ಚದುರಂಗರ ಸ್ವಗತ !

Update: 2018-03-10 13:05 GMT

ಕನ್ನಡದ ಪ್ರಸಿದ್ಧ ಕಾದಂಬರಿಕಾರ ಚದುರಂಗರು ತಾವು ಬರಹಗಾರರಾಗಿ ರೂಪುತಳೆದ ಹಿನ್ನೆಲೆಯನ್ನು ಇಲ್ಲಿ ವಿವರಿಸಿದ್ದಾರೆ. 1984 ರಲ್ಲಿ ಕೈವಾರದಲ್ಲಿ ನಡೆದ 56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಒಂದು ಗೋಷ್ಠಿಯಲ್ಲಿ ಚದುರಂಗರು ಮಾಡಿದ ಭಾಷಣವಿದು. ಅವರ ಸರಳತೆ ಹಾಗೂ ಬರಹಗಾರನ ವ್ಯಕ್ತಿತ್ವ ಬಿಂಬಿಸುವ ಮಾತುಗಳಿವು.

ನಾನೇನು ಸಾಹಿತಿ ಆಗುತ್ತೇನೆ ಎಂದು ತಿಳಿದುಕೊಂಡಿರಲಿಲ್ಲ. ಸಾಹಿತಿ ಆಗ ಬೇಕು ಎಂದು ಆಸೆಯನ್ನೂ ಇಟ್ಟುಕೊಂಡಿರಲಿಲ್ಲ. ನನಗೆ ಆಸೆ ಇದ್ದದ್ದು-ಡಾಕ್ಟರ್ ಆಗಬೇಕು ಎಂದು. ಆ ಅಪೇಕ್ಷೆಯಿಂದಲೇ ಇಂಟರ್‌ಮೀಡಿಯಟ್‌ನಲ್ಲಿ ಕೆಮಿಸ್ಟ್ರಿ, ಬಾಟನಿ, ಜೂವಾಲಜಿಗಳನ್ನು ಐಚ್ಛಿಕ ವಿಷಯಗಳಾಗಿ ತೆಗೆದುಕೊಂಡಿದ್ದೆ. ಆದರೆ ಪ್ರಾಣಿಶಾಸ್ತ್ರ ವಿಭಾಗದ ಲೆಬಾರೇಟರಿಯಲ್ಲಿ ಕಪ್ಪೆ, ಜಿರಲೆ ಇಂಥವನ್ನ ಕುಯ್ಯುವಾಗ ಯಾಕೋ ನನ್ನ ಮನಸ್ಸಿಗೆ ಹೇಸಿಗೆಯೆನಿಸಿತು. ಹೀಗಾಗಿ ಡಾಕ್ಟರ್ ಆಗುವ ಆಸೆಯನ್ನೇ ಕೈಬಿಟ್ಟೆ.

ಇದರ ಜತೆಜತೆಗೇ ರಾಜಕೀಯವೂ ನನ್ನನ್ನು ಪ್ರಬಲವಾಗಿ ಸೆಳೆದಿತ್ತು. ಗಾಂಧೀಜಿಯಿಂದ ಪ್ರಭಾವಿತನಾಗಿ ಖಾದಿ ಬಟ್ಟೆ ಹಾಕಲು ಆರಂಭಿಸಿದ್ದೆ. ಅಷ್ಟರಲ್ಲಿ ನಮ್ಮ ಅಣ್ಣನವರಿಗೆ ಮೈಸೂರು ಅರಮನೆಯ ಸಂಬಂಧವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಅವರ ಅಕ್ಕನ ಮಗಳನ್ನೇ ಅವರಿಗೆ ಲಗ್ನಮಾಡಿಕೊಟ್ಟಿದ್ದರು. ಪರಿಸ್ಥಿತಿ ಹೀಗಿದ್ದಾಗ ನಾನು ಖಾದಿ ಬಟ್ಟೆ ಹಾಕಿದ್ದು ನನ್ನ ಅಣ್ಣನವರಿಗೆ ಸಹಜವಾಗೇ ಕೋಪ ತಂದಿತ್ತು. ನನ್ನ ಕೆನ್ನೆಗೆ ಎರಡೇಟು ಕೊಟ್ಟು ಖಾದಿ ಟೋಪಿಯನ್ನು ಕಿತ್ತೆಸೆದರು. ಗಾಂಧಿ ಟೋಪಿಗೆ ಅವಮಾನ ಮಾಡಿದರು ಎಂದು ನಾನು ಮೂರು ದಿನ ಊಟ ಬಿಟ್ಟೆ. ನನ್ನ ತಾಯಿಗೆ ಇದು ಸಹಿಸಲಾಗಲಿಲ್ಲ. ಏನೋ ಹಟಮಾರಿ ಹುಡುಗ. ಮೂರು ದಿನದಿಂದ ಊಟ ಬಿಟ್ಟು ಕುಳಿತಿದ್ದಾನೆ. ಇದನ್ನ ನೋಡಿಕೊಂಡು ನಾನು ಹೇಗೆ ಸುಮ್ಮನೆ ಕುಳಿತಿರಲಿ. ನಾವೇ ಸೋಲೋಣ. ಅವನು ಎಂಥದ್ದಾದರೂ ಬಟ್ಟೆ ಹಾಕಿಕೊಳ್ಳಲಿ. ನೀನೇ ಬಂದು ಊಟ ಮಾಡು ಅಂತ ಹೇಳಪ್ಪ ಅಂತ ನನ್ನ ಅಣ್ಣನವರನ್ನು ಒತ್ತಾಯಿಸಿದರು. ಕೋಪ ಉಕ್ಕುತ್ತಿದ್ದರೂ ಹೇಗೋ ತಾಳಿಕೊಂಡು ನನ್ನ ಬಳಿ ಬಂದ ಅಣ್ಣನವರು ಪ್ರಾರಬ್ಧ, ನೀನು ಯಾವ ಬಟ್ಟೆಯನ್ನಾದರೂ ಹಾಕಿಕೊ. ಈಗ ಎದ್ದು ಹೋಗಿ ಊಟ ಮಾಡು ಎಂದರು. ಮುಂದೆ ಅನೇಕ ವರ್ಷಗಳವರೆಗೂ ನಾನು ಖಾದಿ ಬಟ್ಟೆಯನ್ನೇ ಉಪಯೋಗಿಸುತ್ತಿದ್ದೆ.

ಆನಂತರ ನಾನು ಕಮ್ಯೂನಿಸ್ಟ್ ಪಾರ್ಟಿಯನ್ನು ಸೇರಿದೆ. ಆಗ ಈ ಹೆಸರಿನಿಂದ ನಾವು ವ್ಯವಹರಿಸುವಂತಿರಲಿಲ್ಲ. ಸರಕಾರದ ಕಣ್ಣು ತಪ್ಪಿಸುವುದಕ್ಕೋಸ್ಕರ ಮಾಸ್ ಅವೇಕನರ್ಸ್ ಯೂನಿಯನ್ (Mass Awakeners Union) ಎಂದು ಹೆಸರನ್ನು ಬದಲಿಸಿಕೊಂಡಿದ್ದೆವು. ನಾವು ಏಳೆಂಟು ಮಂದಿ ಸದಸ್ಯರಿದ್ದೆವು. ಆಗ ಕೆಲಸ ಏನು ಅಂದರೆ-ಪಾರ್ಟಿಗೆ ಸಂಬಂಧಪಟ್ಟ ವಿಷಯ ಓದೋದು, ಚರ್ಚೆ ಮಾಡೋದು, ಒಮ್ಮೆಮ್ಮೆ ಮೈಸೂರಿನ ಸುಬ್ಬರಾಯನಕೆರೆ ಅಂಗಳದಲ್ಲಿ ಭಾಷಣ ಬಿಗಿಯೋದು. ಆಗ ಅಲ್ಲಿ ನಮ್ಮ ಸಭಿಕರು ಯಾರು ಅಂದರೆ-ಎಲ್ಲೋ ಕೆಲವರು ಕೂಲಿಗಳು, ಕೆಲವರು ಹೊಟೇಲ್ ಮಾಣಿಗಳು ಮತ್ತು ಆ ಬಯಲಿನಲ್ಲಿ ಹರಟುತ್ತ ಅಥವಾ ಇಸ್ಟಿಟ್ ಆಡುತ್ತ ಕಾಲ ನೂಕುತ್ತಿದ್ದ ಕೆಲವು ಸೋಮಾರಿ ಜನ? ಈಗಲೂ ನೆನಸಿಕೊಂಡರೆ ನಗು ಬರುತ್ತದೆ. ಹತ್ತು ಸಾವಿರ ಜನರನ್ನ ಉದ್ದೇಶಿಸಿ ಭಾಷಣ ಮಾಡುವ ಹಾಗೆ ಆ ಹಿಡಿ ಮಂದಿಗೆ ನಾವು ಭಾಷಣ ಕಟ್ಟುತ್ತಾ ಇದ್ದೆವು !

ಆದರೆ ಪಾರ್ಟಿ ಕೆಲಸ ಇದಿಷ್ಟಕ್ಕೇ ಸೀಮಿತವಾಗಿರಲಿಲ್ಲ. ಬೀಡಿ ಕಾರ್ಮಿಕರು, ಹೊಟೇಲ್ ಕೆಲಸಗಾರರು, ರೇಷ್ಮೆ ಕಾರ್ಮಿಕರು ಇವರನ್ನೆಲ್ಲ ಸಂಘಟಿಸುವುದೂ ಪಾರ್ಟಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿತ್ತು. ಆ ಸಮಯದಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತಿದೆ. ಮೈಸೂರಿನ ಸಿಲ್ಕ್ ಫ್ಯಾಕ್ಟರಿಯ ಕೆಲಸಗಾರರು ಹಟಾತ್ತನೆ ಮುಷ್ಕರ ಹೂಡಿದ್ದರು. ಆ ಕೆಲಸಗಾರರಲ್ಲಿ ಬಹುಮಂದಿ ಮಹಿಳೆಯರೆ ! ಅವರೆಲ್ಲರೂ ದಿನಗೂಲಿಗೆ ದುಡಿಯುತ್ತಿದ್ದವರು. ಬೆಳಗಿನಿಂದ ಸಂಜೆಯವರೆಗೂ ದುಡಿದರೂ ಅವರಿಗೆ ಒಬ್ಬೊಬ್ಬರಿಗೂ ಫ್ಯಾಕ್ಟರಿಯ ಆಡಳಿತ ವರ್ಗ ಕೊಡುತ್ತಿದ್ದ ಹಣ ಕೇವಲ ಎಂಟಾಣೆ ! ಈ ಅನ್ಯಾಯವನ್ನು ಬಹಳ ಕಾಲದಿಂದ ಹೇಗೋ ಸಹಿಸಿಕೊಂಡು ಬಂದಿದ್ದ ಮಹಿಳೆಯರು ಕಡೆಗೊಮ್ಮೆ ಸಿಡಿದೆದ್ದಿದ್ದರು. ಅವರ ಬೇಡಿಕೆ ಇಷ್ಟು: ಎಂಟಾಣೆ ಜೊತೆಗೆ ಕೇವಲ ಇನ್ನೊಂದು ಎಂಟಾಣೆ ಕೊಡಿ ಎಂದು. ಆದರೆ ಆಡಳಿತ ವರ್ಗ ಈ ಕನಿಷ್ಠ ಬೇಡಿಕೆಯನ್ನೂ ನಿರ್ದಯವಾಗಿ ತಳ್ಳಿಹಾಕಿತ್ತು. ಅದಕ್ಕಾಗಿಯೇ ಮುಷ್ಕರ ನಡೆದಿತ್ತು. ಈ ಅನ್ಯಾಯ ನನ್ನ ಮನಸ್ಸನ್ನು ಬಹುವಾಗಿ ಕಲಕಿತ್ತು. ಆ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತ ಅಲ್ಲೇ ಒಂದು ಪದ್ಯ ಕಟ್ಟಿ ಹಾಡಿದೆ. ಆ ಪದ್ಯದ ಒಂದೆರಡು ಸಾಲು ನೆನಪಾಗುತ್ತಿದೆ :

ಹೆಸರಾದಂಥ ಮೈಸೂರು ರೇಷ್ಮೆ ತೆಗೆವರು ನಾವುಗಳು

ಆದರದರ ಸೀರೆಯನುಡುವರು

ಬೇರೆ ಹೆಂಗಸರು, ಅಯ್ಯೋ ಬೇರೆ ಹೆಂಗಸರು.

.....ಎಂಟಾಣೆ ಮೇಲೆಂಟಾಣೆ

ಕಸಿದೇಕೊಳ್ಳುವೆವು

ಖಂಡಿತ, ಕಸಿದೇಕೊಳ್ಳುವೆವು.....

ಇದೇನೋ ಸರಿಹೋಯಿತು. ಆದರೆ ಮುಂದೆ ನನ್ನ ಹೆಂಡತಿ, ತನಗೆ ಮೈಸೂರು ಸಿಲ್ಕ್ ಸೀರೆ ಉಡಬೇಕೆಂದು ಆಸೆಯಾಗಿದೆ ಎಂದಾಗ, ನನಗೆ ಕಸಿವಿಸಿಯಾಯಿತು. ಆ ಕೂಲಿ ಹೆಂಗಸರ ಶೋಚನೀಯ ಸ್ಥಿತಿ ವರ್ಣಿಸಿ, ಇದೆಲ್ಲ ಬೂರ್ಜ್ವಾ ಲಗಜರಿ ಎಂದೆ. ಆ ಹೆಂಗಸರ ದುಃಸ್ಥಿತಿಗೆ ನನಗೂ ಸಂಕಟವಾಗುತ್ತೆ, ನಡೆಯಿರಿ, ಬೇಕಾದರೆ ನಿಮ್ಮ ಜತೆಗೆ ನಾನೂ ಬಂದು ಭಾಷಣ ಮಾಡ್ತೇನೆ. ಆ ಹೆಂಗಸರಿಗೆ ಎಂಟಾಣೆ ಕೂಲಿ ಹೆಚ್ಚು ಮಾಡುವುದರ ಜತೆಗೆ ಪ್ರತಿ ವರ್ಷ ಅವರಿಗೆ ಒಬ್ಬೊಬ್ಬರಿಗೂ ಕನಿಷ್ಠ ಪಕ್ಷ ಒಂದು ಸಿಲ್ಕ್ ಸೀರೆ ಕೊಡಬೇಕೂಂತ ಆಡಳಿತ ವರ್ಗನ ಒತ್ತಾಯಿಸ್ತೇನೆ. ಈಗ ನಾನು ಕೇಳ್ತಾ ಇರೋದಾದರೂ ಏನು ?  ಕೇವಲ ಒಂದು ಸಿಲ್ಕ್ ಸೀರೆ, ಅಷ್ಟೇನೆ. ನೀವು ಇಷ್ಟನ್ನೂ ನಡೆಸಿಕೊಡಲಾರಿರಾ ? ಎಂದು ನನ್ನ ಹೆಂಡತಿಯ ವಾದ. ನೀನು ಏನೇ ಹೇಳು, (it is a matte of principle) ಎಂದೆ. ಹೋಗ್ರಿ ನಿಮ್ಮ (principle) ನೀವೇ ಇಟ್ಟುಕೊಳ್ಳಿ. ನೀವು ಹಣ ಕೊಟ್ಟು ತೆಗೆದು ಕೊಡದೇ ಇದ್ದರೆ ಚಿಂತೆಯಿಲ್ಲ. ಪಕ್ಕದ ಮನೆಯೋರು ಸಾಲ ಕೊಡ್ತೀನಿ ಅಂತ ಹೇಳಿದ್ದಾರೆ ಎಂದು ನನಗೆ ಮನವರಿಕೆ ಮಾಡಿದ್ದಷ್ಟೇ ಅಲ್ಲ, ಆ ಪ್ರಕಾರ ಒಂದು ಸಿಲ್ಕ್ ಸೀರೆಯನ್ನು ತಂದೇ ತಂದಳು !

ಮುಂದೆ ನಾನು ರಾಯಿಸ್ಟ್ ಅಂದರೆ, ಎಂ.ಎನ್. ರಾಯ್ ಪಾರ್ಟಿ ಸದಸ್ಯ ಆದೆ. ಹಾಗೆಯೇ ವಿದ್ಯಾರ್ಥಿ ಚಳವಳಿಯಲ್ಲೂ ಭಾಗವಹಿಸಿದೆ. ಆ ಕಾಲಕ್ಕೆ ಮುಂಬೈನ ಖ್ಯಾತ ವಕೀಲರಾಗಿದ್ದ ನಾರಿಮನ್ (Nariman) ಬೆಂಗಳೂರಿಗೆ ಬಂದಿದ್ದರು. ಬನ್ನಪ್ಪ ಪಾರ್ಕಿನಲ್ಲಿ ಅವರ ಭಾಷಣ ಏರ್ಪಟ್ಟಿತ್ತು. ಆಗ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದರು. ಕಲ್ಲೆಸೆದವರು ವಿದ್ಯಾರ್ಥಿಗಳೇ ಎಂದು ಪೊಲೀಸರು ತೀರ್ಮಾನಿಸಿ, ಮಾರನೆಯ ದಿನ ಆಗ ನಾನು ವ್ಯಾಸಂಗ ಮಾಡುತ್ತಿದ್ದ ಬೆಂಗಳೂರಿನ ಇಂಟರ್‌ಮೀಡಿಯಟ್ ಕಾಲೇಜಿನೊಳಗೆ ನುಗ್ಗಿ ಬಂದು, ಸಿಕ್ಕಿದವರನ್ನು ತಮ್ಮ ಲಾಟಿಗಳಿಂದ ಬಡಿಯಲು ಆರಂಭಿಸಿದರು. ಆಗ ನನ್ನ ಉಪಾಧ್ಯಾಯರಿಗೆ ಬೀಳುತ್ತಿದ್ದ ಏಟನ್ನು ತಪ್ಪಿಸಲು ಹೋಗಿ, ಪೊಲೀಸರ ಲಾಟಿ ಹೊಡೆತಕ್ಕೆ ನನ್ನ ತಲೆಯೊಡೆಯಿತು. ಇಂಥ ಅನುಭವಗಳಿಂದ ಸರಕಾರ ಎಂದರೆ ಮೊದಲಿನಿಂದಲೂ ನನ್ನಲ್ಲಿ ಬೇರೂರಿದ್ದ ಬೇಸರ ಇನ್ನೂ ತೀವ್ರವಾಯಿತು.

ನನ್ನ ಇಂಥ ಚಟುವಟಿಕೆಗಳಿಂದ ನನ್ನ ಅಣ್ಣನವರಿಗೆ ಮತ್ತಷ್ಟು ಕೋಪ ಬಂದಿತು. ಜಯಚಾಮರಾಜ ಒಡೆಯರ ದೊಡ್ಡಮ್ಮನ ಮಗಳನ್ನು ನಾನು ಲಗ್ನವಾಗಲು ನಿರಾಕರಿಸಿದ ಮೇಲಂತೂ ಅವರ ಕೋಪ ಇಮ್ಮಡಿಸಿತು. ಪೂನಾದಲ್ಲಿ ನನ್ನ ಎರಡನೆಯ ವರ್ಷದ ಲಾ ಮತ್ತು ಎಂ.ಎ. ಪರೀಕ್ಷೆಗಳ ವ್ಯಾಸಂಗಕ್ಕೆ ಸಹಾಯ ಮಾಡಲು ನಿರಾಕರಿಸಿದರು. ಆಗಲೇ ನನ್ನ ಮನಸ್ಸು ಸಾಹಿತ್ಯದ ಕಡೆ ಹೊರಳಿದ್ದು.

ಚಿಕ್ಕಂದಿನಿಂದಲೂ ಕತೆ ಕೇಳುವುದು ಎಂದರೆ ನನಗೆ ತುಂಬಾ ಇಷ್ಟ. ಅದರಲ್ಲೂ ನನ್ನ ತಾಯಿ, ನನ್ನ ಅಕ್ಕ, ನನ್ನ ದೊಡ್ಡಮ್ಮ ದಿವಂಗತ ದೇವರಾಜ ಅರಸರ ಅಜ್ಜಿ ಅವರೆಲ್ಲರೂ ಸೊಗಸಾಗಿ ಕತೆ ಹೇಳುತ್ತಿದ್ದರು. ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಇದರ ಜತೆಗೆ ನಾನು ಕೂಡ ಕಂಡ ಕತೆ ಪುಸ್ತಕಗಳನ್ನೆಲ್ಲ ಓದುತ್ತಾ ಇದ್ದೆ. ಆ ಕಾಲಕ್ಕೆ ನನ್ನ ಅಣ್ಣ ನನ್ನನ್ನು ರಾಯಲ್ ಸ್ಕೂಲಿಗೆ (Royal School) ಸೇರಿಸಿದ್ದರು. ಅಲ್ಲಿ ನಾನು ಜಯಚಾಮರಾಜರ ಜತೆಗೆ ಸಹಪಾಠಿಯಾದೆ. ಜಯಚಾಮರಾಜರಿಗೆ, ಅವರ ತಾಯಿ ಮತ್ತು ತಂಗಿಯರಿಗೆ ಕತೆ ಕೇಳುವುದಕ್ಕೆ ಬಲು ಇಷ್ಟ. ಕತೆ ಹೇಳು. ಕತೆ ಹೇಳು ಎಂದು ಆಗಿಂದಾಗೆ ಗಂಟು ಬೀಳುತ್ತಿದ್ದರು. ನಮ್ಮ ತಾಯಿ, ಅಕ್ಕ, ದೊಡ್ಡಮ್ಮ ಅವರುಗಳಿಂದ ಕೇಳಿದ್ದ ಕತೆಗಳನ್ನೆಲ್ಲ ಹೇಳಿದ್ದಾಯಿತು. ಅವರು ಇನ್ನೊಂದು ಕತೆ, ಇನ್ನೊಂದು ಎಂದು ಪೀಡಿಸುತ್ತಲೇ ಇದ್ದರು. ನನ್ನ ಕತೆಗಳ ಭಂಡಾರವೆಲ್ಲ ಮುಗಿದು ಹೋಗಿತ್ತು. ಮುಂದೇನು ಮಾಡಲಿ ಎಂದು ಚಿಂತಿಸುತ್ತಿರುವಾಗ ಒಂದು ಉಪಾಯ ಹೊಳೆಯಿತು. ನಮ್ಮ ಅಣ್ಣನವರ ಮನೆಯಲ್ಲಿ ಅಂದರೆ, ಈಗಿನ ಮಾನಸ ಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಚೆನ್ನಾದ ಕತೆಗಳನ್ನು ಯಾವಾಗಲಾದರೊಮ್ಮೆ ಹೇಳುತ್ತಿದ್ದ ಕೆಲವರು ದಾದಿಯರು ಅವ್ವೆಯರು ಇದ್ದರು. ಆದರೆ ಅವರಿಂದ ಕತೆ ಹೊರಡಿಸಬೇಕಾದರೆ ಏನಾದರೂ ಆಮಿಷ ತೋರಲೇಬೇಕಾಗಿತ್ತು. ರಾತ್ರಿ ಊಟ ಮುಗಿಸಿ ಅವರು ಇನ್ನೇನು ಮಲಗಬೇಕು ಎನ್ನುವಾಗ, ಅವರ ತಲೆದಿಸೆಗೆ ಹೋಗಿ ಕೂರುತ್ತಿದ್ದೆ. ಹಾಗೆ ಕುಳಿತು, ಮೆಲ್ಲಗೆ ಒಂದು ಕತೆ ಹೇಳವ್ವ ಏನ್ನುತ್ತಿದ್ದೆ. ಅದಕ್ಕೆ ಅವರು ಅಯ್ಯೋ, ಗಮ್ಮನೆ ಹೋಗಿ ಮನಕ್ಕನ್ನಿ, ನಂಗೆ ಯಾವ ಕತೆ ಬಂದಾತು ಎನ್ನುತ್ತಿದ್ದರು. ನಾನು ಜೇಬಿನಿಂದ ಒಂದಾಣೆ ತೆಗೆದು ಕೈಗಿಟ್ಟ ಕೂಡಲೆ, ಊ, ಇನ್ನೇನು ಮಾಡಾದು, ಯಾವುದ್ನಾರೂ ಗ್ಯಾಪನ ಮಾಡಕತ್ತೀನಿ, ತಾಳಿ ಎಂದು, ನಿಧಾನವಾಗಿ ಎದ್ದು ಕುಳಿತು, ಇಮ್ಮಣ್ಣಿ ಚೀಲದಿಂದ ಎಲೆ ಅಡಿಕೆ ಹೊಗೆಸೊಪ್ಪುಗಳನ್ನು ಬಾಯಿಗೆ ತುರುಕಿ, ಜಗಿಯುತ್ತ ಚಿತ್ರಾವತಿ ಚಿತ್ರಾವತಿ ಅಂತ ಒಂದೂರು.... ಎಂದು ಶುರು ಮಾಡುತ್ತಿದ್ದರು. ನಾನು ಬಿಟ್ಟ ಕಣ್ಣು ಬಿಟ್ಟ ಬಾಯಾಗಿ ಅವರು ಹೇಳುತ್ತಿದ್ದ ಅಡಗೂಲಜ್ಜಿ ಕತೆಗಳನ್ನು ಕೇಳಿಕೊಂಡು, ಅವನ್ನೇ ಆಗಿಂದಾಗ ಜಯಚಾಮರಾಜರಿಗೂ ಅವರ ಮನೆಯವರಿಗೂ ಒಪ್ಪಿಸುತ್ತಿದ್ದೆ.

ಆದರೆ, ಈ ಹಿನ್ನೆಲೆ ಇದ್ದೂ ನಾನು ಮೊದಲು ಬರೆದದ್ದು ಕತೆ ಅಲ್ಲ ; ಕವನ ! ಮಹಾರಾಜ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೆ ಬರೆದದ್ದು. ಆಗಲೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ನಮ್ಮ ಊರಿನ ರಸಿಕರು ಮತ್ತು ಹಳ್ಳಿಯ ಚಿತ್ರಗಳು ಇಂಥ ಕೃತಿಗಳನ್ನು ಅಭ್ಯಾಸ ಮಾಡುವ ಅವಕಾಶ ಸಿಕ್ಕಿದ್ದು. ಇವುಗಳಿಂದಲೇ ನನ್ನ ಮನಸ್ಸು ಹಳ್ಳಿಗಾಡಿನ ಬದುಕಿನ ಕಡೆಗೆ ತಿರುಗುವಂತೆ ಮಾಡಿದವು. ಈಗ ಯೋಚಿಸಿದರೆ ನಾನು ಗ್ರಾಮ ಜೀವನ ಕುರಿತಂತೆ ಮುಂದೆ ಬರೆದ ಕಾದಂಬರಿಗಳ ಭೂಮಿಕೆ ಆಗಲೇ ಸಿದ್ಧವಾಗಿರಬೇಕು ಎನ್ನಿಸುತ್ತದೆ.

ನನ್ನ ಮೊದಲ ಕತೆಯನ್ನು ತಮ್ಮ ಛಾಯಾ ಪತ್ರಿಕೆಯಲ್ಲಿ ಪ್ರಕಟಿಸಿದವರು ಪ್ರೋ ಬಿ.ಎಸ್. ವೆಂಕಟರಾಂ ಅವರು. ತರುವಾಯ ನನ್ನ ಕತೆಗಳೇನೋ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇದ್ದವು. ಆದರೆ ಅದಕ್ಕೆ ಸಂಭಾವನೆ ಮಾತ್ರ ಯಾವ ಪತ್ರಿಕೆಯಿಂದಲೂ ಬರುತ್ತಾ ಇರಲಿಲ್ಲ. ಹೀಗಿರುವಾಗ ಮುಂಬೈಯ ಆದರ್ಶ ಪತ್ರಿಕೆ ನನ್ನದೊಂದು ಸಣ್ಣಕತೆಯನ್ನು ಪ್ರಕಟಮಾಡಿ ಐದು (5) ರೂಪಾಯಿಗಳನ್ನು ಮನಿಯಾರ್ಡರ್ ಮಾಡಿತ್ತು. ಐದು ರೂಪಾಯಿ ಬೆಳ್ಳಿ ನಾಣ್ಯಗಳು ! ನನಗೆ ಹಿಗ್ಗೋ ಹಿಗ್ಗು. ಆಗ ದೇವರಾಜ ಅರಸು ನನ್ನ ಜತೆಗೆ ಇದ್ದರು. ನಾನು ಆತನನ್ನುದ್ದೇಶಿಸಿ ಉತ್ಸಾಹದಿಂದ ನಡಿಯೊ, ಇಂದ್ರಭವನಕ್ಕೊ, ಬೊಂಬಾಯಿ ಬೇಕೋ ಎಲ್ಲ ಕೊಡಿಸ್ತೀನಿ ಎಂದೆ, ದೇವರಾಜ ಅರಸು ನಿನ್ನ ಮೊದಲನೇ ಸಂಪಾದನೆ ಮೊದಲು ಅಜ್ಜಿಗೆ ಅಂದರೆ ನನ್ನ ತಾಯಿಗೆ ತೋರಿಸಿ, ಅವರ ಆಶೀರ್ವಾದ ಪಡೆದು ಹೋಗೋಣ ಎಂದರು. ಸರಿ, ಎಂದು ಒಪ್ಪಿ ನನ್ನ ತಾಯಿಯ ಬಳಿ ಸಾರಿ, ಬೆಳ್ಳಿ ನಾಣ್ಯಗಳನ್ನು ಅವರ ಮುಂದೆ ಇಟ್ಟೆ. ಅವರೂ ಸಂತೋಷಪಟ್ಟರು. ಆದರೆ ಒಂದು ಅರಶಿನದ ಪಾವುಡೆಯೊಳಗೆ ಆ ನಾಣ್ಯಗಳನ್ನಿಟ್ಟು, ಗಂಟು ಕಟ್ಟುತ್ತ ನಂಜುಂಡೇಶ್ವರನಿಗೆ ಮುಡುಪಾಗಿಡೋಣ. ಇದರಿಂದ ನಿನಗೆ ಮುಂದೆ ಒಳ್ಳೇದಾಗತ್ತೆ ಎಂದರು. ಪೆಚ್ಚಾಗಿ, ನಾನು ದೇವರಾಜ ಅರಸರ ಮುಖ ನೋಡಿದೆ. ಅವರು ತಲೆ ತಗ್ಗಿಸಿ ನಿಂತಿದ್ದರು !

ನನ್ನ ಮೊದಲನೇ ಕಥಾ ಸಂಕಲನಕ್ಕೆ ಮುನ್ನುಡಿ ಬರೆದು ಹರಸಿದವರು ನನ್ನನ್ನು ತಮ್ಮ ಸ್ವಂತ ತಮ್ಮನಂತೆ ಕಾಣುತ್ತಿದ್ದ ಅ.ನ.ಕೃಷ್ಣರಾಯರು. ಅವರ ಪ್ರೀತಿಯ ಋಣವನ್ನು ಈ ಜನ್ಮದಲ್ಲಿ ನಾನು ತೀರಿಸಲಾರೆ. ಅವರು ಉದ್ದಕ್ಕೂ ನನ್ನ ಜತೆಗಿದ್ದು ನನ್ನ ಸಾಹಿತ್ಯದ ಬದುಕಿಗೆ ಊರುಗೋಲಾಗಿ ನಿಂತು ಹಲವು ಬಗೆಯಲ್ಲಿ ಉಪಕಾರ ಮಾಡಿದವರು.

 ಆದರೆ ಉಯ್ಯಲೆ ಕಾದಂಬರಿ ಬರೆದು ಸುಮಾರು ಇಪ್ಪತ್ತು ವರ್ಷಗಳು ಕಳೆಯುವವರೆಗೂ ನಾನಾ ಕಾರಣಗಳಿಂದ ನಾನು ಇನ್ನೊಂದು ಕಾದಂಬರಿಯನ್ನು ಬರೆಯಲಾಗಲಿಲ್ಲ. ಕಾಡು ಹಳ್ಳಿಯಲ್ಲಿ ದೀರ್ಘಕಾಲದವರೆಗೆ ವಾಸಿಸುತ್ತಿದ್ದು, ಮತ್ತೆ ಮೈಸೂರಿಗೆ ಬಂದಿದ್ದೆ. ಆ ಕಾಡು ಹಳ್ಳಿಯಲ್ಲಿ ದೀಪವಿರಲಿಲ್ಲ, ವೃತ್ತಪತ್ರಿಕೆ ಲಭ್ಯವಿರಲಿಲ್ಲ, ಓದಲು ಬೇಕಾದ ಪುಸ್ತಕ ಸಿಗುತ್ತಿರಲಿಲ್ಲ. ಹೀಗಾಗಿ ಮೈಸೂರಿಗೆ ಪುನಃ ನಾನು ಹಿಂದಿರುಗಿದಾಗ ರಿಪ್ ವ್ಯಾನ್ ವಿಂಕಲ್ Rip Van Winkle ಥರಾ ಆಗಿದ್ದೆ. ಅಷ್ಟರಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಹೊಸ ಧೋರಣೆಗಳು ಹುಟ್ಟಿಕೊಂಡಿದ್ದವು. ಅದರಲ್ಲೂ ಅಸಂಗತ ನಾಟಕ ಕನ್ನಡ ರಂಗಭೂಮಿಯನ್ನು ಆಕ್ರಮಿಸಿತ್ತು. ಆ ನಾಟಕಗಳನ್ನು ನೋಡುತ್ತಾ ಇದ್ದೆ; ಓದುತ್ತಾ ಇದ್ದೆ. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ನಡೆದ ಒಂದು ಸಂಗತಿ ಇನ್ನೂ ನನ್ನ ಮನದಲ್ಲಿ ಹಸಿರಾಗಿದೆ. ನನ್ನ ಹೆಂಡತಿ ಇದ್ದಕ್ಕಿದ್ದ ಹಾಗೆ, ಅಕಾರಣವಾಗಿ ಜಗಳ ತೆಗೆದಳು. ಯಾವುದೋ ಕ್ಷುಲ್ಲಕ ವಿಷಯ. ನಾನು ಆಕೆಗೆ ಎಷ್ಟೋ ಸಮಾಧಾನ ಹೇಳಿದೆ. ತಪ್ಪು ನನ್ನದೇ ಕ್ಷಮಿಸಿಬಿಡು ಎಂದೂ ಕೇಳಿಕೊಂಡೆ. ಎಷ್ಟು ಪ್ರಯತ್ನಪಟ್ಟರೂ ಆಕೆ ಸಮಾಧಾನ ತಂದುಕೊಳ್ಳಲೇ ಇಲ್ಲ. ಗಟ್ಟಿಯಾಗಿ ಅಳುತ್ತ ಹಾಸಿಗೆಯ ಮೇಲೆ ಮುಸುಕು ಹಾಕಿ ಮಲಗಿಬಿಟ್ಟಳು. ಮತ್ತೆ ಮತ್ತೆ ರಮಿಸಲು ಯತ್ನಿಸಿದೆ. ಫಲಕಾರಿಯಾಗಲಿಲ್ಲ. ಮನೆಯಿಂದ ಹೊರಗಡೆಯಾದರೂ ಹೋಗೋಣ ಎಂದರೆ ಮಳೆ ಧಾರಾಕಾರವಾಗಿ ಸುರಿಯಲು ಆರಂಭಿಸಿತ್ತು. ಅಕಾಲದ ಮಳೆ, ತಲೆ ಚಿಟ್ಟೆನಿಸಿತು. ಅವಳನ್ನು ಹಾಗೇ ಬಿಟ್ಟು ನನ್ನ ಮೇಜಿನ ಮುಂದೆ ಹೋಗಿ ಕುಳಿತೆ. ಎಷ್ಟೋ ಹೊತ್ತು ಸುಮ್ಮನೆ ಮೌನವಾಗಿ ಕುಳಿತೇ ಇದ್ದೆ. ಮಳೆಯೂ ಸುರಿಯುತ್ತಲೇ ಇತ್ತು. ಬೋನಿನೊಳಗೆ ಸಿಕ್ಕಿಬಿದ್ದ ಇಲಿಯಂತಾಗಿತ್ತು ನನ್ನ ಸ್ಥಿತಿ. ಆಗಲೇ ನಾನು ಇಲಿ ಬೋನು ಅಸಂಗತ ನಾಟಕ ಬರೆದದ್ದು !

ಆದರೆ ಇವು ಯಾವುವೂ ನನಗೆ ಹೆಚ್ಚು ತೃಪ್ತಿಕೊಟ್ಟಂಥ ಕೃತಿಗಳಾಗಿರಲಿಲ್ಲ. ಅಲ್ಲಿಯ ತನಕ ನನಗಾಗಿದ್ದ ಎಂಥೆಂಥದೊ ಅನುಭವಗಳಿಗೆ ಸಹಜ ಅಭಿವ್ಯಕ್ತಿ ಸಿಕ್ಕಿದ್ದು ನನ್ನ ಇತ್ತೀಚಿನ ಕೃತಿ ವೈಶಾಖದಲ್ಲಿ ಎನ್ನಬಹುದೇನೊ.

Writer - ರೂಪದರ್ಶಿಗಳು -ಚದುರಂಗ

contributor

Editor - ರೂಪದರ್ಶಿಗಳು -ಚದುರಂಗ

contributor

Similar News