ಡಿಜಿಟಲ್ ಕನ್ನಡದ ಸಮಸ್ಯೆಗಳಿಗೆ ಯೂನಿಕೋಡ್ ಶಿಷ್ಟತೆ ಒದಗಿಸಿರುವ ಪರಿಹಾರಗಳು

Update: 2018-03-10 13:13 GMT

ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆ ವ್ಯವಸ್ಥೆ (ಒ.ಎಸ್) ಮತ್ತು ಆನ್ವಯಿಕ ತಂತ್ರಾಂಶಗಳು (ಆಪ್ಲಿಕೇಷನ್‌ಗಳು, ಆ್ಯಪ್‌ಗಳು) ಇಂದು ಇಂಗ್ಲಿಷೇತರ ಭಾಷಾ ಬಳಕೆಯಲ್ಲಿಯೂ ಸಹ ಸದೃಢಗೊಂಡಿವೆ. ಅಂತಹ ಸದೃಢತೆಯನ್ನು ವಿದ್ಯುನ್ಮಾನ ಉಪಕರಣಗಳಿಗೆ ತುಂಬುವಲ್ಲಿ ತಂತ್ರಾಂಶ ಸಂಶೋಧಕರು ಮತ್ತು ಆಭಿವೃದ್ಧಿಗಾರರು ಎದುರಿಸಿದ ತಂತ್ರಜ್ಞಾನದ ಸವಾಲುಗಳೇನು? ಸ್ವಾರಸ್ಯಗಳೇನು? ಬಳಕೆದಾರರು ಎದುರಿಸಿರುವ, ಇನ್ನೂ ಎದುರಿಸುತ್ತಲೇ ಇರುವ ಭಾಷೆಗೆ ಸಂಬಂಧಿಸಿದ, ಲಿಪಿಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳೇನು? ಅಂತಹ ಸಮಸ್ಯೆಗಳಿಗೆ ಪರಿಹಾರಗಳೇನು? ಡಿಜಿಟಲ್ ಲೋಕದಲ್ಲಿ ಕನ್ನಡ ಬಳಕೆಯ ಕುರಿತಾಗಿ ತಂತ್ರಜ್ಞಾನದ ಸಮಸ್ಯೆಗಳು ಪರಿಹಾರಗೊಂಡಿವೆ ಎಂಬ ವಿಷಯ ವಿಚಾರಗಳು ಸಾರ್ವತ್ರಿಕವಾಗಿ ಎಲ್ಲರಿಗೂ ತಿಳಿದಿಲ್ಲ. ವಿವಿಧ ಉದ್ದೇಶಗಳಿಗಾಗಿ ಬಳಕೆಯಲ್ಲಿರುವ ತಂತ್ರಾಂಶಗಳಲ್ಲಿ ಈ ತಂತ್ರಜ್ಞಾನಗಳು ಸಮರ್ಥವಾಗಿ ಅಳವಡಿಸಿರದ ಕಾರಣ, ಬಳಕೆಯ ಚಿಕ್ಕಪುಟ್ಟ ತೊಡಕುಗಳಿವೆಯಷ್ಟೇ ಹೊರತು, ಅವು ಮಹಾನ್ ಸಮಸ್ಯೆಗಳೇನಲ್ಲ. ಅರಿವಿನ ಕೊರತೆಯನ್ನು ನೀಗಿಸಿಕೊಂಡರೆ ಚಿಕ್ಕಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ.

ವಿವಿಧ ರೀತಿಯ ಬಳಕೆದಾರರಿಗೆ ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆಗಾಗಿ ಕ್ರಮಬದ್ಧ ಶಿಕ್ಷಣ ಸೌಲಭ್ಯಗಳು, ಕೌಶಲಾಭಿವೃದ್ಧಿಯ ವ್ಯವಸ್ಥಿತ ತರಬೇತಿಗಳು ದುರ್ಲಭ. ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನವನ್ನು ತಿಳಿಸಿಕೊಡುವ ಸಾಹಿತ್ಯಕ್ಕಾಗಿ ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಅಂತರ್ಜಾಲದಲ್ಲಿ ಬಹಳಷ್ಟು ಮಾಹಿತಿಗಳು ಬಿಡಿಬಿಡಿಯಾಗಿ ಲಭ್ಯವಿದ್ದರೂ ಅದನ್ನು ಹುಡುಕಿ ಹೆಕ್ಕಿತೆಗೆಯುವುದು ಕೌಶಲ್ಯಕ್ಕೆ ಸಂಬಂಧಿಸಿದ ವಿಷಯ. ಡಿಜಿಟಲ್ ಕನ್ನಡದ ಸಮಗ್ರ ಮಾಹಿತಿಯು ಎಲ್ಲರಿಗೂ ಕೈಗೆಟಕುವಂತೆ ಒಂದೆಡೆ ಲಭ್ಯವಿಲ್ಲ.

ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆಯ ಸಮಸ್ಯೆಗಳ ಪರಿಹಾರಕ್ಕಾಗಿ ಇತಿಹಾಸದ ಪುಟಗಳನ್ನು ಹುಡುಕಾಡಬೇಕು. ಕಳೆದ ಜುಲೈನಿಂದ ಪ್ರಕಟವಾಗುತ್ತಿರುವ ‘ಡಿಜಿಟಲ್ ಕನ್ನಡ’ ಅಂಕಣದಲ್ಲಿನ ವಿಷಯ-ಮಾಹಿತಿಗಳಲ್ಲಿ ಕನ್ನಡ ತಂತ್ರಜ್ಞಾನ ಕುರಿತ ಇತಿಹಾಸವಿದೆ. ವಿಶ್ವಾದ್ಯಂತ ಇರುವ ಓದುಗರಿಗೂ ಲಭ್ಯವಾಗಲೆಂಬ ಸದುದ್ದೇಶದಿಂದ ಈ ಅಂಕಣಬರಹಗಳನ್ನು ವಾರ್ತಾಭಾರತಿಯ ನ್ಯೂಸ್-ಪೋರ್ಟಲ್‌ನಲ್ಲಿ http://www.varthabharati.in/article/suggi ಹಾಕಲಾಗಿದೆ. ಹಲವು ಕಾರಣದಿಂದಾಗಿ ಡಿಜಿಟಲ್ ಪಠ್ಯವನ್ನು ಶಾಶ್ವತವಾಗಿ ಜಾಲತಾಣದಲ್ಲಿ ಇರಿಸಲಾಗುವುದಿಲ್ಲ. ಕಾಲಾನಂತರದಲ್ಲಿ ಪ್ರಕಟಿತ ಬರಹವು ಅಲಭ್ಯವಾಗುತ್ತದೆ. ಈ ಅಂಕಣದ ಎಲ್ಲ ಬರಹಗಳು ಒಂದೆಡೆಗೆ ದೊರೆಯುವಂತೆ ಸರಳವಾದ ‘ಬ್ಲಾಗ್’ವೊಂದನ್ನು ಈಗ ರಚಿಸಲಾಗಿದೆ. http://sathya digitalkannada.blogspot.in ನಲ್ಲಿ ಇದುವರೆಗಿನ 38 ಬರಹಗಳು ಲಭ್ಯ. ಮುಂಬರುವ ಲೇಖನಗಳೂ ಇದರಲ್ಲಿ ಸೇರ್ಪಡೆಗೊಳ್ಳಲಿವೆ. ವಿದ್ಯುನ್ಮಾನ ಉಪಕರಣಗಳಲ್ಲಿ ಕನ್ನಡ ಬಳಕೆ ಕುರಿತ ಈ ವೈವಿಧ್ಯಮಯ ಬರಹಗಳು ಹಲವು ವಿಷಯಗಳ ಮೇಲೆ ಬೆಳಕುಚೆಲ್ಲಿವೆ. ಈ ಬ್ಲಾಗ್-ವಿಳಾಸದ ಲಿಂಕ್‌ನ್ನು ಇ-ಮೇಲ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಬೇರೆಯವರಿಗೆ ಕಳುಹಿಸಿದರೆ ಅವರೂ ಸಹ ಈ ಬರಹಗಳನ್ನು ಅಂತರ್ಜಾಲದಲ್ಲಿಯೇ ಓದಬಹುದು. ಕನ್ನಡಕ್ಕೆ ಯೂನಿಕೋಡ್ ಏಕೆ ಬೇಕು ಎಂಬ ಪ್ರಶ್ನೆಗೆ ಕೆಲವು ಬರಹಗಳಲ್ಲಿ ಉತ್ತರಗಳಿವೆ. ಕನ್ನಡದ ಮುದ್ರಿತ ಲೇಖನದ ಫಾಂಟ್ ಮತ್ತು ಬ್ಲಾಗ್-ಪಠ್ಯದ ಫಾಂಟುಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಮುದ್ರಣಕ್ಕೆ ಬಳಸಿರುವುದು ‘ನುಡಿ’ ಹೆಸರಿನ ಆಸ್ಕಿ-ಫಾಂಟು. ಬ್ಲಾಗ್‌ನಲ್ಲಿ ಇರುವುದು ಯೂನಿಕೋಡ್ ಫಾಂಟ್. ಬ್ಲಾಗ್‌ನಲ್ಲಿ ‘‘ನುಡಿಯ ಆಸ್ಕಿ-ಫಾಂಟ್’’ ಬಳಸಿ ಟೈಪ್‌ಮಾಡಲಾದ ಬರಹವನ್ನು ನೇರವಾಗಿ ಕಾಪಿ-ಪೇಸ್ಟ್ ಮಾಡಿದರೆ, ಅದು ವಿಚಿತ್ರಲಿಪಿಯಾಗಿ ಕಂಡುಬರುತ್ತದೆ. ಪಠ್ಯವನ್ನು ಮತ್ತೊಮ್ಮೆ ಯೂನಿಕೋಡ್ ಫಾಂಟ್‌ನಲ್ಲಿ ಟೈಪ್‌ಮಾಡುವ ಅಗತ್ಯವಿಲ್ಲ. ಆಸ್ಕಿ-ಫಾಂಟ್ ಪಠ್ಯವನ್ನು ಯೂನಿಕೋಡ್ ಫಾಂಟ್‌ಗೆ ಪರಿವರ್ತನೆ ಮಾಡಿದರೆ ಸಾಕು. ಇಂತಹ ಪರಿವರ್ತನೆಯನ್ನು ಪಠ್ಯದ ‘ಟ್ರಾನ್ಸ್‌ಕೋಡಿಂಗ್’ ಎಂದು ಕರೆಯಲಾಗುತ್ತದೆ. ಮುದ್ರಣದ ಉದ್ದೇಶಕ್ಕಾಗಿ ಟೈಪ್‌ಮಾಡಲಾದ ಪಠ್ಯವು ಬೇರೆಬೇರೆ ಉದ್ದೇಶಗಳಿಗೆ ಉಪಯೋಗಕ್ಕೆ ಬರುವುದಿಲ್ಲ.

ವಿಶೇಷವಾಗಿ ಅಂತರ್ಜಾಲದಲ್ಲಿ ಅದೇ ಪಠ್ಯವನ್ನು ಬಳಸಬೇಕೆಂದರೆ ಅವುಗಳ ಹಳೆಯ ಕೋಡ್‌ಗಳನ್ನು ಹೊಸದಕ್ಕೆ ಬದಲಾಯಿಸಲೇಬೇಕು ಹಳೆಯದೆಂದರೆ ಆಸ್ಕಿ-ಕೋಡ್‌ಗಳು. ಹೊಸತು ಎಂದರೆ ಯೂನಿಕೋಡ್. ಉಚಿತ ಯೂನಿಕೋಡ್ ಪರಿವರ್ತಕಗಳು ಇಂಟರ್‌ನೆಟ್‌ನಲ್ಲಿ ದೊರೆಯುತ್ತವೆ. ನುಡಿಯ ಆಸ್ಕಿ-ಫಾಂಟುಗಳು ಕನ್ನಡದ ಅಕ್ಷರಭಾಗಗಳು, ಇವುಗಳ ಸಂಕೇತ ಸಂಖ್ಯೆಗಳು ಈಗಾಗಲೇ ಬೇರೆಬೇರೆ ಭಾಷೆಗಳಿಗೆ ನಿಗದಿಯಾಗಿದ್ದು, ಕನ್ನಡಕ್ಕೆ ಸ್ಥಾನಮೀಸಲು ಇಲ್ಲ. ಬೇರೆಬೇರೆ ಭಾಷೆಗಳ ಅಕ್ಷರಸ್ಥಾನಗಳಲ್ಲಿ ಕನ್ನಡದ ಅಕ್ಷರಗಳನ್ನು ಅಳವಡಿಸಿಕೊಂಡಿರುವ ಕಾರಣ ಇದನ್ನು ಸ್ಥಳೀಯ ಶಿಷ್ಟತೆ ಎಂದು ಪರಿಗಣಿಸಬಹುದು. ಯೂನಿಕೋಡ್ ಎಂಬುದು ಜಾಗತಿಕ ಶಿಷ್ಟತೆಯಾಗಿದೆ. ಇದರಲ್ಲಿ ಕನ್ನಡಕ್ಕೆ ಪ್ರತ್ಯೇಕ ಕೋಡ್‌ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ. ‘ನುಡಿ’ ಎಂಬುದು ಒಂದು ಲಿಪಿತಂತ್ರಾಂಶ. ಅದರಲ್ಲಿ ಈಗ ಆಸ್ಕಿ-ಫಾಂಟುಗಳೂ ಇವೆ ಮತ್ತು ಯೂನಿಕೋಡ್ ಫಾಂಟುಗಳೂ ಇವೆ. ಯೂನಿಕೋಡ್ ಎಂಬುದು ತಂತ್ರಾಂಶವಲ್ಲ ಅದೊಂದು ಶಿಷ್ಟತೆ. (ಸ್ಟಾಂಡರ್ಡ್) ಇಲ್ಲಿ ಬೇರೆ ಬೇರೆ ಭಾಷೆಯ ಅಕ್ಷರಗಳ ಸ್ಥಾನದಲ್ಲಿ ಕನ್ನಡವು ಕುಳಿತಿಲ್ಲ, ಬದಲಾಗಿ ವಿದ್ಯುನ್ಮಾನ ಉಪಕರಣಗಳಲ್ಲಿ ವಿಶ್ವಭಾಷೆಗಳಂತೆ ಕನ್ನಡವೂ ಸಹ ತನ್ನದೇ ಆದ ಸ್ಥಾನಮಾನಗಳನ್ನು ಯೂನಿಕೋಡ್ ಮೂಲಕ ಗಳಿಸಿಕೊಂಡಿದೆ. ಸ್ಥಳೀಯ ಶಿಷ್ಟತೆಯು ಮುದ್ರಣ ಮಾಧ್ಯಮಕ್ಕೆ ಸ್ಥಳೀಯವಾಗಿ ಮಾತ್ರವೇ ಉಪಯೋಗಕ್ಕೆ ಬರುತ್ತಿದೆಯೇ ಹೊರತು ಜಾಗತಿಕವಾಗಿ ಅಂತರ್ಜಾಲದಲ್ಲಿ ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯುಳ್ಳ ಫಾಂಟುಗಳು ಅತ್ಯಗತ್ಯ. ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಯಿತು ಎಂಬುದು ಹಳೆಯ ಗಾದೆ. ಈಗ ಯೂನಿಕೋಡ್ ಬಂದು ಆಸ್ಕಿಯನ್ನು ಕೊಚ್ಚಿಕೊಂಡು ಹೋಗಿದೆ. ಇದು ಒಳ್ಳೆಯದಕ್ಕೆ ಅಗಿರುವ ಬದಲಾವಣೆ. ಸ್ಥಳೀಯವಾಗಿ ಇದು ಕನ್ನಡ ಎಂದು ಕಂಪ್ಯೂಟರಿಗೆ ಪ್ರತ್ಯೇಕವಾಗಿ ತಿಳಿಹೇಳಿದರೆ ಮಾತ್ರವೇ ಗುರುತಿಸಲ್ಪಡುತ್ತಿದ್ದ ಪಠ್ಯವು ಯೂನಿಕೋಡ್‌ನಿಂದಾಗಿ ಜಾಗತಿಕವಾಗಿ ಈಗ ಗುರುತಿಸಲ್ಪಡುತ್ತದೆ. ತಾಂತ್ರಿಕವಾಗಿ ಹೇಳಬೇಕೆಂದರೆ ಯೂನಿಕೋಡ್ ಪಠ್ಯಮಾಹಿತಿಗಳು ಎಂದಿಗೂ ಹಳತಾಗುವುದಿಲ್ಲ. ಬರಹ, ನುಡಿ, ಕುವೆಂಪು ತಂತ್ರಾಂಶ ಇತ್ಯಾದಿಗಳಲ್ಲಿನ ಆಸ್ಕಿ-ಫಾಂಟ್‌ಗಳನ್ನು ಬಳಸಿ ಟೈಪ್ ಮಾಡಲಾದ ಕನ್ನಡ ಪಠ್ಯವನ್ನು ಈಗಾಗಲೇ ಜಾಲತಾಣಗಳಲ್ಲಿ ಅಳವಡಿಸಿದ್ದರೆ, ಅಂತಹ ಪಠ್ಯವನ್ನು ಗೂಗಲ್ ಸರ್ಚ್‌ನಲ್ಲಿ ಸುಲಭವಾಗಿ ಹುಡುಕಲಾಗುವುದಿಲ್ಲ. ಆಧುನಿಕ ಸರ್ಚ್ ಇಂಜಿನ್‌ಗಳು ಯೂನಿಕೋಡ್‌ನ್ನು ಬೆಂಬಲಿಸುವ ಕಾರಣ, ಕನ್ನಡ ಪಠ್ಯವು ಯೂನಿಕೋಡ್ ಫಾಂಟ್‌ನಲ್ಲಿದ್ದರೆ ಹುಡುಕುವುದು ಸುಲಭ. ಯೂನಿಕೋಡ್‌ನಿಂದಾಗಿ ಕನ್ನಡದ ವಿಚಿತ್ರಲಿಪಿಗಳ ಸಮಸ್ಯೆ ಪರಿಹಾರವಾಗಿದೆ.

ಕಾರ್ಯಾಚರಣೆ ವ್ಯವಸ್ಥೆಯ ಹಂತದಲ್ಲಿಯೇ ಕಂಪ್ಯೂಟರ್ ಕನ್ನಡವನ್ನು ಗುರುತಿಸುತ್ತದೆ. ಹೀಗಾಗಿ, ಯಾವುದೇ ಅಪ್ಲಿಕೇಷನ್ ತಂತ್ರಾಂಶಗಳಲ್ಲಿ ಇಂಗ್ಲಿಷ್‌ನಷ್ಟೇ ಸುಲಭವಾಗಿ ಕನ್ನಡವನ್ನು ಸಹ ನೇರವಾಗಿ ಬಳಸಬಹುದು. ಹಿಂದೆ ಕಾರ್ಯತಂತ್ರ ಬಳಸಿ ಕನ್ನಡವನ್ನು ಅಳವಡಿಸಲಾಗಿತ್ತು. ಆಸ್ಕಿ-ಫಾಂಟುಗಳು ಆ ಕಾಲಕ್ಕೆ ಸ್ಥಳೀಯವಾಗಿ ಅನುಕೂಲವಾಗಿದ್ದವು. ಈಗ ಆಸ್ಕಿ ಶಿಷ್ಟತೆಯೇ ಹಳತಾಗಿದೆ. ಹಿಂದೆ ಕನ್ನಡವನ್ನು ಒ.ಎಸ್.ಗಳು ಗುರುತಿಸುತ್ತಿರಲಿಲ್ಲ. ಈಗ ಯೂನಿಕೋಡ್ ಫಾಂಟ್‌ಗಳು ಬಳಕೆಗೆ ಬಂದ ನಂತರ ಕನ್ನಡವನ್ನು ಸಮಗ್ರವಾಗಿ ಕಂಪ್ಯೂಟರ್‌ನಲ್ಲಿ ಬಳಸಲು ಹಿಂದೆ ಇದ್ದ ಬಹುತೇಕ ತಂತ್ರಜ್ಞಾನದ ಸಮಸ್ಯೆಗಳು ಪರಿಹಾರಗೊಂಡಿವೆ. ಇಂದು ಡೇಟಾಬೇಸ್ ಅಪ್ಲಿಕೇಷನ್‌ಗಳಲ್ಲಿಯೂ ಸಹ ಕನ್ನಡದ ಪಠ್ಯವನ್ನು ಸುಲಭವಾಗಿ ಬಳಸಲು ಸಾಧ್ಯವಾಗಿದೆ. ಕನ್ನಡದ ಮಾಹಿತಿಯನ್ನು ಅಕಾರಾದಿಯಲ್ಲಿ ನೇರವಾಗಿ ವಿಂಗಡಿಸಿಕೊಳ್ಳುವ ಸೌಲಭ್ಯ ದೊರೆತಿದೆ. ಮೊದಲು ಆಸ್ಕಿ-ಫಾಂಟುಗಳಿದ್ದಾಗ ಇಂತಹ ವಿಂಗಡಣೆಗಾಗಿ ಸುತ್ತುಬಳಸು ಮಾರ್ಗಗಳನ್ನು ಅನುಸರಿಸಬೇಕಾಗಿತ್ತು. ಆಸ್ಕಿ-ಫಾಂಟುಗಳು ಕನ್ನಡಪಠ್ಯ ಅಂತರ್ಜಾಲದಲ್ಲಿ ವಿಚಿತ್ರಲಿಪಿಗಳಾಗಿ ಕಾಣಿಸಿಕೊಳ್ಳುತ್ತಿತ್ತು. ಯೂನಿಕೋಡ್‌ನಿಂದಾಗಿ ಕನ್ನಡದಲ್ಲಿಯೇ ಜಾಲತಾಣಗಳನ್ನು (ವೆಬ್‌ಸೈಟ್) ನಿರ್ಮಿಸುವ ಸೌಲಭ್ಯ ದೊರೆತಿದೆ. ಬ್ಲಾಗ್, ಇ-ಮೇಯ್ಲಾ ಮತ್ತು ಚಾಟಿಂಗ್‌ಗಳಲ್ಲಿ ಕನ್ನಡ ಭಾಷೆಯನ್ನು ಹಾಸುಹೊಕ್ಕಾಗಿ ಬಳಸಲಾಗುತ್ತಿದೆ. ಒ.ಎಸ್.ಮಟ್ಟದಲ್ಲಿಯೇ ಕನ್ನಡಲಿಪಿ ಬೆಂಬಲ ದೊರೆತಿರುವು ದರಿಂದ ಈಗ ಪ್ರತ್ಯೇಕ ಕನ್ನಡದ ಲಿಪಿತಂತ್ರಾಂಶಗಳನ್ನು ಅಳವಡಿಸುವ ಆವಶ್ಯಕತೆಯೇ ಇಲ್ಲ. ತಂತ್ರಾಂಶಗಳಲ್ಲಿ ಅಥವಾ ಯೂನಿಕೋಡ್ ಫಾಂಟುಗಳ ಬಳಕೆಯಲ್ಲಿ ಸಮಸ್ಯೆಗಳಿದ್ದರೆ ಅವುಗಳು ಯೂನಿಕೋಡ್‌ನ ಅನುಷ್ಠಾನದ ಚಿಕ್ಕಪುಟ್ಟ ತೊಡಕುಗಳಷ್ಟೆ. ಅವುಗಳನ್ನು ಆಯಾಯ ತಂತ್ರಾಂಶ ತಯಾರಕ ಗಮನಕ್ಕೆ ತಂದು ಸರಿಪಡಿಸುವಂತೆ ವಿನಂತಿಸಬಹುದು ಅಷ್ಟೇ.

Writer - ಡಾ. ಎ. ಸತ್ಯನಾರಾಯಣ

contributor

Editor - ಡಾ. ಎ. ಸತ್ಯನಾರಾಯಣ

contributor

Similar News