. ಆತಿಥೇಯ ಕೊರಿಯಾ 4ನೇ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು ಸಮಬಲಗೊಳಿಸುವ ಅವಕಾಶ ಪಡೆದಿತ್ತು. ಆದರೆ, ಪೆನಾಲ್ಟಿ ಕಾರ್ನರ್‌ನ ಮೂಲಕ ಬಾರಿಸಿದ ಚೆಂಡು ವೈಡ್ ಆಗಿತ್ತು. 10ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆದ ಕೊರಿಯಾಕ್ಕೆ ಭಾರತದ ಗೋಲ್‌ಕೀಪರ್ ಸ್ವಾತಿ ತಡೆಯಾದರು.

ಮತ್ತೊಂದೆಡೆ ಭಾರತ 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿತು. ಗೋಲು ಬಾರಿಸಿದ ದೀಪಿಕಾ ಮೊದಲ ಕ್ವಾರ್ಟರ್ ಅಂತ್ಯದಲ್ಲಿ ಭಾರತವನ್ನು ಉತ್ತಮ ಸ್ಥಿತಿಗೆ ತಲುಪಿಸಿದರು.
ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲಿಗಾಗಿ ಪ್ರಯತ್ನ ನಡೆಸಿದವು. ಮೂರನೇ ಕ್ವಾರ್ಟರ್‌ನಲ್ಲೂ ಆತಿಥೇಯ ಕೊರಿಯಾ ತಂಡ ಗೋಲು ಬಾರಿಸಲು ಪ್ರಯತ್ನ ಮುಂದುವರಿಸಿತು. ಭಾರತ ಮೂರನೇ ಗೋಲು ಬಾರಿಸಲು ಯತ್ನಿಸಿತು.

 ನಾಲ್ಕನೇ ಕ್ವಾರ್ಟರ್‌ನ 47ನೇ ನಿಮಿಷದಲ್ಲಿ ಗೋಲು ಬಾರಿಸಿದ ಪೂನಂ ರಾಣಿ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. ವಿಶ್ವದ ನಂ.9ನೇ ತಂಡ ಕೊರಿಯಾ ಅಂತಿಮ ಹಂತದಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ್ದು, 57ನೇ ನಿಮಿಷದಲ್ಲಿ ಹಿಯುನ್ ಪಾರ್ಕ್ ಸಮಾಧಾನಕರ ಗೋಲು ಬಾರಿಸಿದರು. ಭಾರತದ ಮಹಿಳಾ ತಂಡ ಮಾ.11 ರಂದು ದಕ್ಷಿಣ ಕೊರಿಯಾ ವಿರುದ್ಧ ಐದನೇ ಹಾಗೂ ಅಂತಿಮ ಪಂದ್ಯವನ್ನು ಆಡಲಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News