ಯು.ಟಿ.ಖಾದರ್, ರಮಾನಾಥ ರೈ ‘ಭಯೋತ್ಪಾದಕರು’: ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ

Update: 2018-03-10 14:17 GMT

ಬೆಂಗಳೂರು, ಮಾ. 10: ‘ಆಹಾರ ಸಚಿವ ಯು.ಟಿ.ಖಾದರ್ ಮತ್ತು ಅರಣ್ಯ ಸಚಿವ ರಮಾನಾಥ್ ರೈ ಅವರು ಯಾವ ಭಯೋತ್ಪಾದಕರಿಗೂ(ಟೆರೆರಿಸ್ಟ್) ಕಡಿಮೆ ಇಲ್ಲ. ಇವರನ್ನು ನೋಡಿದರೆ ಕರಾವಳಿ ಕರ್ನಾಟಕ ಹೇಗಿದೆ ಎಂಬುದು ಗೊತ್ತಾಗುತ್ತದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಶನಿವಾರ ಮಲ್ಲೇಶ್ವರಂನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕರ್ನಾಟಕ ಹೇಗಿದೆ ಎಂದರೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅವರು ಡಿವೈಎಸ್ಪಿಯನ್ನೇ ಹತ್ಯೆ ಮಾಡಿದವರು’ ಎಂದು ದೂರಿದರು.

ಉತ್ತರ ಕರ್ನಾಟಕ ಹೇಗಿದೆ ಎಂದರೆ, ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ ನೋಡಿದರೆ ಗೊತ್ತಾಗುತ್ತದೆ. ಅವರು ಹೇಗೆ ಗೂಂಡಾಗಿರಿ ಮಾಡುತ್ತಾರೋ, ಆವಾಜ್ ಹಾಕುತ್ತಾರೋ ಅದರಲ್ಲೇ ಉತ್ತರ ಕರ್ನಾಟಕದ ಸ್ಥಿತಿ ತಿಳಿಯುತ್ತದೆ ಎಂದು ಹೇಳಿದರು.

ಉಸ್ತುವಾರಿ ಮುರಳೀಧರ್‌ರಾವ್ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆಯೆ ಹಲ್ಲೆಯಾಗಿದೆ ಎಂದರೆ ಸಿದ್ದರಾಮಯ್ಯ ಒಬ್ಬ ಅಸಹಾಯಕ ಮುಖ್ಯಮಂತ್ರಿ. ಅವರು ಆಸ್ಪತ್ರೆಗೆ ಹೋಗಿ ಸಾಂತ್ವನ ಹೇಳುವುದಕಷ್ಟೇ ಸೀಮಿತ’ ಎಂದು ಟೀಕಿಸಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಯಾವುದೇ ಪ್ರಕರಣ ನಡೆದರೂ ಸಿದ್ಧಪಡಿಸಿದ ಹೇಳಿಕೆಯನ್ನು ಪುನರುಚ್ಚರಿಸುತ್ತಾರೆ. ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ಘಟಿಸುತ್ತಲೇ ಇವೆ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ಸ್ವತಃ ಸಿದ್ದರಾಮಯ್ಯ ಅವರೇ ಸಹಾಯ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಬೆಂಗಳೂರಿನವರಲ್ಲ. ಅವರು ಇಲ್ಲಿ ಸೋತರೆ ಮೈಸೂರಿನ ಸಿದ್ದರಾಮನಹುಂಡಿಗೆ ಹೋಗುತ್ತಾರೆ. ಇವರಿಗೆ ಬೆಂಗಳೂರು ಬೇಕಿರುವುದು ಕೇವಲ ಎಟಿಎಂಗಾಗಿ. ಹೀಗಾಗಿ ವೈಟ್‌ಟಾಪಿಂಗ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News